ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರ ಸಂಘದಲ್ಲಿ ಉಚಿತ ಕಣ್ಣಿನ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

0

ಬೆಟ್ಟಂಪಾಡಿ: ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ರೋಟರಿ ಕ್ಲಬ್‌ ಪುತ್ತೂರು ಕಣ್ಣಿನ ಆಸ್ಪತ್ರೆ ನಿರ್ವಹಣೆ ಪ್ರಸಾದ್‌ ನೇತ್ರಾಲಯ, ಪ್ರಸಾದ್‌ ನೇತ್ರಾಲು ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವು ಜೂ. 7 ರಂದು ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರ ಸಂಘದ ಸಭಾಂಗಣದಲ್ಲಿ ಜರಗಿತು.


ಬೆಳಿಗ್ಗೆ ಶಿಬಿರವನ್ನು ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎಸ್.‌ ರಂಗನಾಥ ಗುತ್ತು ರವರು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಮಾತನಾಡಿದರು. ʻಬ್ಯಾಂಕ್‌ನಿಂದ ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಸಮಾಜಮುಖಿಯಾದ ಕಾರ್ಯಕ್ರಮಗಳ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವನ್ನು ಸಂಘ ಮಾಡುತ್ತಿರುವುದು ಶ್ಲಾಘನೀಯʼ ಎಂದರು.


ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷರೂ, ಎಸ್‌ಸಿಡಿಸಿಸಿ ನಿರ್ದೇಶಕರೂ ಆಗಿರುವ ಶಶಿಕುಮಾರ್‌ ರೈ ಬಾಲ್ಯೊಟ್ಟುರವರು ಮಾತನಾಡಿ ʻಸಂಘವು ಕೇವಲ ಹಣಕಾಸಿನ ವ್ಯವಹಾರಗಳಲ್ಲದೇ, ಸಮಾಜಕ್ಕೆ ಹತ್ತಿರವಾಗುವ ಕೆಲಸ ಕಾರ್ಯಗಳನ್ನು ಮಾಡಿದಾಗ ಒಂದು ಸಹಕಾರಿ ಸಂಘದ ನಿಜವಾದ ಉದ್ದೇಶ ಈಡೇರುತ್ತದೆ. ಈ ನಿಟ್ಟಿನಲ್ಲಿ ಸಹಕಾರಿಗಳ, ರೈತರ ಆರೋಗ್ಯದತ್ತ ಸಹಕಾರಿ ಸಂಘಗಳು ಹೆಚ್ಚಿನ ಕಾಳಜಿ ವಹಿಸುತ್ತಿವೆ. ಯಶಸ್ವಿನಿ ಯೋಜನೆಯ ಮೂಲಕ ಇಂದು ಅನೇಕ ಮಂದಿ ಕಣ್ಣಿನ ಮತ್ತು ಪ್ರಮುಖ ಶಸ್ತ್ರಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ನಮ್ಮ ಕಾರ್ಯಕ್ರಮದ ಮೂಲಕ ಹೆಚ್ಚಿನ ಸಹಕಾರಿ ಸದಸ್ಯರು ಯಶಸ್ವಿನಿ ಯೋಜನೆಯನ್ನು ಮಾಡಿಸಿಕೊಳ್ಳುವಂತಾಗಲಿ. ಅದರ ಜೊತೆ ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ಇಂಧನ ಉಳಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್‌ ವಾಹನಗಳ ಖರೀದಿಗೆ ಸಂಘದಿಂದ ಶೇ. 11 ರ ಬಡ್ಡಿದರಲ್ಲಿ ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆʼ ಎಂದರು.


ಮುಖ್ಯ ಅತಿಥಿಯಾಗಿದ್ದ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿಗಳಾದ ಡಾ. ವೇದಾವತಿ ಬಲ್ಲಾಳ್‌ ರವರು ಮಾತನಾಡಿ ʻಗ್ರಾಮೀಣ ಭಾಗಗಳಲ್ಲಿ ಜನರು ಕಣ್ಣಿನ ಮುಂಜಾಗರೂಕತಾ ಕ್ರಮಗಳನ್ನು ಹೆಚ್ಚಾಗಿ ಅನುಸರಿಸುವುದಿಲ್ಲ. ಹೀಗಾಗಿ ಮಧ್ಯ ವಯಸ್ಸಿನ ಬಳಿಕ ಹೆಚ್ಚಾಗಿ ಕಣ್ಣಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಪ್ರತೀ ಗ್ರಾಮಗಳಲ್ಲೂ ಇಂತಹ ಶಿಬಿರ ಆಯೋಜಿಸುವುದರಿಂದ ಹೆಚ್ಚಿನ ಜನರಿಗೆ ಇದರ ಸದುಪಯೋಗ ಲಭಿಸಿದಂತಾಗುತ್ತದೆ. ರಕ್ತದಾನದಂತೆ ಜನರು ಮರಣದ ಬಳಿಕ ನೇತ್ರದಾನ ಮಾಡುವುದೂ ಪುಣ್ಯದ ಕೆಲಸʼ ಎಂದು ಭಾವಿಸಬೇಕುʼ ಎಂದರು.

