







ಕೋಶಾಧಿಕಾರಿ:ಮೌನೇಶ್ ವಿಶ್ವಕರ್ಮ,ಅಸಿಸ್ಟೆಂಟ್ ಗವರ್ನರ್:ಅಬ್ದುಲ್ ರಝಾಕ್ ಕಬಕಕಾರ್ಸ್






ಪುತ್ತೂರು:ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಎಲೈಟ್ ನ 2026-27ರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನೆರವೇರಿದ್ದು ಅಧ್ಯಕ್ಷರಾಗಿ ನ್ಯಾಯವಾದಿ ಮೊಹಮ್ಮದ್ ಶಾಕೀರ್ ಮಿತ್ತೂರು, ಕಾರ್ಯದರ್ಶಿಯಾಗಿ ಸುಶಾಂತ್ ಹಾರ್ವಿನ್, ಕೋಶಾಧಿಕಾರಿ ಹಾಗೂ ಬುಲೆಟಿನ್ ಎಡಿಟರ್ ಆಗಿ ಪತ್ರಕರ್ತ ಮೌನೇಶ್ ವಿಶ್ವಕರ್ಮರವರು ಆಯ್ಕೆಯಾಗಿದ್ದಾರೆ.
ಉಳಿದಂತೆ ನಿಕಟಪೂರ್ವ ಅಧ್ಯಕ್ಷರಾಗಿ ಸಿಲ್ವಿಯಾ ಡಿ’ಸೋಜ, ಉಪಾಧ್ಯಕ್ಷ ಹಾಗೂ ನಿಯೋಜಿತ ಅಧ್ಯಕ್ಷರಾಗಿ ರಾಮ ಕೆ, ಎಕ್ಸಿಕ್ಯೂಟಿವ್ ಕಾರ್ಯದರ್ಶಿಯಾಗಿ ಆಸ್ಕರ್ ಆನಂದ್, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಹಾಗೂ ಅಡ್ವೈಸರ್ ಆಗಿ ರೆ.ವಿಜಯ ಹಾರ್ವಿನ್, ಕ್ಲಬ್ ಸರ್ವಿಸ್ ಚೇರ್ಮನ್ ಈಶ್ವರ್ ಬೆಡೇಕರ್, ಕ್ಲಬ್ ಪಬ್ಲಿಕ್ ಇಮೇಜ್ ಚೇರ್ಮನ್ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಕ್ಲಬ್ ವೊಕೇಶನಲ್ ಸರ್ವೀಸ್ ಚೇರ್ಮನ್ ಹರಿಣಿ ಪುತ್ತೂರಾಯ, ಕಮ್ಯೂನಿಟಿ ಸರ್ವೀಸ್ ಚೇರ್ಮನ್ ಜಯಕುಮಾರ್ ನಾಯರ್, ಇಂಟರ್ನ್ಯಾಷನಲ್ ಸರ್ವಿಸ್ ಚೇರ್ಮನ್ ಡಾ.ಸಚಿನ್ ಶಂಕರ್, ಕ್ಲಬ್ ಮೆಂಬರ್ ಶಿಪ್ ಚೇರ್ಮನ್ ಸುಧೀರ್ ಆಚಾರ್ಯ, ಕ್ಲಬ್ ಸರ್ವಿಸ್ ಪ್ರಾಜೆಕ್ಟ್ ಚೇರ್ಮನ್ ದೇವರಾಜ್ ಆರ್, ಕ್ಲಬ್ ಫೌಂಡೇಶನ್ ಚೇರ್ಮನ್ ಹಾಗೂ ಟಿ.ಆರ್.ಎಫ್ ಚೇರ್ಮನ್ ಆಗಿ ಮಾಧವ ಗೌಡ, ನ್ಯೂ ಜನರೇಶನ್ ಚೇರ್ಮನ್ ಪದ್ಮಾವತಿ, ಪಲ್ಸ್ ಪೋಲಿಯೊ ಚೇರ್ಮನ್ ಡಾ.ನಾಗಶ್ರೀರವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರ ಪರಿಚಯ:
ಕ್ಲಬ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಡ್ವಕೇಟ್ ಮಹಮ್ಮದ್ ಶಾಕೀರ್ ಕೆ.ಮಿತ್ತೂರುರವರು ಕಾನೂನು ಕ್ಷೇತ್ರದಲ್ಲಿ ತಮ್ಮ ವೃತ್ತಿಪರತೆ, ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ನಾಯಕತ್ವ, ಸಮಾಜಸೇವೆಯಲ್ಲಿ ತಮ್ಮ ಬದ್ಧತೆ ಮತ್ತು ಸಂಘಟನಾ ಚಟುವಟಿಕೆಗಳಲ್ಲಿ ತಮ್ಮ ಸಮರ್ಪಣೆಯ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿರುವ ವ್ಯಕ್ತಿತ್ವ ಅವರದ್ದಾಗಿದೆ. 1986ರ ಏಪ್ರಿಲ್ 1ರಂದು ದಿ.