ಭಕ್ತಕೋಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ತರಗತಿ ಉದ್ಘಾಟನೆ

0

ಇಂಗ್ಲೀಷ್ ಶಿಕ್ಷಣ ಎಲ್ಲ ಕ್ಷೇತ್ರಗಳಿಗೂ ಅನಿವಾರ್ಯ-ಸುರೇಶ್ ಕುಮಾರ್ ಸೊರಕೆ

ಪುತ್ತೂರು: ಇಂದು ಎಲ್ಲ ಕ್ಷೇತ್ರಗಳಿಗೂ ಇಂಗ್ಲೀಷ್ ಅನಿವಾರ್ಯವಾಗಿದ್ದು ಕನ್ನಡದ ಜೊತೆಗೆ ಇಂಗ್ಲೀಷ್ ಕಲಿಕೆಯ ಅವಶ್ಯಕತೆಯಿದೆ, ಇಂಗ್ಲಿಷ್ ತಿಳಿದಿದ್ದರೆ ಪ್ರಪಂಚದ ಎಲ್ಲಿ ಬೇಕಾದರೂ ಬದುಕಬಹುದು ಎಂದು ಮುಂಡೂರು ಪ್ರಾ.ಕೃ.ಪ.ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಹೇಳಿದರು. ಜೂ.10ರಂದು ಭಕ್ತಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಬದಲಾವಣೆ ಜಗದ ನಿಯಮ, ಇಂಗ್ಲೀಷ್ ಗೊತ್ತಿದ್ದರೆ ನಮ್ಮಲ್ಲಿ ಹಿಂಜರಿಕೆ ಇರುವುದಿಲ್ಲ, ಸ್ಪರ್ಧಾತ್ಮಕ ಯುಗದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಇಂಗ್ಲೀಷ್ ಬೇಕಾಗಿದೆ ಎಂದ ಅವರು ಭಕ್ತಕೋಡಿ ಶಾಲೆಯಲ್ಲಿ ವ್ಯವಸ್ಥಿತವಾಗಿ ಎಲ್‌ಕೆಜಿ ಯುಕೆಜಿ ತರಗತಿ ಆರಂಭಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಭಕ್ತಕೋಡಿ ಸ.ಹಿ.ಪ್ರಾ.ಶಾಲಾ ಎಲ್‌ಕೆಜಿ ಯುಕೆಜಿ ತರಗತಿ ಸಮಿತಿಯ ಗೌರವಾಧ್ಯಕ್ಷ ಡಾ.ಸೀತರಾಮ ಭಟ್ ಕಲ್ಲಮ ಮಾತನಾಡಿ ಕನ್ನಡದ ಜೊತೆ ಇಂಗ್ಲೀಷ್ ಕಲಿಕೆಗೆ ಆದ್ಯತೆ ನೀಡುವುದು ಅವಶ್ಯಕವಾಗಿದ್ದು ದೇಶ ವಿದೇಶಗಳಲ್ಲಿ ತೊಡಗಿಸಿಕೊಳ್ಳಬೇಕಾದರೆ ಇಂಗ್ಲೀಷ್ ಅತೀ ಅವಶ್ಯಕ, ಈ ನಿಟ್ಟಿನಲ್ಲಿ ಭಕ್ತಕೋಡಿ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ತರಗತಿ ಆರಂಭಗೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಭಕ್ತಕೋಡಿ ಸ.ಹಿ.ಪ್ರಾ.ಶಾಲಾ ಎಲ್‌ಕೆಜಿ, ಯುಕೆಜಿ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಎಚ್.ಬಿ ಮಾತನಾಡಿ ಭಕ್ತಕೋಡಿ ಸರಕಾರಿ ಶಾಲೆಯಲ್ಲಿ ಖಾಸಗಿ ಶಾಲೆಯನ್ನೂ ಮೀರಿಸುವ ರೀತಿಯಲ್ಲಿ ವ್ಯವಸ್ಥಿತವಾದ ಎಲ್‌ಕೆಜಿ ಯುಕೆಜಿ ತರಗತಿ ಆರಂಭಗೊಂಡಿರುವುದು ಶ್ಲಾಘನೀಯ, ಊರವರನ್ನು ಸೇರಿಸಿಕೊಂಡು ಯಾವುದೇ ಕಾರ್ಯಕ್ರಮ ಮಾಡಿದರೂ ಅದು ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ, ಷಣ್ಮುಖ ಯುವಕ ಮಂಡಲ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಇದಕ್ಕೆ ಸಹಕಾರ ನೀಡಿದ್ದು ಮುಂದಕ್ಕೂ ಎಲ್ಲರ ಸಹಕಾರದೊಂದಿಗೆ ಎಲ್‌ಕೆಜಿ, ಯುಕೆಜಿ ತರಗತಿ ಉತ್ತಮವಾಗಿ ಮುನ್ನಡೆಯಲಿದೆ ಎಂದು ಹೇಳಿದರು.

ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್.ಡಿ ವಸಂತ ಮಾತನಾಡಿ ಸಂಘ ಸಂಸ್ಥೆಗಳು, ದಾನಿಗಳು ಸಹಕಾರ ನೀಡಿದಾಗ ಶಾಲೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ, ಇಲ್ಲಿ ಉದ್ಘಾಟನೆಗೊಂಡ ಎಲ್‌ಕೆಜಿ, ಯುಕೆಜಿ ತರಗತಿಯನ್ನು ಎಲ್ಲರೂ ಸೇರಿಕೊಂಡು ಯಶಸ್ವಿಯಾಗಿ ಮುನ್ನಡೆಸಬೇಕೆಂದು ಹೇಳಿದರು.

ಮುಂಡೂರು ಗ್ರಾ.ಪಂ ನಿಕಟಪೂರ್ವ ಸದಸ್ಯ ಕಮಲೇಶ್ ಎಸ್.ವಿ ಮಾತನಾಡಿ ನಮ್ಮೂರಿನ ಶಾಲೆಯ ಅಭಿವೃದ್ಧಿಯ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು ಅದರ ಫಲವಾಗಿ ಶಾಲೆಯಲ್ಲಿ ದಾಖಲಾತಿ ಸಂಖ್ಯೆಯೂ ಹೆಚ್ಚಾಗಿದೆ, ಹಲವರ ಸಹಾಕರವೂ ಈ ಶಾಲೆಗೆ ಸಿಗುತ್ತಿದ್ದು ಇದೀಗ ಎಲ್‌ಕೆಜಿ ಯುಕೆಜಿ ತರಗತಿ ಆರಂಭವಾಗಿರುವುದು ಈ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ, ನಾವೆಲ್ಲರೂ ಸೇರಿ ಶಾಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಅವರು ಹೇಳಿದರು.

ಮುಂಡೂರು ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಮಾತನಾಡಿ ಭಕ್ತಕೋಡಿ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ತರಗತಿ ಆರಂಭಗೊಂಡಿರುವುದು ಸಂತಸದ ವಿಚಾರ ಎಂದು ಹೇಳಿ ಶುಭ ಹಾರೈಸಿದರು.

ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು ಮಾತನಾಡಿ ನಮ್ಮ ಷಣ್ಮುಖ ಯುವಕ ಮಂಡಲ ಈ ಶಾಲೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದು ಶಾಲೆಯ ಬೇಡಿಕೆ, ಅವಶ್ಯಕತೆಗಳನ್ನು ಸಾಧ್ಯವಾದಷ್ಟು ಈಡೇರಿಸುತ್ತಿದ್ದೇವೆ, ಇದೀಗ ಉದ್ಘಾಟನೆಗೊಂಡ ಎಲ್‌ಕೆಜಿ ಯುಕೆಜಿ ತರಗತಿಯ ಒಳಭಾಗ ವಿನ್ಯಾಸ ಹಾಗೂ ಪೈಂಟಿಂಗ್‌ಗೆ ರೂ ೬೭ ಸಾವಿರ ಮೊತ್ತವನ್ನು ನೀಡಿದ್ದೇವೆ, ಮುಂದಕ್ಕೂ ಶಾಲೆಯ ಅಭಿವೃದ್ಧಿ ಕಾರ್ಯದಲ್ಲಿ ನಮ್ಮ ಯುವಕ ಮಂಡಲ ಸದಾ ತೊಡಗಿಸಿಕೊಳ್ಳಲಿದೆ ಎಂದು ಅವರು ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ ಮಾತನಾಡಿ ಭಕ್ತಕೋಡಿ ಸ.ಹಿ.ಪ್ರಾ.ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ತರಗತಿ ಆರಂಭ ಮಾಡಿರುವುದು ಶ್ಲಾಘನೀಯ, ಇಲಾಖೆಯಿಂದ ಸಾಧ್ಯವಾದ ಸಹಕಾರವನ್ನು ನೀಡುತ್ತೇವೆ ಎಂದು ಹೇಳಿದರು.
ಪುತ್ತೂರು ರೋಟರಿ ಕ್ಲಬ್‌ನ ಅಧ್ಯಕ್ಷ ಡಾ.ಪ್ರಕಾಶ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗೇಶ್ ಪಾಟಾಳಿ, ಗೌರಿ ಮಹಿಳಾ ಮಂಡಲದ ಅಧ್ಯಕ್ಷೆ ಕುಶಲಾ ನಾಗೇಶ್ ಮೊದಲಾದವರು ಮಾತನಾಡಿ ಶುಭ ಹಾರೈಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹಂಝ ಕೆ.ಎಚ್ ಅಧ್ಯಕ್ಷತೆ ವಹಿಸಿದ್ದರು.

ಕಂಗೊಳಿಸುತ್ತಿರುವ ತರಗತಿ:
ಎಲ್‌ಕೆಜಿ ಯುಕೆಜಿ ತರಗತಿ ಕೊಠಡಿಯನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದ್ದು ಖಾಸಗಿ ಶಾಲೆಯನ್ನೂ ಮೀರಿಸುವಷ್ಟು ಕಂಗೊಳಿಸುತ್ತಿದೆ. ತರಗತಿ ಗೋಡೆಯನ್ನು ವಿವಿಧ ರೀತಿಯ ಚಿತ್ರ, ಬರಹಗಳೊಂದಿಗೆ ವಿನ್ಯಾಸಗೊಳಿಸಲಾಗಿದ್ದು ಇದು ನೋಡುಗರನ್ನು ಆಕರ್ಷಿಸುತ್ತಿದೆ. ೨೦ ವಿದ್ಯಾರ್ಥಿಗಳು ಈಗಾಗಲೇ ದಾಖಲಾತಿ ಮಾಡಿಕೊಂಡಿದ್ದಾರೆ. ಗಣ್ಯರು ಪುಟಾಣಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ತರಗತಿಗೆ ಸ್ವಾಗತಿಸಿದರು. ಮಕ್ಕಳ ಸ್ವಾಗತಕ್ಕೆ ಅಳವಡಿಸಿದ್ದ ಕಮಾನು, ಮಕ್ಕಳ ತಲೆಗೆ ತೊಡಿಸಿದ್ದ ಕಿರೀಟ ಗಮನ ಸೆಳೆಯಿತು. ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಭಕ್ತಕೋಡಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ತರಗತಿ ಆರಂಭಗೊಂಡಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.

