ಬನ್ನೂರು: ಘನತ್ಯಾಜ್ಯ ಘಟಕದ ಪಕ್ಕ ರಸ್ತೆ ಬದಿಯೇ ತ್ಯಾಜ್ಯಗಳ ರಾಶಿ..! ಕಸ ಸಾಗಾಟದ ಲಾರಿ ತಡೆದು ಸ್ಥಳೀಯರ ಪ್ರತಿಭಟನೆ – 3 ದಿನದೊಳಗೆ ತೆರವಿನ ಭರವಸೆ

0

ಪುತ್ತೂರು: ವೈಜ್ಞಾನಿಕ ಘನತ್ಯಾಜ್ಯ ಸಂಸ್ಕರಣ ಘಟಕದ ಪಕ್ಕ, ದೈವಸ್ಥಾನಕ್ಕೆ ಹೋಗುವ ದಾರಿಯಲ್ಲೇ ತ್ಯಾಜ್ಯ ರಾಶಿ ಹಾಕಿರುವುದರಿಂದ ಆಕ್ರೋಶಗೊಂಡ ಸ್ಥಳೀಯರು ತ್ಯಾಜ್ಯ ಸಾಗಾಟದ ಲಾರಿ ತಡೆದು ಪ್ರತಿಭಟನೆ ನಡೆಸಿದ ಘಟನೆ ಮೇ 25ರಂದು ಬನ್ನೂರು ಡಂಪಿಂಗ್ ಯಾರ್ಡ್ ಬಳಿ ನಡೆದಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತರು ಮೂರು ದಿನದೊಳಗೆ ದಾರಿಯಲ್ಲಿರುವ ತ್ಯಾಜ್ಯ ತೆರವುಗೊಳಿಸುವ ಭರವಸೆ ನೀಡಿದರು.


ಕಳೆದ 6 ತಿಂಗಳಿನಿಂದ ಈ ಭಾಗದಲ್ಲಿ ಹಲವರ ಮನೆಗಳಿಗೆ, ನಾಗರಕ್ತೇಶ್ವರಿ ದೈವಸ್ಥಾನಕ್ಕೆ ಹೋಗುವ ದಾರಿಯಲ್ಲಿ ತ್ಯಾಜ್ಯಗಳ ರಾಶಿ ಹಾಕಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಘನತ್ಯಾಜ್ಯ ಘಟಕದಲ್ಲಿನ ತ್ಯಾಜ್ಯವನ್ನು ಸಿಮೆಂಟ್ -ಕ್ಟರಿಗೆ ಸಾಗಾಟ ಮಾಡುವ ಕೆಲಸ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಘನವಾಹನ ಘಟಕಕ್ಕೆ ತೆರಳಲು ತೊಂದರೆಯಾಗುತ್ತಿದುದರಿಂದ ತ್ಯಾಜ್ಯಗಳನ್ನು ಸಾರ್ವಜನಿಕ ಸರಕಾರಿ ಸ್ಥಳದಲ್ಲೇ ಹಾಕಲಾಗಿತ್ತು. ಇದು ಸ್ಥಳೀಯ ಮನೆಗಳಿಗೆ, ದೈವಸ್ಥಾನಕ್ಕೆ ಹೋಗುವ ದಾರಿಯಾದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ತ್ಯಾಜ್ಯ ಸಾಗಾಟದ ಲಾರಿ ತಡೆದು ತ್ಯಾಜ್ಯ ತೆರವು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತರು ಮೂರು ದಿನದೊಳಗೆ ತ್ಯಾಜ್ಯ ತೆರವುಗೊಳಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.


ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಕದಲುವುದಿಲ್ಲ:
ಸ್ಥಳೀಯರಾದ ಕಾರ್ತಿಕ್ ಕುಲಾಲ್ ನೆಕ್ಕಿಲ ಮಾತನಾಡಿ, ಕಳೆದ ಆರು ತಿಂಗಳಿನಿಂದ ಘಟಕದ ಹೊರಭಾಗದಲ್ಲಿ ಕಸ ಹಾಕುತ್ತಿದ್ದಾರೆ. ಈ ಕುರಿತು ನಗರಸಭೆ ಪೌರಾಯುಕ್ತರಿಗೆ ನಾವು ದೂರು ನೀಡಿದ್ದೇವೆ. ಅವರು ಘಟಕದ ಒಳಗಿನ ಯಾವುದೇ ಕಸವನ್ನು ಹೊರಗಡೆ ಹಾಕುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದರೆ ಮತ್ತೆ ಘಟಕದ ಒಳಗಿನಿಂದ ಕಸವನ್ನು ಹೊರಗೆ ತಂದು ಸುರಿಯುತ್ತಿದ್ದಾರೆ. ಇನ್ನು ಮಳೆ ಬಂದರೆ ಅದು ಪೂರ್ತಿಯಾಗಿ ನೀರಿನಲ್ಲಿ ಕರಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ. ಇದಲ್ಲದೆ ಖಾಸಗಿ ಲಾರಿಗಳಲ್ಲಿ ರಾಜ ಕಾಲುವೆಯಿಂದ ತಂದಿರುವ ತ್ಯಾಜ್ಯಗಳನ್ನೂ ಕೂಡಾ ಇಲ್ಲೇ ಸುರಿದು ಹೋಗುತ್ತಿದ್ದಾರೆ. ಈ ಕುರಿತು ನಗರಸಭೆ ಇಂಜಿನಿಯರ್ ಅವರಲ್ಲಿ ಮಾತನಾಡಿದರೆ ಅವರು ನಮ್ಮನ್ನೆ ಗದರಿಸಿ ನಿಮಗೆ ಆಗುವುದಾದರೆ ಪೊಲೀಸ್ ದೂರು ನೀಡಿ ಎಂದು ಹಾರಿಕೆಯ ಉತ್ತರ ಕೊಡುತ್ತಿದ್ದಾರೆ. ಇಲ್ಲಿನ ಸಮಸ್ಯೆ ಗೊತ್ತಾಗಬೇಕಾದರೆ ಅಽಕಾರಿಗಳು ಎಸಿ ರೂಮ್‌ನಲ್ಲಿ ಕುಳಿತುಕೊಳ್ಳದೇ ಜನ ಸಾಮಾನ್ಯರೊಂದಿಗೆ ಬೆರೆತು ನೋಡಲಿ. ಯಾವುದೋ ಒಂದು ಖಾಸಗಿ ವಾಹನದಲ್ಲಿ ತಂದು ಇಲ್ಲಿ ಕಸ ಸುರಿಯುತ್ತಾರೆ ಎಂದಾದರೆ ನಗರಸಭೆಗೆ ಇದರ ಬಗ್ಗೆ ಜವಾಬ್ದಾರಿ ಇಲ್ಲವಾ ಎಂದು ಪ್ರಶ್ನಿಸಿದ ಅವರು ನಗರಸಭೆ ಅಧಿಕಾರಿಗಳು ಬರುವ ತನಕ ಇಲ್ಲಿಂದ ಕದಲುವುದಿಲ್ಲ. ಸಂಸ್ಕರಣಾ ಘಟಕಕ್ಕೆ ಹೋಗುವ ವಾಹನವನ್ನು ತಡೆಯುತ್ತೇವೆ ಎಂದು ಪಟ್ಟು ಹಿಡಿದರು.


ಸ್ವಚ್ಛ ಭಾರತ ಕನಸು ಕನಸಾಗಿಯೇ ಉಳಿದಿದೆ:
ನಗರಸಭೆ ನಿಕಟಪೂರ್ವ ಸ್ಥಳೀಯ ಸದಸ್ಯೆ ಗೌರಿ ಬನ್ನೂರು ಮಾತನಾಡಿ, ನಗರಸಭೆ ಘನತ್ಯಾಜ್ಯ ಸಂಸ್ಕರಣಾ ಘಟಕದಿಂದ ಈ ಭಾಗದ ಜನರು ಬಹಳಷ್ಟು ನೋವು ಅನುಭವಿಸುತ್ತಿದ್ದಾರೆ. ಇತ್ತೀಚಿನ ಮೂರ‍್ನಾಲ್ಕು ತಿಂಗಳಲ್ಲಿ ಘಟಕದ ಹೊರಗಡೆ ಬೇಕಾ ಬಿಟ್ಟಿ ಕಸಗಳನ್ನು ರಾಶಿ ಹಾಕುತ್ತಿದ್ದಾರೆ. ನಗರಸಭೆ ರಾಜಕಾಲುವೆಯ ತ್ಯಾಜ್ಯವನ್ನೂ ಕೂಡಾ ಇಲ್ಲೇ ಹಾಕುತ್ತಿದ್ದಾರೆ. ಈ ತ್ಯಾಜ್ಯವನ್ನು ಕಾಗೆಗಳು ಸ್ಥಳೀಯರ ಮನೆಯಂಗಳಕ್ಕೆ ತಂದು ಹಾಕಿ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತಿವೆ. ನಗರಸಭೆಯ ಅಧ್ಯಕ್ಷರಾಗಿ ಈಗ ಜಿಲ್ಲಾಽಕಾರಿಗಳಿದ್ದಾರೆ. ಈಗಾಲೇ ಎಲ್ಲಾ ಮನವಿ ನೀಡಲಾಗಿದೆ. ಆದರೆ ಮನವಿಗೆ ಯಾವುದೇ ಸ್ಪಂದನೆಯಿಲ್ಲ. ಸ್ವಚ್ಛಭಾರತ ಅನ್ನುವ ಕನಸು ಇಲ್ಲಿ ಕನಸಾಗಿಯೇ ಉಳಿದಿದೆ. ಅಽಕಾರಿಗಳು ಇತ್ತ ಕಡೆ ಗಮನಿಸಬೇಕೆಂದು ಆಗ್ರಹಿಸಿದರು.

