






ಸರಕಾರ ನಿಗದಿಮಾಡಿದ ಮಜೂರಿ ಕಾರ್ಮಿಕರಿಗೆ ಸಿಗಲೇಬೇಕು ಇದರಲ್ಲಿ ರಾಜಿಯೇ ಇಲ್ಲ: ಶಾಸಕ ಅಶೋಕ್ ರೈ


ಪುತ್ತೂರು: ಯಾರೆಲ್ಲಾ ಬೀಡಿ ಕಟ್ಟುತ್ತಾರೋ ಅವರಿಗೆ ಸಿಗಬೇಕಾದ ಸರಕಾರ ನಿಗದಿ ಮಾಡಿದ ಮಜೂರಿ ಕೊಡಲೇಬೇಕು ಅದರಲ್ಲಿ ಯಾವುದೇ ರಾಜಿಯಿಲ್ಲ, ಸರಕಾರ ಎಷ್ಟು ನಿಗದಿ ಮಾಡಿದೆಯೋ ಅದನ್ನು ಬೀಡಿ ಕಂಪನಿದಾರರು ನಿಮಗೆ ಕೊಡುತ್ತಾರೆ ಅದನ್ನು ಪ್ರತೀಯೊಬ್ಬ ಬೀಡಿ ಕಾರ್ಮಿಕರಿಗೂ ಸಿಗಬೇಕು ಎಲ್ಲಾ ಕಡೆ ಒಂದೇ ರೀತಿ ಮಜೂರಿ ಸಿಗಬೇಕು ಈ ವಿಚಾರದಲ್ಲಿ ನಾನು ಯಾವುದೇ ರಾಜಿಯಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಮೇ.25ರಂದು ತಮ್ಮ ಕಚೇರಿಯಲ್ಲಿ ನಡೆದ ಬೀಡಿ ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದರು.



