







ಸಮಾಜಮುಖಿ ಕಾರ್ಯದಿಂದ ಸಂಘದ ಅಭಿವೃದ್ಧಿ- ಝೇವಿಯರ್ ಡಿಸೋಜ


ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಮತ್ತು ರೋಟರ‍್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್ ಇದರ ಸಹಯೋಗದಲ್ಲಿ ಉಚಿತ ಕಣ್ಣು ಪರೀಕ್ಷೆ ಹಾಗೂ ವೈದ್ಯಕೀಯ ಶಿಬಿರ ಜೂ.೨೪ರಂದು ಬೊಳುವಾರು ಫಿಯೋನಿಕ್ಸ್ ಕ್ಲಿನಿಕ್‌ನಲ್ಲಿ ನಡೆಯಿತು.




ರೋಟರಿ ಕ್ಲಬ್ ಝೋನ್5 ರ ಅಸಿಸ್ಟೆಂಟ್ ಗವರ್ನರ್, ನಿವೃತ್ತ ಪ್ರಾಂಶುಪಾಲರೂ ಆದ ಝೇವಿಯರ್ ಡಿಸೋಜರವರು ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿ ಮಾತನಾಡಿ ಸಂಘ ಸಂಸ್ಥೆಗಳು ಸಮಾಜಕ್ಕೆ ಉಪಯೋಗವಾಗುವಂತಹ ಕಾರ್ಯಗಳನ್ನು ಮಾಡಿದಾಗ ಸಂಘವೂ ಬೆಳೆಯುತ್ತದೆ. ಸಮಾಜಕ್ಕೂ ಪ್ರಯೋಜನವಾಗುತ್ತದೆ. ಈ ವೈದ್ಯಕೀಯ ಶಿಬಿರದಿಂದ ಸಮಾಜದ ಒಂದಷ್ಟು ಮಂದಿಗೆ ಸಹಕಾರಿಯಾಗಲಿ ಎಂದು ಹೇಳಿ ಶುಭಹಾರೈಸಿದರು.

ಫಿಯೋನಿಕ್ಸ್ ಕ್ಲಿನಿಕ್‌ನ ಡಾ.ಅನಿಲ್ ಗೊನ್ಸಾಲ್ವಿಸ್ ಮಾತನಾಡಿ ಕರ್ನಾಟಕ ಪತ್ರಕರ್ತರ ಸಂಘದ ಸತತ ಪ್ರಯತ್ನದಿಂದ ಇದೀಗ ಎರಡನೇ ಬಾರಿಗೆ ಶಿಬಿರ ಆಯೋಜಿಸಿದ್ದೇವೆ ಎಂದರು. ಪುತ್ತೂರು ವಿಷನ್ ಐ ಕೇರ್‌ನ ಅಪ್ಟಿಷಿಯನ್ ಸುಜನ್ ಶೆಟ್ಟಿ ಮಾತನಾಡಿ ಇಂದು ನಾವೆಲ್ಲರೂ ಡಿಜಿಟಲ್ ಯುಗದಲ್ಲಿದ್ದೇವೆ. ಕಂಪ್ಯೂಟರ್, ಮೊಬೈಲ್ ಬಳಸುವಾಗ ಕಣ್ಣಿಗೆ ಹೆಚ್ಚಿನ ಶ್ರಮ ಬೀಳುತ್ತದೆ. ಆದುದರಿಂದ ಎಲ್ಲರೂ ಕಣ್ಣಿನ ಆರೋಗ್ಯ ಕಾಪಾಡುವುದು ಅತೀ ಅವಶ್ಯ ಎಂದ ಅವರು ವಿಷನ್ ಐ ಕೇರ್ ವತಿಯಿಂದ ಒಟ್ಟು 36 ಶಿಬಿರ ಆಯೋಜಿಸಿದ್ದು ಇಂದಿನ ಶಿಬಿರ ೩೭ನೇ ಶಿಬಿರವಾಗಿದೆ ಎಂದರು. ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷರಾದ ದತ್ತಾತ್ರೇಯ ರಾವ್ ಮಾತನಾಡಿ ನಮ್ಮ ಗಳಿಕೆಯ ಸ್ವಲ್ಪ ಭಾಗವನ್ನು ಸಮಾಜಕ್ಕೆ ಅರ್ಪಿಸುವುದು ಮುಖ್ಯ. ಇದನ್ನು ಎಲ್ಲಾ ಧರ್ಮವೂ ಹೇಳುತ್ತಿದೆ ಎಂದರು.
ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಧರ್ ರೈ ಕೋಡಂಬು ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಆದಿತ್ಯ ಯಡಪಡಿತ್ತಾಯ ವಂದಿಸಿದರು. ಮಾಜಿ ಉಪಾಧ್ಯಕ್ಷ ಶರತ್ ಕುಮಾರ್ ಪಾರ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಪತ್ರಕರ್ತರ ಸಂಘ ಹಾಗೂ ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದರು.
78 ಶಿಬಿರಾರ್ಥಿಗಳು ಭಾಗಿ- ಉತ್ತಮ ಪ್ರತಿಕ್ರಿಯೆ
ಶಿಬಿರದಲ್ಲಿ ಫಿಯೋನಿಕ್ಸ್ ಕ್ಲಿನಿಕ್‌ನ ಡಾ.ಅನಿಲ್ ಗೊನ್ಸಾಲ್ವಿಸ್ ಬಿಪಿ ಮತ್ತು ಶುಗರ್ ಪರೀಕ್ಷೆ ಹಾಗೂ ಹೋಮಿಯೋಪತಿ ಚಿಕಿತ್ಸೆ ನಡೆಸಿದರು. ವಿಷನ್ ಐ ಕೇರ್‌ನ ಅಪ್ಟಿಷಿಯನ್ ಸುಜನ್‌ರಾಜ್ ಶೆಟ್ಟಿ ಉಚಿತ ಕಣ್ಣು ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಉಚಿತವಾಗಿ ಕನ್ನಡಕ ವಿತರಿಸಿದರು. ಆರೋಗ್ಯ ತಪಾಸಣೆ ಹಾಗೂ ಕಣ್ಣು ತಪಾಸಣೆಯಲ್ಲಿ ಒಟ್ಟು 78 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ರೋಟರ‍್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಸಹಕರಿಸಿದರು.
ವಿಷನ್ ಐ ಕೇರ್‌ನಿಂದ 58 ಮಂದಿಗೆ ಉಚಿತ ಕಣ್ಣು ಪರೀಕ್ಷೆ
ಶಿಬಿರದ ನೇತ್ರ ತಜ್ಞ, ವಿಷನ್ ಐ ಕೇರ್‌ನ ಸುಜನ್‌ರಾಜ್ ಶೆಟ್ಟಿಯವರು 58 ಮಂದಿಗೆ ಉಚಿತ ಕಣ್ಣು ತಪಾಸಣೆ ನಡೆಸಿದರು. ಇದರಲ್ಲಿ ಕನ್ನಡಕದ ಬೇಡಿಕೆ ಇದ್ದವರಿಗೆ ರೀಡಿಂಗ್ ಕನ್ನಡಕ ಉಚಿತವಾಗಿ ನೀಡಿ ಸಹಕರಿಸಿದರು.










