







ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು: ದಿನೇಶ್ ಪೂಜಾರಿ


ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) ಪುತ್ತೂರು ಹಾಗೂ ವಿಟ್ಲ ತಾಲೂಕು ವ್ಯಾಪ್ತಿಯ ಜ್ಞಾನವಿಕಾಸ ಸಂಯೋಜಕೀಯರ ಕ್ರಿಯಾಯೋಜನೆ ಸಭೆಯು ಪುತ್ತೂರು ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.




ದಕ್ಷಿಣ ಕನ್ನಡ-2 ಜಿಲ್ಲೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಅವರು ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, “ಜ್ಞಾನವಿಕಾಸ ಕೇಂದ್ರಗಳ ಮೂಲ ಉದ್ದೇಶ ಮತ್ತು ಹಿನ್ನೆಲೆಯನ್ನು ಅರಿತು ಕಾರ್ಯನಿರ್ವಹಿಸಬೇಕು. ತಾಲೂಕಿನಲ್ಲಿ ಯೋಜನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಹಾಗೂ ಪ್ರಾಮಾಣಿಕವಾಗಿ ಯಶಸ್ವಿಗೊಳಿಸಬೇಕು. ಕೇಂದ್ರಗಳಲ್ಲಿ ಉತ್ತಮ ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ, ಸದಸ್ಯ ಸಂಖ್ಯೆ ಕಡಿಮೆ ಇರುವ ಕಡೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿ, ಹಾಜರಾತಿ ಮತ್ತು ಕೇಂದ್ರದ ಗುಣಮಟ್ಟವನ್ನು ಹೆಚ್ಚಿಸಬೇಕು,” ಎಂದು ಕರೆ ನೀಡಿದರು.
ಕೇಂದ್ರ ಕಚೇರಿಯ ಜ್ಞಾನವಿಕಾಸ ವಿಭಾಗದ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ, “ಜ್ಞಾನವಿಕಾಸದ ಮೂಲಕ ಮಹಿಳೆಯರಲ್ಲಿ ಸ್ವ-ಉದ್ಯೋಗದ ಕುರಿತು ಜಾಗೃತಿ ಮೂಡಿಸುವುದು ನಮ್ಮ ಆದ್ಯತೆಯಾಗಬೇಕು. ಮನೆಯಲ್ಲೇ ಕುಳಿತು ಸ್ವ-ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಮಹಿಳೆಯರಿಗೆ ಪ್ರೇರಣೆ ನೀಡಬೇಕು. ಇದು ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಲು ಸಹಕಾರಿಯಾಗಲಿದೆ,” ಎಂದು ತಿಳಿಸಿದರು.
ಉಡುಪಿ ಪ್ರಾದೇಶಿಕ ವಿಭಾಗದ ಜ್ಞಾನವಿಕಾಸ ಯೋಜನಾಧಿಕಾರಿ ಅಮೃತ ಅವರು ಮಾತನಾಡುತ್ತಾ, “ಜ್ಞಾನವಿಕಾಸ ಕಾರ್ಯಕ್ರಮವು ಮಹಿಳೆಯರಿಗೆ ಒಂದು ಆಸರೆಯ ತಾಣವಿದ್ದಂತೆ. ಇಲ್ಲಿ ಸದಸ್ಯರು ತಮ್ಮ ಕಷ್ಟ-ನೋವುಗಳನ್ನು ಹಂಚಿಕೊಳ್ಳುತ್ತಾರೆ. ಮಹಿಳೆಯರು ಕುಟುಂಬದ ಪೋಷಣೆಯಲ್ಲಿ ಪಾಲುದಾರರಾಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು,” ಎಂದು ಕರೆ ನೀಡಿದರು. ಅಲ್ಲದೆ, ಮುಂಬರುವ ದಿನಗಳಲ್ಲಿ ಜ್ಞಾನವಿಕಾಸದ ಕ್ರಿಯಾಯೋಜನೆಗಳ ಅನುಷ್ಠಾನ ಮತ್ತು ‘ವಾತ್ಸಲ್ಯ’ ಕಾರ್ಯಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಸೇವಾ ಪ್ರತಿನಿಧಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್, ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಕಾವ್ಯಶ್ರೀ, ದೀಪ ಹಾಗೂ ಪುತ್ತೂರು ಮತ್ತು ವಿಟ್ಲ ತಾಲೂಕಿನ ಜ್ಞಾನವಿಕಾಸ ಕೇಂದ್ರಗಳ ಸಂಯೋಜಕೀಯರು ಉಪಸ್ಥಿತರಿದ್ದರು.