ಉಸ್ಮಾನ್ ಹಾಜಿ ಮಿತ್ತೂರು ಹಾಗೂ ಜುಬೈದಾ ದಂಪತಿಯ ಪುತ್ರರಾಗಿ ಜನಿಸಿದ ಅವರು, ಸಂತ ಫಿಲೋಮಿನಾ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದು, ಬಳಿಕ ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯದ ಅಡಿಯಲ್ಲಿ ಎಂ.ಬಿ.ಎ. ಪದವಿಯನ್ನೂ ಸಂಪಾದಿಸಿ 2009ರಿಂದ ವಕೀಲರಾಗಿ ನ್ಯಾಯಾಂಗ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಕಾರ್ಯದರ್ಶಿಯಾಗಿ ಹಾಗೂ ಮುಹಿಮೃತುಲ್ ಮುಸ್ಲಿಮೀನ್ ಎಜುಕೇಷನಲ್ ಸೆಂಟರ್ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಎಂ-ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್, ಯುನೈಟೆಡ್ ಲೀಗಲ್ ರಿಸರ್ಚ್ ಅಂಡ್ ಜಸ್ಟಿಸ್ ಟ್ರಸ್ಟ್ನ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಡ್ವಕೇಟ್ ಮಹಮ್ಮದ್ ಶಾಕೀರ್ರವರು ರೋಟರಿ ಕ್ಲಬ್ ಪುತ್ತೂರು ಎಲೈಟ್ನ ಸಕ್ರಿಯ ಸದಸ್ಯರಾಗಿ, ಪ್ರಸ್ತುತ ರೋಟರಿ ಪುತ್ತೂರು ಇಲೈಟ್ನ 2026-27ನೇ ಸಾಲಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸುಶಾಂತ ಹಾರ್ವಿನ್ ಅವರು ಪರಿಸರದ ಬಗ್ಗೆ ವಿಶೇಷ ಕಾಳಜಿ ಹಾಗೂ ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಆಸಕ್ತಿ ಇರುವ ವ್ಯಕ್ತಿತ್ವ ಉಳ್ಳವರು. ಸುದಾನ ವಿದ್ಯಾಸಂಸ್ಥೆಯ ಸಂಸ್ಥಾಪಕರಾಗಿರುವ ರೆ.ವಿಜಯ ಹಾರ್ವಿನ್ ಮತ್ತು ಪ್ರವೀಣ ಗ್ರೇಸ್ ಹನ್ಸ್ ದಂಪತಿಯ ಪುತ್ರನಾಗಿ 1987ರ ಮಾರ್ಚ್ 13ರಂದು ಜನಿಸಿದ ಸುಶಾಂತ್ ಹಾರ್ವಿನ್, ಸುದಾನ ವಸತಿ ಶಾಲೆಯಲ್ಲಿ ಶಿಕ್ಷಣದ ಭದ್ರ ಅಡಿಪಾಯ ಹಾಕಿಕೊಂಡರು. ವಿವೇಕಾನಂದ ಪಿಯು ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ವೃತ್ತಿ ಜೀವನದಲ್ಲಿ ವೆಲ್ಡಿಂಗ್ ಹಾಗೂ ತಾಂತ್ರಿಕ ಪರಿಶೀಲನಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಪರಿಣತಿಯನ್ನು ಗಳಿಸಿದ್ದಾರೆ. CSWIP 3.1 Certified Welding Inspector, NACE Level-1 Coating Inspector ಮತ್ತು ASNT Level-II ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ಗ್ರೀಸ್, ಓಮನ್ ಮತ್ತು ಪಪುವಾ ನ್ಯೂಗಿನಿ,Oil & Gas, Marine, Shipbuilding ಅಧಿಕ ಅಂತರರಾಷ್ಟ್ರೀಯ ಅನುಭವವನ್ನು ಸಂಪಾದಿಸಿದ್ದಾರೆ. ಇದೀಗ ಸುದಾನ ಶಿಕ್ಷಣ ಸಂಸ್ಥೆಗಳ ಸಮೂಹದಲ್ಲಿ ಆಡಳಿತಾಧಿಕಾರಿಯಾಗಿ, ಸುದಾನ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಜೊತೆಗೆ ನರ್ಸರಿ ಉದ್ಯಮವನ್ನು ನಿರ್ವಹಿಸುತ್ತಿದ್ದಾರೆ.
