






ಪುತ್ತೂರು: ಬ್ಯಾಂಕ್ ಆಫ್ ಬರೋಡ ಸಂಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಕಾವು ಈಶ್ವರಮಂಗಲ ಗ್ರಾಮ ಸಮಿತಿ ಆಶ್ರಯದಲ್ಲಿ ಲಯನ್ಸ್ ಜಿಲ್ಲೆ 317ಡಿ, ಪ್ರಾಂತ್ಯ 7, ವಲಯ 2ರ ಲಯನ್ಸ್ ಕ್ಲಬ್ ಪುತ್ತೂರು ಕಾವು ಸಹಯೋಗದೊಂದಿಗೆ 15 ದಿನಗಳ ಉಚಿತ ಎಂಬ್ರಾಯ್ಡರಿ(ಕಸೂತಿ) ತರಬೇತಿ ಶಿಬಿರದ ಸಮಾರೋಪ ಸಮಾರಂಭ ಜೂ.25ರಂದು ಕಾವು ಅಕ್ಷಯ ಕಾಂಪ್ಲೆಕ್ಸ್ನ ಲಯನ್ಸ್ ಕ್ಲಬ್ ಕಛೇರಿಯಲ್ಲಿ ಜರಗಿತು.



ನಾನೇ ವರ್ಷಕ್ಕೆ 500 ಜೊತೆ ಶಾಲಾ ಸಮವಸ್ತ್ರವನ್ನು ಹೊಲಿಸಲು ನೀಡಬಲ್ಲೆ-ಹೇಮನಾಥ ಶೆಟ್ಟಿ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾವು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹಾಗೂ ಲಯನ್ಸ್ ಕ್ಲಬ್ ಪುತ್ತೂರು ಕಾವು ಸ್ಥಾಪಕಾಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ, ಮಹಿಳೆಯರು ಮುಂದೆ ಬರಬೇಕು, ಸ್ವಾವಲಂಭಿ ಜೀವನ ನಡೆಸಬೇಕು ಎನ್ನುವ ಉದ್ಧೇಶದಿಂದ ಸರಕಾರ ಕೂಡ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಸಂಘಟಕರು ಈ ಭಾಗದ ಮಹಿಳೆಯರಿಗೆ ಉಪಯೋಗವಾಗಲೆಂದು ಎಂಬ್ರಾಯ್ಡರಿ(ಕಸೂತಿ) ಶಿಬಿರವನ್ನು ಯಶಸ್ವಿಯಾಗಿ ಹಮ್ಮಿಕೊಂಡಿದೆ. ಈ ಯೋಜನೆ ಇಲ್ಲಿಗೆ ಸೀಮಿತವಾಗಬಾರದು. ಶಿಬಿರಾರ್ಥಿಗಳಲ್ಲಿ ಒಂದು ಸಂಘವನ್ನು ಕಟ್ಟಿಕೊಂಡು, ಅದರಲ್ಲಿ ಇಂತಿಷ್ಟೆ ಹಣವನ್ನು ಜೋಡಣೆ ಮಾಡಿಕೊಂಡು, ಬ್ಯಾಂಕ್ ಸಾಲದೊಂದಿಗೆ ಉತ್ತಮ ಮಾರ್ಕೆಟಿಂಗ್ ಜೊತೆಗೆ ಟೈಲರಿಂಗ್ ಯೋಜನೆಯನ್ನು ಹಮ್ಮಿಕೊಂಡಲ್ಲಿ ನಾನೇ ವರ್ಷಕ್ಕೆ 500 ಜೊತೆ ಶಾಲಾ ಸಮವಸ್ತ್ರವನ್ನು ಹೊಲಿಸಲು ನೀಡಬಲ್ಲೆ. ಆದರೆ ಶಿಬಿರಾರ್ಥಿಗಳಿಗೆ ಯೋಜನೆಯನ್ನು ಮುಂದುವರಿಸುವಲ್ಲಿ ಮನಸ್ಸು ಬೇಕಾಗಿದೆ ಎಂದರು.



