







ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಣಿಯಾರು ಕಾಡು ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಕಸದ ರಾಶಿಯನ್ನು ಎಸೆದು ಪರಿಸರ ಮಾಲಿನ್ಯಕ್ಕೆ ಕಾರಣರಾದವರ ವಿರುದ್ಧ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ. ಕಸ ಎಸೆದವರನ್ನು ಪತ್ತೆ ಹಚ್ಚಿ ರೂ.25 ಸಾವಿರ ದಂಡ ವಿಧಿಸಿದ ಘಟನೆ ಜೂ.23ರಂದು ನಡೆದಿದೆ.



ಘಟನೆಯ ಹಿನ್ನೆಲೆ
ಕೆಯ್ಯೂರು ಗ್ರಾಮ ಪಂಚಾಯತ್ನ ನಿಕಟಪೂರ್ವ ಸದಸ್ಯ ಜಯಂತ ಪೂಜಾರಿ ಕೆಂಗುಡೇಲು ಅವರು ನಿತ್ಯದಂತೆ ಬೆಳಿಗ್ಗೆ ವಾಕಿಂಗ್ಗೆ ತೆರಳಿದ ಸಂದರ್ಭದಲ್ಲಿ, ಕೆಯ್ಯೂರು-ಕಣಿಯಾರು ರಸ್ತೆಯಲ್ಲಿ ಕಣಿಯಾರು ಕಾಡು ರಸ್ತೆಯ ಬದಿಯಲ್ಲಿ ಯಾರೋ ಕಿಡಿಗೇಡಿಗಳು ಕಸದ ಚೀಲವನ್ನು ಎಸೆದು ಹೋಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಈ ವಿಷಯವನ್ನು ಅವರು ಗ್ರಾಮ ಪಂಚಾಯತ್ ಗಮನಕ್ಕೆ ತಂದಿದ್ದಾರೆ.



ಬಿಲ್ ಮೂಲಕ ಸಿಕ್ಕಿತು ಆರೋಪಿಗಳ ಸುಳಿವು
ಸ್ಥಳಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ. ಮತ್ತು ಸಿಬ್ಬಂದಿ ವರ್ಗದವರು ಆಗಮಿಸಿ, ರಸ್ತೆ ಬದಿಯಲ್ಲಿದ್ದ ಕಸದ ಚೀಲವನ್ನು ಪರಿಶೀಲಿಸಿದರು. ಈ ವೇಳೆ, ಆ ಕಸದ ಚೀಲದೊಳಗೆ ಇತ್ತೀಚೆಗೆ ಎಲೆಕ್ಟ್ರಾನಿಕ್ ಅಂಗಡಿಯೊಂದರಲ್ಲಿ ಖರೀದಿಸಿದ್ದ ಮಿಕ್ಸಿಯ ಖರೀದಿ ಬಿಲ್ ಪತ್ತೆಯಾಗಿದೆ. ಬಿಲ್ನಲ್ಲಿ ಇದ್ದ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಪಂಚಾಯತ್ ಅಧಿಕಾರಿಗಳು ಕರೆ ಮಾಡಿ ವಿಚಾರಿಸಿದಾಗ, ಕಸ ಎಸೆದ ವ್ಯಕ್ತಿಗಳ ಸುಳಿವು ಸಿಕ್ಕಿದೆ.
ದಂಡ ವಿಧಿಸಿದ ಪಂಚಾಯತ್
ಸಾರ್ವಜನಿಕ ಸ್ಥಳದಲ್ಲಿ, ಅದರಲ್ಲೂ ಪರಿಸರ ಸೂಕ್ಷ್ಮ ಪ್ರದೇಶವಾದ ಕಾಡಿನ ಹಾದಿಯಲ್ಲಿ ಅಜಾಗರೂಕತೆಯಿಂದ ಕಸ ಎಸೆದು ಸ್ವಚ್ಛತೆಗೆ ಭಂಗ ತಂದಿದ್ದಕ್ಕಾಗಿ, ಗ್ರಾಮ ಪಂಚಾಯತ್ ವತಿಯಿಂದ ಆರೋಪಿಗಳಿಗೆ 25,೦೦೦ ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ. ಗ್ರಾಮ ಪಂಚಾಯತ್ನ ಈ ತ್ವರಿತ ಮತ್ತು ದಿಟ್ಟ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇಂತಹ ಕೃತ್ಯಗಳಲ್ಲಿ ತೊಡಗುವವರಿಗೆ ಇದು ಎಚ್ಚರಿಕೆಯ ಪಾಠವಾಗಿದ್ದು, ಸಾರ್ವಜನಿಕರು ಪರಿಸರ ಸಂರಕ್ಷಣೆಗೆ ಸಹಕರಿಸುವಂತೆ ಪಂಚಾಯತ್ ಆಡಳಿತ ಕೋರಿದೆ. ಈ ಸಂದರ್ಭದಲ್ಲಿ ಪಂಚಾಯತ್ನ ನಿಕಟಪೂರ್ವ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ನಿಕಟಪೂರ್ವ ಸದಸ್ಯ ಜಯಂತ ಪೂಜಾರಿ ಕೆಂಗುಡೇಲು, ಗ್ರಾಪಂ ಸಿಬ್ಬಂದಿ ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಾಡು ರಸ್ತೆಗೆ ಕಸ…!?
ಇದೀಗ ಕಸ ಎಸೆಯುವ ಕಿಡಿಗೇಡಿಗಳು ಪಾಠ ಕಲಿತಿದ್ದು ಸಾರ್ವಜನಿಕ ರಸ್ತೆಯನ್ನು ಬಿಟ್ಟು ಕಾಡು ರಸ್ತೆಗೆ ಕಸ ಎಸೆಯುತ್ತಿರುವುದು ಕಂಡು ಬರುತ್ತಿದೆ. ಕೆಲವೊಂದು ಕಡೆಗಳಲ್ಲಿ ರಾಜರಸ್ತೆಯ ಬದಿಗಳಲ್ಲಿ ಅಲ್ಲಲ್ಲಿ ರಾಶಿ ರಾಶಿ ಕಂಡು ಬಂದರೆ ಇನ್ನುಳಿದಂತೆ ಹಳ್ಳಿಯ ಗ್ರಾಮೀಣ ರಸ್ತೆಗಳ ಬದಿಯಲ್ಲಿ ಕಸ ಎಸೆದು ಹೋಗುತ್ತಿರುವುದು ಕಂಡು ಬರುತ್ತಿದೆ. ಕಸ ಎಸೆದವರನ್ನು ಈ ರೀತಿಯಾಗಿ ಪತ್ತೆ ಹಚ್ಚಿ ದಂಡನೆ ಹಾಕಿದರೆ ಮಾತ್ರ ಕಸ ಎಸೆಯುವವರ ಸಂಖ್ಯೆ ಕಡಿಮೆಯಾಗಬಹುದು ಎನ್ನುವುದು ಸಾರ್ವಜನಿಕ ಆಗ್ರಹವಾಗಿದೆ.









