






ಪುತ್ತೂರು:ಹನ್ನೊಂದು ವರ್ಷಗಳ ಹಿಂದೆ ಗೋಳಿತೊಟ್ಟು ಸಮೀಪ ನಡೆದಿದ್ದ ಕೊಲೆ ಯತ್ನ ಪ್ರಕರಣವೊಂದರಲ್ಲಿ 8 ಮಂದಿ ಆರೋಪಿಗಳನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ದೋಷಮುಕ್ತಗೊಳಿಸಿದೆ.


2015ರ ನ.13ರಂದು ಮಧ್ಯಾಹ್ನ ಗೋಳಿತೊಟ್ಟು ನಿವಾಸಿ ಮಹಮ್ಮದ್ ಅಶ್ರಫ್ ಎಂಬವರು ತನ್ನ ಬೈಕ್‌ನಲ್ಲಿ ಮೊಹಮ್ಮದ್ ಹಾರೀಸ್ ಎಂಬವರನ್ನು ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಮಸೀದಿಗೆ ಹೋಗಿ ಪ್ರಾರ್ಥನೆ ಮುಗಿಸಿ ಹಿಂತಿರುಗಿ ಬರುತ್ತಿದ್ದಾಗ ಗೋಳಿತೊಟ್ಟು ಪೇಟೆಯಲ್ಲಿ ನಾಲ್ಕು ಬೈಕ್‌ಗಳಲ್ಲಿ 8 ಮಂದಿ ಹಾಗೂ ಮಾರುತಿ ಒಮ್ನಿಯೊಂದರಲ್ಲಿ ಬಂದ ಮೂವರು ಸೇರಿ ಮಹಮ್ಮದ್ ಅಶ್ರಫ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಬೆದರಿಕೆಯೊಡ್ಡಿದ್ದಲ್ಲದೆ,ಬಿಡಿಸಲು ಬಂದ ಮೊಹಮ್ಮದ್ ಹಾರೀಸ್ ಅವರಿಗೂ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಲಾಗಿತ್ತು.ವಿಷಯ ತಿಳಿದು ಅಲ್ಲಿಗಾಗಮಿಸಿದ್ದ ಸ್ಥಳೀಯರು ಹಲ್ಲೆಗೊಳಗಾದವರನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಘಟನೆ ಕುರಿತು ಮೊಹಮ್ಮದ್ ಅಶ್ರಫ್ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.



ಪ್ರಕರಣದ ಆರೋಪಿಗಳಾಗಿ ಕಿರಣ್ ಶಿಸಿಲ ಯಾನೆ ಕಿರಣ್, ಪ್ರಸಾದ್ ಪೂಜಾರಿ,ಸಂತೋಷ್,ರೂಪೇಶ್,ಗಣೇಶ ಬಿ.,ಮೂಲಚಂದ್ರ ಪ್ರಭು,ಗಣೇಶ ಎಂ.,ಜಯಂತ ಎ.,ನಿತ್ಯಾನಂದ ಯಾನೆ ನಿತಿನ್ ಮತ್ತು ಕರುಣಾಕರ ಎ ಎಂಬವರ ವಿರುದ್ಧ ಕಲಂ 143,147,148,326,307,506,149 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.ಬಳಿಕ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ಸಮಯ ಎರಡನೇ ಆರೋಪಿ ಪ್ರಸಾದ್ ಪೂಜಾರಿ ಅವರು ಸಾವಿಗೀಡಾಗಿದ್ದರು.ಒಂದನೇ ಆರೋಪಿ ಕಿರಣ್ ಶಿಸಿಲ ಯಾನೆ ಕಿರಣ್ ನ್ಯಾಯಾಲಯಕ್ಕೆ ವಿಚಾರಣೆಗೆ ಸರಿಯಾಗಿ ಹಾಜರಾಗದೇ ಇದ್ದುದರಿಂದ ಆತನ ವಿರುದ್ಧದ ಪ್ರಕರಣವನ್ನು ಪ್ರತ್ಯೇಕಿಸಿ ಉಳಿದ 8 ಮಂದಿ ವಿರುದ್ಧದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತಗೊಳಿಸಿ ಜೂ.19ರಂದು ತೀರ್ಪು ನೀಡಿದೆ. ಆರು ಜನ ಆರೋಪಿಗಳ ಪರ ವಕೀಲ ಚಿನ್ಮಯ್ ರೈ ಈಶ್ವರಮಂಗಲ ಹಾಗೂ ಆರೋಪಿಗಳಾದ ಮೂಲಚಂದ್ರ, ಜಯಂತ ಅವರ ಪರ ವಕೀಲ ಮಾಧವ ಪೂಜಾರಿ ವಾದಿಸಿದ್ದರು.










