






ಉಪ್ಪಿನಂಗಡಿ: ಸುದ್ದಿ ಅರಿವು ಕೇಂದ್ರ ಇವರ ಸಹಯೋಗದಲ್ಲಿ ಟೀಮ್ ಉಬಾರ್ ವತಿಯಿಂದ ಉಪ್ಪಿನಂಗಡಿಯಲ್ಲಿ ನಡೆಯುತ್ತಿರುವ ದ್ವಿತೀಯ ವರ್ಷದ ಮೂರು ದಿನಗಳ ಕೃಷಿ ಮೇಳ, ಹಲಸು- ಮಾವು ಮತ್ತು ಆಹಾರ ಮೇಳಕ್ಕೆ ಹೆಚ್.ಎಂ. ಅಡಿಟೋರಿಯಂನಲ್ಲಿ ಜೂ.19ರಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಚಾಲನೆ ನೀಡಿದರು.


ಬಳಿಕ ಮಾತನಾಡಿದ ಅವರು, ರೈತ ಬೆಳೆದ ಉತ್ಪನ್ನಗಳಿಗೆ ಮೌಲ್ಯವರ್ಧನೆ ಬರಲು ಇಂತಹ ಮೇಳಗಳು ಸಹಕಾರಿಯಾಗಲಿವೆ. ಸಾಂಪ್ರದಾಯಿಕ ತಿಂಡಿ ತಿನಿಸುಗಳು, ಮನೆ ಉತ್ಪನ್ನಗಳು ಸೇರಿದಂತೆ ಎಲ್ಲಾ ಬಗೆಯ ಉತ್ಪನ್ನಗಳು ಇಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಒಂದೇ ಸೂರಿನಡಿ ದೊರೆಯಲಿದೆ. ಇಂತಹ ಮೇಳಗಳು ಗ್ರಾಹಕ ಮತ್ತು ಉತ್ಪಾದಕನ ನಡುವೆ ಉತ್ತಮ ಕೊಂಡಿಯಿದ್ದಂತೆ. ಇನ್ನಷ್ಟು ಇಂತಹ ಮೇಳಗಳು ಆಯೋಜನೆಗೊಳ್ಳಲಿ ಎಂದು ಶುಭ ಹಾರೈಸಿದರು.




ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೌಸೀಫ್ ಯು.ಟಿ. ಮಾತನಾಡಿ, ಇಂತಹ ಮೇಳಗಳ ಆಯೋಜನೆಯಿಂದ ಉತ್ಪಾದಕ ಮತ್ತು ಗ್ರಾಹಕನಿಗೆ ಅನುಕೂಲವಾಗಲಿದೆ. ಈ ಮೇಳವು ಯಶಸ್ವಿಯಾಗಿ ನಡೆಯಲಿ ಎಂದರು.
ಬಲ್ಲಿ ಆಯುರ್ ಗ್ರಾಮದ ವ್ಯವಸ್ಥಾಪಕ ನಿರ್ದೇಶಕ ಡಾ. ಸುಪ್ರೀತ್ ಜೋಯಲ್ ಲೋಬೋ ಮಾತನಾಡಿ, ಹಲಸು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಅದಕ್ಕೆ ಮೌಲ್ಯವರ್ಧಿತ ಬೆಲೆ ಬಂದಾಗ ಮಾತ್ರ ಬೆಳೆಗಾರನ ಬದುಕು ಹಸನಾಗಲು ಸಾಧ್ಯ. ಇಂತಹ ಮೇಳಗಳಿಂದಾಗಿ ಮಾವು, ಹಲಸುಗಳಂತಹ ಬೆಲೆಗಳಿಗೆ ಉತ್ತಮ ಬೆಲೆ ಬರಲು ಸಾಧ್ಯ ಎಂದರು.
ಮೇಳದಲ್ಲಿ ಬಯಲು ಸೀಮೆಯ ಪ್ರಸಿದ್ಧ ಅತ್ಯಂತ ಸಿಹಿಯಾದ ಕೆಂಪು ಹಲಸು, ಸಿಹಿಯಾದ ವಿವಿಧ ತಳಿಗಳ ಮಾವಿನ ಹಣ್ಣುಗಳು, ಹಲಸಿನ ಹಾಗೂ ವಿವಿಧ ಹಣ್ಣಿನ ಐಸ್ಕ್ರೀಂ, ಜ್ಯೂಸ್, ಹಲಸಿನ ಹೋಳಿಗೆ, ದೋಸೆ ಹಾಗೂ ಹಲಸಿನ ವಿವಿಧ ತಾಜಾ ತಿಂಡಿಗಳು, ಹಲಸಿನ ಹಾಗೂ ವಿವಿಧ ಜಾತಿಯ ಹಣ್ಣುಗಳ ಗಿಡಗಳು, ಹೂವಿನ ಗಿಡಗಳು, ತರಕಾರಿ ಬೀಜಗಳು, ಸಾವಯವ ಗೊಬ್ಬರ, ಆಯುರ್ವೇದಿಕ್ ವಸ್ತುಗಳು, ಇತರೆ ಗೃಹ ತಯಾರಿಕ ವಸ್ತುಗಳು ಮಾರಾಟಕ್ಕೆ ಲಭ್ಯವಿದೆ.
ಕಾರ್ಯಕ್ರಮದಲ್ಲಿ ಆಯೋಜಕರಾದ ರಾಜೇಶ್ ಪ್ರಭು, ರಾಕೇಶ್ ಪ್ರಭು, ತಾರೇಶ್ ಕೋಟೆ, ಪ್ರಮುಖರಾದ ಅಜಿತ್ ಗೌಡ, ಶ್ರವಣ್, ಗೌತಮ್, ಭವಿತ್, ದೀಪಕ್ ಪೈ, ದೀಪಕ್, ಜಯರಾಮ ಆಚಾರ್ಯ, ಮಂಜುಪ್ರಸಾದ್, ಮಣಿಕಂಠ ಮತ್ತಿತರರು ಉಪಸ್ಥಿತರಿದ್ದರು. ಸುದ್ದಿ ಚಾನೆಲ್ನ ಪತ್ರಕರ್ತೆ ಸುಮಿತ್ರಾ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.