ಉದ್ಯಮದಲ್ಲಿ ಬೆಳೆಯಬಲ್ಲೆ ಎಂಬ ಆತ್ಮವಿಶ್ವಾಸದಿಂದ ಮುಂದುವರೆಯಿರಿ-ಜ್ಯೋತಿರಾಜ್:
ಮುಖ್ಯ ಅತಿಥಿ, ಬ್ಯಾಂಕ್ ಆಫ್ ಬರೋಡಾ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ಮಾತನಾಡಿ, ಶಿಬಿರಾರ್ಥಿಗಳು ಶಿಬಿರದ ಮೂಲಕ ಪ್ರಯೋಜನ ಪಡೆದುಕೊಂಡರೂ ಇದನ್ನು ಇಲ್ಲಿಗೆ ನಿಲ್ಲಿಸದೆ ಮುಂದೆ ತಾನು ಈ ಉದ್ಯಮದಲ್ಲಿ ಬೆಳೆಯಬಲ್ಲೆ ಎಂಬ ಆತ್ಮವಿಶ್ವಾಸದೊಂದಿಗೆ ಮುಂದುವರೆಯಲು ನಮ್ಮ ಬ್ಯಾಂಕ್ ಸದಾ ಸನ್ನದ್ಧವಾಗಿದೆ. ಶಿಬಿರಾರ್ಥಿಗಳು ನಿಮ್ಮಲ್ಲಿ ಗುಂಪು ಮಾಡಿ, ಚಟುವಟಿಕೆಗಳನ್ನು ಹಮ್ಮಿಕೊಳ್ಳಿ, ಆದಾಯವನ್ನು ಹೇಗೆ ಗಳಿಸಬಹುದು ಎಂದು ತಿಳಿದುಕೊಳ್ಳುವಂತಾಗಬೇಕು ಎಂದು ಹೇಳಿ ಗ್ರಾಮೀಣ ಜನತೆಗೆ ಬ್ಯಾಂಕ್ನಿಂದ ಸಿಗುವ ಸಾಲ-ಸೌಲಭ್ಯಗಳ ಬಗ್ಗೆ ವಿವರಿಸಿದರು.
ಕಲಿತ ಕಸುಬು ನಿತ್ಯ ಜೀವನದಲ್ಲಿ ಮುಂದುವರೆಸಿ ಲಾಭ ಗಳಿಸಿ-ಇಬ್ರಾಹಿಂ ಹಾಜಿ:
ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಕೆ.ಇಬ್ರಾಹಿಂ ಹಾಜಿ ಮಾತನಾಡಿ, ಕೇವಲ ಹದಿನೈದು ದಿನಗಳಲ್ಲಿಯೇ ಶಿಬಿರಾರ್ಥಿಗಳು ಹೊಲಿಗೆ ಕಸೂತಿಯನ್ನು ಉತ್ತಮವಾಗಿ ಕಲಿತಿರುವುದು ಹೆಮ್ಮೆ ಎನಿಸಿದೆ ಕಾರಣ ತರಬೇತುದಾರೆ ವಿಶಾಲಾಕ್ಷಿ ಕಾಟುಕುಕ್ಕೆಯವರು. ನಾವು ಕಲಿತ ಕಸುಬು ಅದು ನಮ್ಮ ನಿತ್ಯ ಜೀವನದಲ್ಲಿ ಮುಂದುವರೆಸಿ ಲಾಭ ಗಳಿಸಿದಾಗ ಮಾತ್ರ ನಮ್ಮ ಕಸುಬಿಗೆ ಅರ್ಥ ಬರುತ್ತದೆ ಮಾತ್ರವಲ್ಲ ಇಂತಹ ಶಿಬಿರ ಏರ್ಪಡಿಸಿರುವುದು ಪ್ರಯೋಜನಕ್ಕೆ ಬರುತ್ತದೆ. ಲಯನ್ಸ್ ಕ್ಲಬ್ ಕಾವು ಮುಖ್ಯ ಆಸ್ತಿ ಅದು ಹೃದಯವಂತ ಸದಸ್ಯರು ಆಗಿದ್ದು ಅವರ ಪ್ರೋತ್ಸಾಹದಿಂದ ಇಂದು ಯಶಸ್ವಿ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಕಲೆಯನ್ನು ಮುಂದುವರೆಸಿ ಸಮೃದ್ಧ ಜೀವನ ನಿಮ್ಮದಾಗಲಿ-ರಮೇಶ್ ರೈ ಸಾಂತ್ಯ:
ಲಯನ್ಸ್ ವಲಯ ರಾಯಭಾರಿ ರಮೇಶ್ ರೈ ಸಾಂತ್ಯ ಮಾತನಾಡಿ, ಈ ಶಿಬಿರದ ಆರಂಭದಲ್ಲಿ ನೋಡಿದಾಗ ಈ ಶಿಬಿರ ಇಷ್ಟೊಂದು ಯಶಸ್ವಿಯಾಗುತ್ತದೆ ಅಂತ ಧೈರ್ಯ ಇರಲಿಲ್ಲ. ಕೇವಲ ಹದಿನೈದು ದಿನಗಳಲ್ಲಿ ನಿಮ್ಮ ಬ್ಲೌಸ್ ಅನ್ನು ವಿವಿಧ ವಿನ್ಯಾಸದಲ್ಲಿ ಹೊಲಿಸಿರುವುದು ನೋಡಿದಾಗ ಶೇ.99 ಪರಿಣತಿ ಹೊಂದಿದ ಹಾಗೇಯೇ. ಮುಂದಿನ ದಿನಗಳಲ್ಲಿ ಈ ಕಲೆಯನ್ನು ಮುಂದುವರೆಸಿಕೊಂಡು ಹೋಗಿ ಸಮೃದ್ಧ ಜೀವನ ನಿಮ್ಮದಾಗಲಿ ಎಂದರು.
ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯ ಜಯಪ್ರಕಾಶ್ ರೈ, ಕಾವು ಬ್ಯಾಂಕ್ ಆಫ್ ಬರೋಡ ಶಾಖೆಯ ಪ್ರಬಂಧಕ ಅರುಣ್ ಕುಮಾರ್,
ಲಯನ್ಸ್ ಕ್ಲಬ್ ಪುತ್ತೂರು ಕಾವು ಕೋಶಾಧಿಕಾರಿ ರಮೇಶ್ ಆಳ್ವ, ಪ್ರಮುಖರಾದ ಮೋಹನ್ದಾಸ್ ಶೆಟ್ಟಿ, ಮಹಾಬಲ ರೈ, ಪ್ರವೀಣ್ ರೈ, ಕಾರ್ತಿಕ್ ರೈ, ಕುಶಾಲಪ್ಪ ಗೌಡ, ಸುರೇಖಾ ಡಿ.ಶೆಟ್ಟಿ, ಬಿ.ಕೆ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಭವಿತ, ರಶ್ಮಿ, ಅಶ್ವಿಕ ಪ್ರಾರ್ಥಿಸಿದರು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾವು ಈಶ್ವರಮಂಗಲ ಘಟಕದ ಅಧ್ಯಕ್ಷ ಬಿ.ಪಾವನರಾಮರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಬಿರಾರ್ಥಿಗಳಾದ ಪೂರ್ಣಿಮಾ, ಕಸ್ತೂರಿ, ದೀಪ್ತಿ, ಸೋನಿಯಾ, ಕಲ್ಪನಾ, ಶೋಭಾ, ರಶ್ಮಿರವರು ಶಿಬಿರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಲಯನ್ಸ್ ಕ್ಲಬ್ ಪುತ್ತೂರು ಕಾರ್ಯದರ್ಶಿ ದೇವಣ್ಣ ರೈ ಕಾಯಕ್ರಮ ನಿರೂಪಿಸಿದರು.
ತರಬೇತುದಾರೆ ವಿಶಾಲಾಕ್ಷಿರವರಿಗೆ ಸನ್ಮಾನ..
ಈ ಸಂದರ್ಭದಲ್ಲಿ ಶಿಬಿರವನ್ನು ಯಶಸ್ವಿಗೊಳಿಸಿದ ತರಬೇತುದಾರೆ ಶ್ರೀಮತಿ ವಿಶಾಲಾಕ್ಷಿ ಕಾಟುಕುಕ್ಕೆರವರನ್ನು ಲಯನ್ಸ್ ಕ್ಲಬ್ ಪುತ್ತೂರು ಕಾವು ಹಾಗೂ ಬ್ಯಾಂಕ್ ಆಫ್ ಬರೋಡ ಸಂಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಜೊತೆಗೆ ತಮಗೆ ತಾಳ್ಮೆಯಿಂದ ಉತ್ತಮ ರೀತಿಯಲ್ಲಿ ತರಬೇತಿ ನೀಡಿದ ತರಬೇತುದಾರೆ ಶ್ರೀಮತಿ ವಿಶಾಲಾಕ್ಷಿರವರಿಗೆ ಶಿಷ್ಯ ಶಿಬಿರಾರ್ಥಿಗಳಿಂದ ಸನ್ಮಾನ ವ್ಯಕ್ತವಾಗಿದ್ದು ತರಬೇತುದಾರೆ ವಿಶಾಲಾಕ್ಷಿರವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ಪ್ರಶಸ್ತಿ ಪತ್ರ ವಿತರಣೆ..
ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ೩೦ ಮಂದಿ ಮಹಿಳೆಯರಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಈ ಪ್ರಶಸ್ತಿ ಪತ್ರದೊಂದಿಗೆ ತರಬೇತುದಾರೆ ಶ್ರೀಮತಿ ವಿಶಾಲಾಕ್ಷಿರವರು ತಮ್ಮ ವತಿಯಿಂದ ಕರ್ಚಿಫ್ ಅನ್ನು ಉಡುಗೊರೆಯಾಗಿ ನೀಡಿದರು.
-ನಾನೇ ವರ್ಷಕ್ಕೆ 500 ಜೊತೆ ಶಾಲಾ ಸಮವಸ್ತ್ರವನ್ನು ಹೊಲಿಸಲು ನೀಡಬಲ್ಲೆ-ಹೇಮನಾಥ ಶೆಟ್ಟಿ
-ಉದ್ಯಮದಲ್ಲಿ ಬೆಳೆಯಬಲ್ಲೆ ಎಂಬ ಆತ್ಮವಿಶ್ವಾಸದಿಂದ ಮುಂದುವರೆಯಿರಿ-ಜ್ಯೋತಿರಾಜ್
-ಕಲಿತ ಕಸುಬು ನಿತ್ಯ ಜೀವನದಲ್ಲಿ ಮುಂದುವರೆಸಿ ಲಾಭ ಗಳಿಸಿ-ಇಬ್ರಾಹಿಂ ಹಾಜಿ
-ಕಲೆಯನ್ನು ಮುಂದುವರೆಸಿ ಸಮೃದ್ಧ ಜೀವನ ನಿಮ್ಮದಾಗಲಿ-ರಮೇಶ್ ರೈ ಸಾಂತ್ಯ










