






ಪುತ್ತೂರು: ತಾಲೂಕಿನಾದ್ಯಂತ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಬಾರಿ ತಾಲೂಕು ಪಂಚಾಯತ್ ವತಿಯಿಂದ ಸ್ವಚ್ಛ ಶನಿವಾರ, ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ ಹೀಗೆ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಇದರಡಿಯಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯತೆಯ ಜಾಗೃತಿಯನ್ನು ಮೂಡಿಸುವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದರೂ. ಮತ್ತದೇ ಛಾಳಿ ಸಾರ್ವಜನಿಕರಲ್ಲಿ ಮುಂದುವರಿದಿದೆ. ಅದಕ್ಕೀಗ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರ ಆದೇಶದಂತೆ ಕಬಕ ಹಾಗೂ ನರಿಮೊಗ್ರು ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆದವರಿಗೆ ದಂಡ ವಿಧಿಸುವ ಕಾನೂನು ಅಸ್ತ್ರದ ಮೂಲಕ ನಾಗರಿಕ ಪ್ರಜ್ಞೆಯನ್ನು ಎಚ್ಚರಿಸುವ ಕಾರ್ಯ ಮಾಡಲಾಗಿದೆ.


ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 5 ಕಸ ಎಸೆದ ಪ್ರಕರಣ – 20 ಸಾವಿರ ರೂ. ದಂಡ ವಸೂಲಿ:
ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬಕ- ಮಂಗಳೂರು ರಾಜ್ಯ ಹೆದ್ದಾರಿ ಬದಿಯಲ್ಲಿ ಕಬಕ ಜಂಕ್ಷನ್ ನಿಂದ ಕೂವೆತ್ತಿಲದ ವರೆಗೆ ರಸ್ತೆ ಬದಿ ಕಸ ಎಸೆದ 5 ಪ್ರಕರಣಗಳು ಕಳೆದ 3 ದಿನಗಳಲ್ಲಿ ಬೆಳಕಿಗೆ ಬಂದಿದೆ. ಕಬಕ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು, ಸಂಜೀವಿನಿ ಹಾಗೂ ಆಶಾ ಕಾರ್ಯಕರ್ತೆಯರು ಕಸದ ಮೂಟೆಯನ್ನು ಕೆದಕಿ ಅದರಲ್ಲಿ ಕಸ ಎಸೆದವರ ವಿಳಾಸವಿರುವ ಪಾರ್ಸಲ್ ಕವರ್ ಗಳ ಮೂಲಕ ಕಸ ಎಸೆದವರನ್ನು ಗುರುತಿಸಿ ದಂಡ ವಿಧಿಸುವ ಪಾಠವನ್ನು ಮಾಡಿದ್ದಾರೆ. ಕಸ ಎಸೆದ 5 ಮಂದಿಯ ಪೈಕಿ 4 ಮಂದಿಯಿಂದ ರೂ. 5 ಸಾವಿರದಂತೆ ಒಟ್ಟು 20 ಸಾವಿರ ದಂಡವನ್ನು ಕಬಕ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಭಾಶ್ಚಂದ್ರ ಪಿ.ಜೆ. ವಸೂಲಿ ಮಾಡಿದ್ದರೆ. ಒಬ್ಬ ಕಸ ಎಸೆದ ವ್ಯಕ್ತಿ ದಂಡ ತೆರಲು ನಿರಾಕರಿಸಿದ ಕಾರಣ ಆ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ನರಿಮೊಗ್ರು ಕೈಪಂಗಳ ಎಂಬಲ್ಲಿ ತೋಡಿಗೆ ಮಾಂಸ ಎಸೆತ 10ಸಾವಿರ ದಂಡ:
ನರಿಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೇ.30 ರಂದು ಕೈಪಂಗಳ ಎಂಬಲ್ಲಿ ಸಾರ್ವಜನಿಕ ತೋಡಿಗೆ ಗೋಣಿಚೀಲದಲ್ಲಿ ಮಾಂಸದ ತ್ಯಾಜ್ಯ ಎಸೆಯುವುದನ್ನು ಸಾರ್ವಜನಿಕರು ವೀಕ್ಷಿಸಿದ್ದು ಕಸ ಎಸೆದವರ ಫೋಟೋ ಸಮೇತ ಪಂಚಾಯತ್ ಗೆ ವಿಷಯ ತಿಳಿಸಿದ್ದು, ಸದ್ರಿ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ ಆ ಮೂಲಕ ಕಸ ಎಸೆದ ವ್ಯಕ್ತಿಯಿಂದಲೇ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ ಅವರು ರೂ. 10 ಸಾವಿರ ದಂಡ ಕಟ್ಟಿಸಿಕೊಂಡಿದ್ದಾರೆ. ಹಾಗೂ ಇನ್ನು ಮುಂದೆ ಕಸ ಎಸೆಯದಂತೆ ತಾ.ಪಂ ಎಚ್ಚರಿಕೆ ನೀಡಿದೆ. ಈಗಾಗಲೇ ಪ್ರತಿ ಗ್ರಾಮ ಪಂಚಾಯತ್ ಗಳಲ್ಲಿ ಮಾರ್ಗನಕ್ಷೆ ಪ್ರಕಾರ ಘನ ತ್ಯಾಜ್ಯ ಸಂಗ್ರಹಣೆಗೆ ಸ್ವಚ್ಛತಾ ವಾಹಿನಿಯು ಬರುತ್ತಿದ್ದು ಎಲ್ಲರೂ ಒಣ ಕಸವನ್ನು ನೀಡಿ ಸಹಕರಿಸುವಂತೆ ವಿನಂತಿಸಲಾಗಿದೆ.