ಕಳೆದ ವಾರ ಬೀಡಿ ಕಂಪೆನಿ ಮಾಲಕರ ಜೊತೆ ಸಭೆ ನಡೆಸಿದ್ದ ಶಾಸಕರು ಸರಕಾರ ನಿಗದಿ ಮಾಡಿದ ಮಜೂರಿಯನ್ನು ಗುತ್ತಿಗೆದಾರರಿಗೆ ಕಂಪೆನಿ ನೀಡಬೇಕು ಕಂಪೆನಿ ನೀಡಿದರೆ ಅದನ್ನು ಗುತ್ತಿಗೆದಾರ ಕಾರ್ಮಿಕರಿಗೆ ನೀಡಬೇಕು ಎಂದು ಸೂಚನೆ ನೀಡಿದ್ದರು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಬೀಡಿ ಗುತ್ತಿಗೆದಾರರು ಶಾಸಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಗುತ್ತಿಗೆದಾರರು ತಮ್ಮ ವಿಚಾರವನ್ನು ಶಾಸಕರ ಮುಂದಿಟ್ಟರು.
ಬೀಡಿ ಗುತ್ತಿಗೆದಾರರ ಪರವಾಗಿ ಮಾತನಾಡಿದ ಗುತ್ತಿಗೆದಾರ ಸಂಪ್ಯ ಜಲೀಲ್, ಸಂಜೀವ ಪೂಜಾರಿ ಕೂರೇಲು ರವರು “ ಬೀಡಿ ಕಂಪೆನಿಯವರು ಸರಕಾರ ನಿಗದಿ ಮಾಡಿದ ಮಜೂರಿಯನ್ನು ನಮಗೆ ನೀಡಿದ್ದಲ್ಲಿ ನಾವು ಕಾರ್ಮಿಕರಿಗೆ ನೀಡುತ್ತೇವೆ ನಮ್ಮದೇನು ಅಭ್ಯಂತರವಿಲ್ಲ, ಕಂಪನಿ ಎಷ್ಟು ಕೆಲಸ ಕೊಡುತ್ತೋ ಅದಕ್ಕೆ ನಾವು ಸಿದ್ದರಾಗಿದ್ದೇವೆ, ಕಾರ್ಮಿಕರಿಗೆ ಹೆಚ್ಚು ಕೆಲಸ ಕೊಡಬೇಕಾದರೆ ಕಂಪನಿ ನಮಗೆ ಸೂಚಿಸಬೇಕು ಕಂಪೆನಿ ಸಹಕಾರವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಬೀಡಿ ಗುತ್ತಿಗೆದಾರರ ಕಮಿಷನ್ ಕೂಡಾ ಕಂಪೆನಿ ಹೆಚ್ಚು ಮಾಡಬೇಕು ಎಂದು ಶಾಸಕರಲ್ಲಿ ಗುತ್ತಿಗೆದಾರರ ಪರವಾಗಿ ಮನವಿ ಮಾಡಿದರು.
ಪಶ್ಚಿಮ ಬಂಗಾಳದಿಂದ ಬೀಡಿ ಬರುತ್ತಿದೆ
ಪಶ್ಚಿಮ ಬಂಗಾಳದಿಂದ ವಾರಕ್ಕೆ ಎರಡು ಕೋಟಿ ಬೀಡಿ ಜಿಲ್ಲೆಗೆ ಬರುತ್ತಿದೆ, ಅಲ್ಲಿ ಬೀಡಿ ಮಜೂರಿ ಕಮ್ಮಿ ಇದೆ ಈ ಕಾರಣಕ್ಕೆ ಅಲ್ಲಿಂದ ಬೀಡಿ ಖರೀದಿ ಮಾಡಿ ಇಲ್ಲಿಗೆ ತಂದು ಇಲ್ಲಿ ಲೇಬಲ್ ಮಾಡಲಾಗುತ್ತದೆ. ಅಲ್ಲಿಂದ ಬೀಡಿ ಬಂದರೆ ಇಲ್ಲಿನ ಬೇಡಿಕೆ ಕಮ್ಮಿಯಾದರೆ ಕಾರ್ಮಿಕರಿಗೆ ಕೆಲಸ ಕೊಡಿಸಲು ಕಷ್ಟವಾಗಬಹುದು. ಈ ಬಗ್ಗೆ ಕಂಪನಿಗೆ ಹೊರ ರಾಜ್ಯದಿಂದ ಬೀಡಿ ಖರೀದಿ ಮಾಡದಂತೆ ಸೂಚನೆಯನ್ನು ನೀಡಬೇಕು. ನಮ್ಮ ಕಾರ್ಮಿಕರಿಗೆ ತೊಂದರೆಯಾಗುವ ಯಾವುದೇ ಕ್ರಮಕ್ಕೂ ನಮ್ಮ ವಿರೋಧವಿದೆ ಎಂದು ಗುತ್ತಿಗೆದಾರರು ಶಾಸಕರಲ್ಲಿ ತಿಳಿಸಿದರು.
ಬೀಡಿ ಕಾರ್ಮಿಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಳೆದ ವಾರ ಬೀಡಿ ಕಂಪೆನಿದಾರರ ಸಭೆ ನಡೆಸಿ ಒಂದಷ್ಟು ಸೂಚನೆ ನೀಡಿದ್ದೆ, ಈಗ ಬೀಡಿ ಗತ್ತಿಗೆದಾರರನ್ನು ಕರೆಸಿ ಸಭೆ ನಡೆಸಿದ್ದೇನೆ, ಎರಡೂ ಸಭೆಯ ಉದ್ದೇಶವೊಂದೇ ನಮ್ಮ ಬೀಡಿ ಕಾರ್ಮಿಕರಿಗೆ ಸರಕಾರ ನಿಗದಿ ಮಾಡಿದ ಮಜೂರಿ, ಬೋನಸ್ ಸಿಗಬೇಕು. ಹೆಚ್ಚು ಕೆಲಸ ಕೊಡಬೇಕು, ಮಳೆಗಾಲದಲ್ಲಿ ಕಡಿಮೆ ಕೆಲಸ ಕೊಡಬಾರದು, ಕಾರ್ಮಿಕರ ನ್ಯಾಯಕ್ಕಾಗಿ ಇನ್ನು ಮುಂದೆಯೂ ಸಭೆಗಳನ್ನು ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
ಅಶೋಕ್ ರೈ ಶಾಸಕರು ಪುತ್ತೂರು