ಚಿತ್ರ: ಶ್ರೀಹರಿ ರೆಂಜ


ಮುಖ್ಯ ಅತಿಥಿ ಬೈಲಾಡಿ ಎಣ್ಣೆ ಖ್ಯಾತಿಯ ನಾಟಿ ವೈದ್ಯರಾದ ಇರ್ದೆ ಬೀಡು ದೇವಿಪ್ರಸಾದ್‌ ರವರು ಮಾತನಾಡಿ ʻಸಹಕಾರಿಗಳಾದ ರೈತರಿಗೆ ಕಣ್ಣಿನ ಸಮಸ್ಯೆ ಇದ್ದೇ ಇರುತ್ತದೆ. ಆಸ್ಪತ್ರೆಗಳಲ್ಲಿ ಹೋಗಿ ತಪಾಸಣೆ ಮಾಡಿಸಿಕೊಳ್ಳುವುದು ಕಡಿಮೆ. ಆ ಹಿನ್ನೆಲೆಯಲ್ಲಿ ಪ್ರತೀ ಸೊಸೈಟಿ, ಸಂಘ ಸಂಸ್ಥೆಗಳಲ್ಲಿ ಇಂತಹ ಶಿಬಿರ ಆಯೋಜನೆಗೊಂಡಾಗ ನಿಜವಾದ ಕಣ್ಣಿನ ತೊಂದರೆ ಇರುವವರಿಗೆ ಸಹಕಾರವಾಗುತ್ತದೆʼ ಎಂದ ಅವರು ಕಣ್ಣಿನ ಚಿಕಿತ್ಸೆಗೆ ಸಂಬಂಧಿಸಿದಂತೆ ಮಂಗಳೂರಿನ ಪ್ರಸಾದ್‌ ನೇತ್ರಾಲಯ ಅತ್ಯುತ್ತಮ ಚಿಕಿತ್ಸೆ ಮತ್ತು ಸೇವೆಯನ್ನು ನೀಡುತ್ತಿದೆʼ ಎಂದು ಹೇಳಿ ಸ್ವ-ಅನುಭವ ಹಂಚಿಕೊಂಡರು.


ಮುಖ್ಯ ಅತಿಥಿ ಜಿ.ಪಂ. ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್‌ ರವರು ಮಾತನಾಡಿ ʻಸಹಕಾರಿ ಸಂಘಗಳು ಜನಸಾಮಾನ್ಯರಿಗೆ ಹತ್ತಿರವಾಗಬೇಕಾದರೆ ಇಂತಹ ಶಿಬಿರಗಳು ಆಯೋಜನೆಯಾಗುವುದು ಅವಶ್ಯಕ. ದೇಹದ ಎಲ್ಲಾ ಅಂಗಗಳೂ ನಮಗೆ ಪ್ರಮುಖವಾದರೂ ಕಣ್ಣು ಮಾತ್ರ ಅಮೂಲ್ಯವಾದುದು. ರೈತರು ಕಣ್ಣಿನ ಬಗ್ಗೆ ಸದಾ ಜಾಗೃತಿಯಿಂದಿರುವುದು ತುಂಬಾ ಅವಶ್ಯಕʼ ಎಂದು ಹೇಳಿ ಶಿಬಿರ ಆಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಸಾದ್‌ ನೇತ್ರಾಲಯದ ನೇತ್ರ ತಜ್ಞರಾದ ಡಾ. ಆರ್ಶಿತಾ ರವರು ಶಿಬಿರದ ಮಹತ್ವ ಮತ್ತು ಉದ್ದೇಶವನ್ನು ಸಭೆಯ ಮುಂದಿಟ್ಟರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಪಿ. ಸ್ವಾಗತಿಸಿ, ಹಿರಿಯ ಗುಮಾಸ್ತರಾದ ಸುವರ್ಣ ಆರ್‌.ಬಿ. ವಂದಿಸಿದರು. ಕು. ಅದಿತಿ ಬೊಳಿಕಳ ಪ್ರಾರ್ಥಿಸಿದರು. ಉಮೇಶ್‌ ಮಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ಹರೀಶ್‌ ಗೌಡ ಗುಮ್ಮಟೆಗದ್ದೆ, ನಿರ್ದೇಶಕರು, ಸಿಬಂದಿಗಳು, ಪುತ್ತೂರು ಪ್ರಸಾದ್‌ ನೇತ್ರಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಮನೋಹರ್‌ ವಿವಿಧ ರೀತಿಯಲ್ಲಿ ಸಹಕರಿಸಿದರು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಮಂಗಳೂರು. ನೇತ್ರ ಜ್ಯೋತಿ ಚಾರಿಟೇಬಲ್‌ ಟ್ರಸ್ಟ್‌ (ರಿ.), ಸೆಂಚುರಿ ಗ್ರೂಪ್‌ ಬೆಂಗಳೂರು, ಡಾ. ಪಿ. ದಯಾನಂದ ಪೈ ಮತ್ತು ಸತೀಶ್‌ ಪೈ ಚಾರಿಟೇಬಲ್‌ ಟ್ರಸ್ಟ್‌ (ರಿ.). ನ್ಯಾಶನಲ್‌ ಮೆಡಿಕೋಸ್‌ ಆರ್ಗನೈಸೇಶನ್‌ ಮತ್ತು ಅಬ್ಕೋ ಸ್ಟೀಲ್‌ ಪ್ರೈ. ಲಿ. ಮಂಗಳೂರು ಈ ಶಿಬಿರದ ಸಹಯೋಗ ವಹಿಸಿದ್ದವು.

