







ಪುತ್ತೂರು: ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ 4ನೇ ಆವೃತ್ತಿಯಲ್ಲಿ ನೀಡಲಾದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ ರಾಜ್ ಬಿ. ಶೆಟ್ಟಿಯವರ ‘ಸು ಫ್ರಂ ಸೋ’ ಚಿತ್ರದಲ್ಲಿ ಪೋಷಕ ನಟನಾಗಿ ಕಾಣಿಸಿಕೊಂಡಿದ್ದ ದೀಪಕ್ ರೈ ಪಾಣಾಜೆಯವರು ಆಯ್ಕೆಯಾಗಿ ಜೂ.19ರಂದು ಕನ್ನಡ ಸಿನಿ ಸಮ್ಮಾನ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.



ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ‘ಕಾಂತಾರ ಚಾಪ್ಟರ್ 1’ ಹಾಗೂ ಜೆಪಿ ತೂಮಿನಾಡು ನಿರ್ದೇಶಿಸಿ ನಟಿಸಿದ ‘ಸು ಫ್ರಂ ಸೊ’ ಚಿತ್ರಗಳು ಬಹುಪಾಲು ಪ್ರಶಸ್ತಿಗಳನ್ನು ಪಡೆದುಕೊಂಡಿವೆ.
‘ಕಾಂತಾರ’ ಸಿನಿಮಾದಲ್ಲಿನ ‘ಸುಂದರ’ ಎಂಬ ಪಾತ್ರದಲ್ಲಿ ಜನರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದ ಇವರು ಪುತ್ತೂರಿ ಪಾಣಾಜೆಯವರು. ನಂದಿಕೇಶ್ವರ ನಾಟಕ ಸಂಘ, ಶಾರದಾ ಆರ್ಟ್ಸ್ ಮಂಜೇಶ್ವರ, ಮಸ್ಕಿರಿ ಕುಡ್ಲ ಮುಂತಾದ ನಾಟಕ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ‘ಅಜ್ಜಿನ ಗೌಜಿ’ ಇವರು ನಟಿಸಿದ ಮೊದಲ ನಾಟಕ. ಯಕ್ಷಗಾನದಲ್ಲೂ ಹೆಜ್ಜೆ ಹಾಕಿದ್ದಾರೆ. ‘ಸೂಪರ್ಮರ್ಮಯೆ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’, ‘ಹರಿಕಥೆ ಅಲ್ಲ ಗಿರಿಕಥೆ’, ‘ದೂರದರ್ಶನ’, ‘ಜಂಗಲ್ ಮಂಗಲ್’ ಸೇರಿದಂತೆ 70ಕ್ಕೂ ಅಧಿಕ ಕನ್ನಡ ಹಾಗೂ ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಶಾಂತಂ ಪಾಪಂ’ ಹಾಗೂ ‘ಗಟ್ಟಿಮೇಳ’ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.



ತೆಲುಗು, ಕೊಂಕಣಿ ಭಾಷೆಗಳ ಸಿನಿಮಾದಲ್ಲೂ ಬಣ್ಣಹಚ್ಚಿದ್ದಾರೆ.’ಮಜಾ ಭಾರತ’, ‘ಬಲೆ ತೆಲಿಪಾಲೆ’ ಸೇರಿದಂತೆ 600ಕ್ಕೂ ಅಧಿಕ ಕಾಮಿಡಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಸಿನಿಮಾ ತಾರೆಯರಾದ ಬಿ. ಜಯಶ್ರೀ, ದತ್ತಣ್ಣ, ‘ ಶ್ರೀನಾಥ್, ಜಯಮಾಲಾ, ಸುನಿಲ್ ಕುಮಾರ್ ದೇಸಾಯಿ ಅವರಂತಹ ಹಿರಿಯರು, ಸುಮನ್ ಕಿತ್ತೂರು, ತಾರಾ ಅನೂರಾಧ, ಶ್ರುತಿ, ಪೂಜಾ ಗಾಂಧಿ, ರುಕ್ಮಿಣಿ ವಸಂತ ಮೊದಲಾದವರು, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹಿರಿಯ ನಿರ್ದೇಶಕ ಗಿರೀಶ ಕಾಸರವಳ್ಳಿ ಸಿನಿ ಸಮ್ಮಾನದ ಸಂಭ್ರಮಕ್ಕೆ ಸಾಕ್ಷಿಯಾದರು.










