






ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಕಡಬ ತಾಲೂಕು ವತಿಯಿಂದ ಸ.ಹಿ.ಪ್ರಾ. ಶಾಲೆ ಕೊಂಡಾಡಿಕೊಪ್ಪದಲ್ಲಿ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮ ನಡೆಯಿತು.ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಲತಾ ಎಸ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.



“ನೀರನ್ನು ಮಿತವಾಗಿ ಬಳಸಿ, ಪ್ಲಾಸ್ಟಿಕ್‌ನಿಂದ ಆಗುವ ದುಷ್ಪರಿಣಾಮಗಳನ್ನು ಅರಿಯಿರಿ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ” ಎಂದು ಅವರು ಹೇಳಿದರು.ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ, “ಪೂಜ್ಯರ ಆಶಯದಂತೆ ಪರಿಸರ ಉಳಿಸುವ ನಿಟ್ಟಿನಲ್ಲಿ ಯೋಜನೆಯಿಂದ ಸಾಮಾಜಿಕ ಅರಣ್ಯೀಕರಣ ನಡೆಸಲಾಗುತ್ತಿದೆ. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಅಥವಾ ರಾಷ್ಟ್ರೀಯ ಕಾರ್ಯಕ್ರಮದ ದಿನ ಒಂದು ಗಿಡ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ” ಎಂದರು.ಮುಖ್ಯೋಪಾಧ್ಯಾಯ ಜಯಂತ್ ವೈ, “ಸರ್ಕಾರದ ‘ತಾಯಿ ಹೆಸರಲ್ಲಿ ಒಂದು ಗಿಡ’ ಯೋಜನೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಪರಿಸರ ಉಳಿಸುವ ಜವಾಬ್ದಾರಿ ಮನೆಯಿಂದಲೇ ಆರಂಭವಾಗಬೇಕು” ಎಂದು ತಿಳಿಸಿದರು.



ಕಾರ್ಯಕ್ರಮದಲ್ಲಿ ಶರವೂರು ಒಕ್ಕೂಟ ಅಧ್ಯಕ್ಷೆ ವಾರಿಜ ಕೆ.ಸಿ., ಪ್ರಗತಿ ಬಂಧು ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಶಾಲಾ ಆವರಣದಲ್ಲಿ ಗಿಡ ನಾಟಿ ಮಾಡಿ, ಎಲ್ಲಾ ಸದಸ್ಯರಿಗೆ ಗಿಡ ವಿತರಿಸಲಾಯಿತು.ಶೌರ್ಯ ಘಟಕದ ಪ್ರತಿನಿಧಿಗಳು, ಸಂಯೋಜಕಿ ಹಾಗೂ ಸ್ವಯಂ ಸೇವಕರು ಶಾಲೆಯಲ್ಲಿ ಶ್ರಮದಾನ ನಡೆಸಿದರು. ನೂತನ ಶೌರ್ಯ ಘಟಕದ ಪ್ರತಿನಿಧಿಯಾಗಿ ಹರೀಶ್ ಏಂತಡ್ಕ ಅವರನ್ನು ಆಯ್ಕೆ ಮಾಡಲಾಯಿತು.ಅಲಂಕಾರ ವಲಯದ ಮೇಲ್ವಿಚಾರಕಿ ಲತಾ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಸವಿತ ಸ್ವಾಗತಿಸಿ, ಕೃಷಿ ಮೇಲ್ವಿಚಾರಕ ಸೋಮೇಶ್ ವಿ.ಎಂ. ವಂದಿಸಿದರು.









