ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆ : ಮುಂದಿನ 30 ವರ್ಷಗಳ ಪ್ಲಾನ್; ದಿನಕ್ಕೆ 48 ಲಕ್ಷ ಲೀಟರ್ ನೀರು ಪೂರೈಕೆ

0

ಶಾಸಕ ಅಶೋಕ್ ರೈ ಯೋಜನೆಗೆ ಅಸ್ತು ಎಂದ ಇಲಾಖೆ


ಪುತ್ತೂರು: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೃಹತ್ ಯೋಜನೆಯೊಂದನ್ನು ರೂಪಿಸಲಾಗಿದ್ದು ಈ ಯೋಜನೆಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಒಪ್ಪಿಗೆ ಸೂಚಿಸಿದ್ದು , ವಿಟ್ಲ ಭಾಗದ ಕುಡಿಯುವ ನೀರಿಗೆ ಸಮಸ್ಯೆಗೆ ಶಾಶ್ವತ ಬ್ರೇಕ್ ಬೀಳಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


ಇಂದು ಶಾಸಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದರು. ಕರ್ನಾಟಕ ಅರ್ಬನ್ ವಾಟರ್ ಸಫ್ಲೈ ಬೋರ್ಡು ಸಹಾಯಕ ಇಂಜನಿಯರ್ ಶೋಭಾ ಲಕ್ಷ್ಮೀ ಅವರ ಜೊತೆ ಸಭೆ ನಡೆಸಿದ ಶಾಸಕರು ಯೋಜನೆಯ ಪೂರ್ಣ ಮಾಹಿತಿಯನ್ನು ಪಡೆದುಕೊಂಡರು.


ಕರ್ನಾಟಕ ಅರ್ಬನ್ ವಾಟರ್ ಸಪ್ಲೈ ಬೋರ್ಡು ಮೂಲಕ ವಿಟ್ಲ ಪಟ್ಟಣ ಪಂಚಾಯತ್‌ಗೆ ಕುಡಿಯುವ ನೀರು ಯೋಜನೆಯನ್ನು ಸಿದ್ದಪಡಿಸಲಾಗಿದೆ. ಈ ಯೋಜನೆಯು ಮುಂದಿನ 30 ವರ್ಷಗಳ ಮುಂದಾಲೋಚನೆಯ ಯೋಜನೆಯಾಗಿದ್ದು ಈ ಯೋಜನೆಯ ಪ್ರಕಾರ ವಿಟ್ಲ ಪಟ್ಟಣ ಪಂಚಾಯತ್‌ಗೆ ಪ್ರತಿ ದಿನ 48 ಲಕ್ಷ ಲೀಟರ್ ಕುಡಿಯುವ ನೀರು ಪೂರೈಕೆಯಾಗಬೇಕಿದೆ. ಸದ್ಯ ವಿಟ್ಲಕ್ಕೆ ಇಷ್ಟು ಪ್ರಮಾಣದಲ್ಲಿ ನೀರು ಅಗತ್ಯವಿಲ್ಲದೇ ಇದ್ದರೂ ಮುಂದಿನ 30 ವರ್ಷಗಳ ಬಳಿಕ ವಿಟ್ಲ ಪಟ್ಟಣ ಪಂಚಾಯತ್ ಮೇಲ್ದರ್ಜೆಗೇರಲಿದ್ದು ಆ ವೇಳೆ ಜನಸಂಖ್ಯೆಯೂ ಅಧಿಕವಾಗಲಿದ್ದು, ಬೃಹತ್ ಯೋಜನೆಯಾದ್ದರಿಂದ ಅದನ್ನು ಈಗಲೇ ರೂಪಿಸಿಕೊಂಡಲ್ಲಿ ಮುಂದಕ್ಕೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂಬ ದೀರ್ಘ ಕಾಲಿಕ ಉದ್ದೇಶವೂ ಇದರ ಹಿಂದೆ ಇದೆ.


ಅರ್ಬನ್ ವಾಟರ್ ಸಪ್ಲೈ ಬೋರ್ಡು ಈ ಯೋಜನೆ ಸಿದ್ದಪಡಿಸಿದ್ದರೂ ಇದಕ್ಕೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಿಂದ ಒಪ್ಪಿಗೆ ಸಿಕ್ಕಿರಲಿಲ್ಲ. ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಇಂಜನಿಯರ್ ಜಯಪ್ರಕಾಶ್ ರವರ ಜೊತೆ ಮಾತನಾಡಿದ ಶಾಸಕ ಅಶೋಕ್ ರೈ ಅವರು ಯೋಜನೆಗೆ ಇಲಾಖೆಯಿಂದ ಒಪ್ಪಿಗೆ ಸೂಚಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ವಿಟ್ಲ ಪಟ್ಟಣ ಪಂಚಾಯತ್‌ಗೆ ಕುಡಿಯುವ ನೀರು ಸಮಸ್ಯೆ ಶಾಶ್ವತವಾಗಿ ಅಂತ್ಯವಾಗಲಿದೆ. ಇದು ಶಾಸಕ ಅಶೋಕ್ ರೈ ಅವರ ಕನಸಿನ ಯೋಜನೆಗಳಲ್ಲಿ ಸೇರಿಕೊಂಡಿದೆ.

ಸಭೆಯಲ್ಲಿ ವಿಟ್ಲ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ್, ಪಟ್ಟಣಪಂಚಾಯತ್ ಅಧ್ಯಕ್ಷರಾದ ಕರುಣಾಕರ್ ನಾಯಿತೊಟ್ಟು, ಸದಸ್ಯರಾದ ಪದ್ಮಿನಿ, ಲತಾ, ಅಶ್ರಫ್ , ಅಬ್ದುಲ್ ರಹಿಮಾನ್, ರಾಮಣ್ಣ ಪಿಲಿಂಜ, ಬೂತ್ ಅಧ್ಯಕ್ಷ ಶರೀಫ್ ಪೆರಾಜೆ ಉಪಸ್ಥಿತರಿದ್ದರು.

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ಇದಾಗಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದ ಬಳಿಕ ವಿಟ್ಲದಲ್ಲಿ ನೀರಿನ ಹೊಳೆಯೇ ಹರಿದು ಬರಲಿದೆ. ಮುಂದಿನ 30 ವರ್ಷಗಳ ದೀರ್ಘ ಆಲೋಚನೆಯ ಮೂಲಕ ಇದನ್ನು ರೂಪಿಸಲಾಗಿದೆ. ಜನರ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ಕೊಡುವ ಕೆಲಸವನ್ನು ಮಾಡಲಾಗುತ್ತದೆ. ಮುಂದೆ ಯಾರೇ ಅಧಿಕಾರಕ್ಕೆ ಬರಲಿ ವಿಟ್ಲದಲ್ಲಿ ನೀರಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇರುವುದೇ ಇಲ್ಲ
ಅಶೋಕ್ ರೈ, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here