ಸಂಘ ಸಂಸ್ಥೆಗಳಿಗೆ ವಿವಿಧ ಕೊಡುಗೆ:
ಭಕ್ತಕೋಡಿ ಸ.ಹಿ.ಪ್ರಾ.ಶಾಲೆಯಲ್ಲಿ ಉದ್ಘಾಟನೆಗೊಂಡ ಎಲ್‌ಕೆಜಿ ಯುಕೆಜಿ ತರಗತಿಗೆ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದಾರೆ. ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲ ವತಿಯಿಂದ 67 ಸಾವಿರ ರೂ ವೆಚ್ಚದಲ್ಲಿ ತರಗತಿಗೆ ಪೈಂಟಿಂಗ್ ಹಾಗೂ ತರಗತಿಯ ಗೋಡೆಯಲ್ಲಿ ಆರ್ಟ್ ವರ್ಕ್ ಮಾಡಲಾಗಿದೆ. ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 79 ಸಾವಿರ ರೂ ವೆಚ್ಚದಲ್ಲಿ ಪೀಠೋಪಕರಣಗಳನ್ನು ಒದಗಿಸಲಾಗಿದೆ. ಪುತ್ತೂರು ರೋಟರಿ ಕ್ಲಬ್ ವತಿಯಿಂದ 44 ಸಾವಿರ ರೂ ವೆಚ್ಚದಲ್ಲಿ ವಾಟರ್ ಪ್ಯೂರಿಫಯರ್ ನೀಡಲಾಗಿದ್ದು ಸರ್ವೆ ಗೌರಿ ಮಹಿಳಾ ಮಂಡಲ ವತಿಯಿಂದ 20 ಸಾವಿರ ರೂ.ವೆಚ್ಚದಲ್ಲಿ ಕಬ್ಬಿಣದ ರೈಲಿಂಗ್ಸ್‌ನ್ನು ಕೊಡುಗೆಯಾಗಿ ನೀಡಲಾಗಿದೆ.

ಕೊಡುಗೆ ನೀಡಿದವರಿಗೆ ಗೌರವಾರ್ಪಣೆ:
ಕೊಡುಗೆ ನೀಡಿದಕ್ಕಾಗಿ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪರವಾಗಿ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಅಧ್ಯಕ್ಷರಾದ ಗೌತಮ್‌ರಾಜ್ ಕರುಂಬಾರು ಹಾಗೂ ಪ್ರಧಾನ ಕಾರ್ಯದರ್ಶಿ ಗೌತಮ್ ಪಟ್ಟೆಮಜಲುರವರನ್ನು, ಪುತ್ತೂರು ರೋಟರಿ ಕ್ಲಬ್ ಪರವಾಗಿ ಅಧ್ಯಕ್ಷ ಡಾ.ಪ್ರಕಾಶ್, ಗೌರಿ ಮಹಿಳಾ ಮಂಡಲದ ಪರವಾಗಿ ಅಧ್ಯಕ್ಷೆ ಕುಶಲಾ ನಾಗೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಪ್ರಮುಖರಾದ ಅಶೋಕ್ ಎಸ್.ಡಿ, ರತ್ನಾವತಿ ಸರ್ವೆದೋಳಗುತ್ತು, ಎಸ್.ಎಂ ಶರೀಫ್ ಸರ್ವೆ, ವಸಂತ ಪೂಜಾರಿ ಕೈಪಂಗಳದೋಳ, ಗೌತಮ್ ಪಟ್ಟೆಮಜಲು, ಯೂಸುಫ್ ರೆಂಜಲಾಡಿ ಉಪಸ್ಥಿತರಿದ್ದರು.

ಶಿಕ್ಷಕ ಅನಂತ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಸೇಸಮ್ಮ ಸ್ವಾಗತಿಸಿದರು. ಎಲ್‌ಕೆಜಿ ಯುಕೆಜಿ ಸಮಿತಿಯ ಕಾರ್ಯದರ್ಶಿ, ಶಿಕ್ಷಕಿ ಸುನೀತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸಿದ್ದಲಿಂಗಮ್ಮ, ದೀಪಾಶ್ರೀ, ರೇಖಾ, ಸೌಮ್ಯ, ರೇಖಾ ಆರ್, ಎಲ್‌ಕೆಜಿ ಯುಕೆಜಿ ತರಗತಿಯ ಸಹಾಯಕಿ ಕಾವ್ಯ ಕಡ್ಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here