ಸಹಕಾರಿ ಸಂಘಗಳು ಜನರ ಆರೋಗ್ಯದ ಕಾಳಜಿ ವಹಿಸುತ್ತಿವೆ
ಜಿಲ್ಲೆಯ ಸಹಕಾರಿ ಸಂಘಗಳು ಇಂದು ಕೇವಲ ಹಣಕಾಸಿನ ವ್ಯವಹಾರಗಳಲ್ಲದೇ ಜನರ ಆರೋಗ್ಯದತ್ತ ವಿಶೇಷ ಕಾಳಜಿ ವಹಿಸಿವೆ. ಆರೋಗ್ಯ ಜಾಗೃತಿ, ಅರಿವು ಮೂಡಿಸುವ ಕಾರ್ಯಗಳು ಸಹಕಾರಿ ಸಂಘಗಳಿಂದ ನಡೆದಾಗ ಸಹಕಾರಿಗಳ ಜೀವನಕ್ಕೆ ನಿಜವಾದ ಭರವಸೆ ದೊರೆಯುತ್ತದೆ. ನಮ್ಮ ಸಂಘದ ಆಶ್ರಯದಲ್ಲಿ ನಡೆದ ಈ ಶಿಬಿರಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ದೊರೆತಿರುವುದು ಕಾರ್ಯಕ್ರಮ ಆಯೋಜನೆ ಮಾಡಿರುವುದಕ್ಕೆ ಸಾರ್ಥಕ ಎನಿಸಿದೆ.
– ಶಶಿಕುಮಾರ್‌ ರೈ ಬಾಲ್ಯೊಟ್ಟು ಅಧ್ಯಕ್ಷರು, ಇರ್ದೆ-ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರ ಸಂಘ

ನೂರಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗಿ
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಶಿಬಿರದಲ್ಲಿ ನೂರಕ್ಕೂ ಮಿಕ್ಕಿ ಜನರು ನೋಂದಣಿ ಮಾಡಿಸಿಕೊಂಡು ಕಣ್ಣಿನ ಉಚಿತ ತಪಾಸಣೆ ಮಾಡಿಸಿಕೊಂಡರು. ಅಗತ್ಯವಿರುವ ಶಿಬಿರಾರ್ಥಿಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣಾ ವಿಭಾಗದ ವತಿಯಿಂದ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಸ್ಥಳದಲ್ಲಿಯೇ ರೀಡಿಂಗ್‌ ಕನ್ನಡಕ ಉಚಿತವಾಗಿ ನೀಡಲಾಯಿತು. ಬೆಟ್ಟಂಪಾಡಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ಮತ್ತು ಸಹಾಯಕಿಯರು ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ನಡೆಸಿಕೊಟ್ಟರು. ಆಶಾ ಕಾರ್ಯಕರ್ತೆಯರು ಸಹಕರಿಸಿದರು.

LEAVE A REPLY

Please enter your comment!
Please enter your name here