ಸಿಮೆಂಟ್ ಫ್ಯಾಕ್ಟರಿಗೆ ಹೋಗುವ ಒಣಕಸ
ಘನ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿನ ಒಣಕಸಗಳನ್ನು ಸಿಮೆಂಟ್ ಫ್ಯಾಕ್ಟರಿಗೆ ಬಳಸುವ ನಿಟ್ಟಿನಲ್ಲಿ ಟೆಂಡರ್ ಮೂಲಕ ಎಮ್‌ಎಸ್‌ಜಿಪಿ ಸಂಸ್ಥೆಯವರು ಪಡೆದು ಸಾಗಾಟ ಮಾಡುತ್ತಿದ್ದಾರೆ. ಘನ ವಾಹನಕ್ಕೆ ತುಂಬಿಸಲು ಕಸವನ್ನು ಹೊರಗೆ ರಾಶಿ ಹಾಕಲಾಗಿದೆ. ಅದಕ್ಕೆ ಟರ್ಪಾಲು ಕೂಡ ಹೊದಿಸಲಾಗಿತ್ತು. ಗಾಳಿ ಮಳೆಗೆ ಅದು ತೆರವಾಗಿ ಸಮಸ್ಯೆ ಎದುರಾಗಿದೆ. ಆದರೆ ಮೂರು ದಿನದೊಳಗೆ ಎಲ್ಲಾ ಕಸವನ್ನು ತೆರವು ಮಾಡುವುದಾಗಿ ಸೈಟ್ ಇನ್‌ಚಾರ್ಜ್ ಪ್ರಜ್ವಲ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.


3 ದಿನದೊಳಗೆ ತೆರವು-ಪೌರಾಯುಕ್ತೆ
ನಗರಸಭೆಯ ಘನ ತ್ಯಾಜ್ಯ ಸಂಸ್ಕರಣಾ ಘಟಕದ ಬಳಿ ಖಾಸಗಿಯವರು ಕಸ ಹಾಕಿದ್ದಾರೆ. ಈ ಕುರಿತು ಸ್ಥಳೀಯರಿಂದ ವಿಡಿಯೋ ದಾಖಲೆ ಪಡೆದು ನಗರಸಭೆಯಿಂದಲೇ ಪೊಲೀಸರಿಗೆ ದೂರು ನೀಡಲಿದ್ದೇವೆ. ಜೊತೆಗೆ ಘಟಕದ ಕಡೆಯಿಂದಲೂ ಸಿಮೆಂಟ್ ಕಾರ್ಖಾನೆಗೆ ಹೋಗುವ ಒಣಕಸಗಳನ್ನು ತಾತ್ಕಾಲಿಕವಾಗಿ ಹೊರಗೆ ಹಾಕಲಾಗಿದ್ದು, ಅದನ್ನು ಮೂರು ದಿನದೊಳಗೆ ತೆರವು ಮಾಡಲಾಗುವುದು.
ವಿದ್ಯಾ ಎಂ. ಕಾಳೆ ಪೌರಾಯುಕ್ತರು ನಗರಸಭೆ


ಸ್ಥಳೀಯರಾದ ರಾಮಚಂದ್ರ ಭಟ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭ ಸ್ಥಳೀಯರಾದ ಹರೀಶ್ ಕುಲಾಲ್, ಬಾಲಚಂದ್ರ ಆಚಾರ್ಯ, ವಿಜಿತ್ ಗೌಡ ಬನ್ನೂರು, ವಿಜಯ ಗೌಡ ಬನ್ನೂರು, ವಿಠಲ್ ಹೆಗ್ಡೆ, ಹೇಮಲತಾ ಹೆಗ್ಡೆ, ಅಮಿತಾ, ಮಹಾಬಲ ಪೂಜಾರಿ, ಭಾಗೀರಥಿ, ರಾಜೇಂದ್ರ ಹೆಗ್ಡೆ, ಹೇಮಲತಾ, ಬಾಲಕೃಷ್ಣ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here