ಕಸದ ಮೂಟೆಯಲ್ಲಿನ ಪಾರ್ಸೆಲ್ ಅಡ್ರೆಸ್ ಮೂಲಕ ಕಸ ಎಸೆದವರಿಗೆ ದಂಡ
ರಸ್ತೆ ಬದಿ, ಸಾರ್ವಜನಿಕ ಪ್ರದೇಶದಲ್ಲಿ ಎಸೆಯುವ ಕಸದ ಮೂಟೆಯನ್ನು ಬಿಚ್ಚಿ ಕಸ ಎಸೆದವರ ಜಾಡು ಹಿಡಿಯಲಾಗುತ್ತಿದೆ. ಆನ್ ಲೈನ್ ನಲ್ಲಿ ಖರೀದಿಸಿದ ವಿವಿಧ ಉತ್ಪನ್ನಗಳ ಕವರ್ ಸಮೇತ ಎಸೆಯುವುದರಿಂದ ಕಸದ ಚೀಲವನ್ನು ಬಿಡಿಸಿ ಆಮೂಲಕ ಕಸ ಎಸೆದವರ ವಿಳಾಸ ಅಥವಾ ಹೆಸರನ್ನು ಕಂಡು ಹಿಡಿದು ಆ ಮೂಲಕ ದಂಡ ವಿಧಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.ಕಸ ಎಸೆದರೆ ಅಂತಹವರ ಮಾಹಿತಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತ್ ನೀಡುವುದು. ದಂಡ ಕಟ್ಟದಿದ್ದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕಸ ಎಸೆದಿರುವ ಬಗ್ಗೆ ಸ್ಪಷ್ಟ ಆಧಾರ ದೊರೆತು ಆ ವ್ಯಕ್ತಿಗೆ ದಂಡ ಕಟ್ಟುವಂತೆ ತಿಳಿಸಿದರೂ ಕೆಲವು ವ್ಯಕ್ತಿಗಳು ದಂಡ ಕಟ್ಟಲು ನಿರಾಕರಿಸಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಒಟ್ಟಿನಲ್ಲಿ ಸ್ವಚ್ಛತೆಯ ಕೆಲಸ ಕೇವಲ ಗ್ರಾಮ ಪಂಚಾಯತ್ ಮಾತ್ರವಲ್ಲದೆ ಸಾರ್ವಜನಿಕರೂ ಸಹಕರಿಸುವುದು ಅನಿವಾರ್ಯವಾಗಿದೆ.
ತಾಲೂಕಿನಾಧ್ಯಂತ ಎಲ್ಲೆಂದರಲ್ಲಿ ಕಸ ಎಸೆದರೆ ದಂಡ ತಪ್ಪಿದ್ದಲ್ಲಿ ಎಫ್ ಐ ಆರ್ ದಾಖಲು
ಈಗಾಗಲೇ ನಾಗರಿಕರಿಗೆ ಸ್ವಚ್ಛತೆಯ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಹಲವು ಮಾಹಿತಿ, ಶಿಕ್ಷಣ, ಸಂವಹನ ಕಾರ್ಯಕ್ರಮಗಳನ್ನು, ಅಭಿಯಾನಗಳನ್ನು ಹಮ್ಮಿಕೊಂಡಿದ್ದರೂ ರಸ್ತೆ ಎರಡು ಬದಿಯಲ್ಲಿ ಕಸ ಎಸೆಯುವ ಛಾಳಿ ಮುಂದುವರೆಯುತ್ತಲೇ ಇದೆ. ಪ್ರತಿ ವಾರ ಗ್ರಾಮ ಪಂಚಾಯತ್‌ಗಳಿಂದ ಕಸ ಹೆಕ್ಕುವ ಕಾರ್ಯ ಮಾಡುತ್ತಾರೆ. ಆದರೆ ವಾರದೊಳಗೆ ಮತ್ತದೇ ಕಸದ ರಾಶಿಗಳು. ಇದಕ್ಕೆ ದಂಡ ಪ್ರಯೋಗ ಒಂದೇ ಪರ್ಯಾಯ ಮಾರ್ಗವಾಗಿದೆ. ದಂಡ ಕಟ್ಟಲು ನಿರಾಕರಿಸಿದರೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಲಾಗುವುದು. ಆ ಮೂಲಕ ದಂಡದ ಜೊತೆಗೆ ಸ್ವಚ್ಛತೆಯ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಹಾಗೂ ಸ್ವಚ್ಛ ಸುಂದರ ವಾತಾವರಣಕ್ಕಾಗಿ ಈ ಕಟ್ಟು ನಿಟ್ಟಿನ ಕ್ರಮಕ್ಕೆ ಎಲ್ಲರೂ ಸಹಕರಿಸಬೇಕು.
ನವೀನ್ ಭಂಡಾರಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್ ಪುತ್ತೂರು










