






ಪುತ್ತೂರು: ಮಂಗಳೂರಿನ ಖಾಸಗಿ ಟಿ.ವಿ.ಯಲ್ಲಿ ಪ್ರಸಾರವಾಗಿದ್ದ ಯಕ್ಷಗಾನದ ಎಪಿಸೋಡ್ನಲ್ಲಿ ಬುರುಡೆ ಗ್ಯಾಂಗ್ ಎಂದು ಉಲ್ಲೇಖಿಸಲಾಗಿದೆ ಎಂಬ ಕಾರಣಕ್ಕೆ ಯಕ್ಷಗಾನ ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದ ವೇಳೆ ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ಅವರ ತಾಯಿಯ ಕುರಿತು ಅವಾಚ್ಯ ಶಬ್ದಗಳಿಂದ ಮಾತನಾಡಿ ನಿಂದಿಸಿದ ಆರೋಪದಡಿ ಪುತ್ತೂರು ಮಹಿಳಾ ಠಾಣೆಯಲ್ಲಿ ದಾಖಲಾಗಿರುವ ಕೇಸ್ಗೆ ಸಂಬಂಧಿಸಿ ಬೆಳ್ತಂಗಡಿಯ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಮೇ.26ರಂದು ಹೈಕೋರ್ಟ್ ಷರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.



ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಮಹೇಶ್ ಶೆಟ್ಟಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ರಜಾ ಕಾಲದ ಏಕಸದಸ್ಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಪ್ರತಿ ವಾರ ಪುತ್ತೂರು ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು. ಪ್ರಕರಣದ ತನಿಖೆಗೆ ಸಹಕರಿಸಿಬೇಕು ಎಂಬ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಇದಕ್ಕೂ ಮುನ್ನ ತಿಮರೋಡಿ ಅವರ ನಡವಳಿಕೆ ಹಾಗೂ ಮೊಬೈಲ್ ಫೋನ್ ಸಂಭಾಷಣೆಯ ಆಡಿಯೋ ಕುರಿತು ನ್ಯಾಯಪೀಠ ತೀವ್ರ ತರಾಟೆಗೆ ತೆಗೆದುಕೊಂಡಿತು. ಈ ಮಧ್ಯೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಕುರಿತು ಮೊಬೈಲ್ ಸಂಭಾಷಣೆಯಲ್ಲಿ ಆಡಲಾದ ಮಾತುಗಳನ್ನು ವಕೀಲರು ನ್ಯಾಯಪೀಠದ ಗಮನಕ್ಕೆ ತರಲು ಪ್ರಯತ್ನಿಸಿದರು. ಅದಕ್ಕೆ ನ್ಯಾಯಪೀಠ ಅದಕ್ಕೆಲ್ಲಾ ಏಕೆ ತಲೆ ಕೆಡಿಸಿಕೊಳ್ಳುತ್ತೀರಿ. ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ ಎಂಬ ಮಾತಿದೆಯಲ್ಲ ಎಂದು ಮೌಖಿಕವಾಗಿ ಹೇಳಿತು.