ನೂತನ ಅಸಿಸ್ಟೆಂಟ್ ಗವರ್ನರ್ ಪರಿಚಯ:
ಕ್ಲಬ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅಸಿಸ್ಟೆಂಟ್ ಗವರ್ನರ್ ಆಗಿ ಆಯ್ಕೆಯಾದ ಅಬ್ದುಲ್ ರಜಾಕ್ ಕಬಕಕಾರ್ಸ್ 1975ರ ಮೇ 23ರಂದು ಕಬಕದ ಪ್ರತಿಷ್ಠಿತ ಕಬಕಕಾರ್ಸ್ ಕುಟುಂಬದಲ್ಲಿ ಹಾಜಿ ಅಬ್ದುಲ್ ರಹಿಮಾನ್ ಮತ್ತು ಸಾರಾ ದಂಪತಿಯ ಆರು ಮಕ್ಕಳಲ್ಲಿ ಕಿರಿಯವರಾಗಿ ಜನಿಸಿದರು. ಪುಣೆಯಲ್ಲಿ ಸಿವಿಲ್ ಇಂಜಿನಿಯರಿAಗ್ ಡಿಪ್ಲೊಮಾ ಪದವಿ ಮುಗಿಸಿ ಚಿಕ್ಕ ವಯಸ್ಸಿನಲ್ಲಿಯೇ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ವಿ ಉದ್ಯಮಿಯಾಗಿ ಬೆಳೆದ ಇವರು ಇಂದು ಪಿಡಬ್ಲ್ಯೂಡಿ ಪ್ರಥಮ ದರ್ಜೆ ಗುತ್ತಿಗೆದಾರರಾಗಿ ಗುರುತಿಸಿಕೊಂಡಿದ್ದಾರೆ ಹಾಗೂ ಶಿಪ್ ಇಂಟರ್ಲಾಕ್ಸ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. 1994ರಲ್ಲಿ ರೋಟರಿ ಪುತ್ತೂರು ಈಸ್ಟ್ನಲ್ಲಿ ಆನೆಟ್ ಆಗಿ ಆರಂಭವಾದ ಅವರ ಸೇವಾ ಪಯಣ, ಬಳಿಕ ರೋಟರ್ಯಾಕ್ಟ್, 2000ರಿಂದ 2015ರವರೆಗೆ ರೋಟಯಾಕ್ಟ್ ಕ್ಲಬ್ ಆಫ್ ಪುತ್ತೂರಿನ ಸಕ್ರಿಯ ಸದಸ್ಯರಾಗಿ ಬಳಿಕ ಕಾರ್ಯದರ್ಶಿ, ಅಧ್ಯಕ್ಷ, ವಲಯ ಪ್ರತಿನಿಧಿ ಹಾಗೂ ಜಿಲ್ಲಾ ರೋಟರ್ಯಾಕ್ಟ್ ಪ್ರತಿನಿಧಿ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. 2008ರಲ್ಲಿ ಪುತ್ತೂರಿನಿಂದ ಪೌಲ್ ಹ್ಯಾರಿಸ್ ಫೆಲೋ ಗೌರವ ಪಡೆದ ಮೊದಲ ರೋಟರ್ಯಾಕ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು, 2014-15ರಲ್ಲಿ ಜಿಲ್ಲಾ ರೋಟರ್ಯಾಕ್ಟ್ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು. ಭಾರತದ ಹತ್ತು ರೋಟರಿ ಜಿಲ್ಲೆಗಳನ್ನು ಒಗ್ಗೂಡಿಸಿ ಊಟಿಯಲ್ಲಿ ಮಲ್ಟಿ ಡಿಸ್ಟ್ರಿಕ್ಟ್ ಕಾನ್ಸರೆನ್ಸ್ ಆಯೋಜಿಸಿದ ಸಾಧನೆ ಇವರದು. ಇವರ ಸೇವೆಯನ್ನು ಗುರುತಿಸಿ ರೋಟರಿ ಇಂಟರ್ನ್ಯಾಷನಲ್ ಸೌತ್ ಏಷ್ಯಾದಿಂದ “ಬೆಸ್ಟ್ ಡಿಆರ್ಆರ್ ಇನ್ ಸೌತ್ ಏಷ್ಯಾ” ಪ್ರಶಸ್ತಿ ಸಹಿತ ಜಿಲ್ಲೆಗೆ ಏಳು ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದೆ. 2020ರಲ್ಲಿ ರೋಟರಿ ಕ್ಲಬ್ ಆಫ್ ಪುತ್ತೂರು ಇಲೈಟ್ನ ಚಾರ್ಟರ್ ಸದಸ್ಯರಾಗಿ ಸೇರ್ಪಡೆಗೊಂಡ ಅವರು, 2023-24ರಲ್ಲಿ ಕ್ಲಬ್ ಅಧ್ಯಕ್ಷರಾಗಿ ಮುನ್ನಡೆಸಿದರು. 2024-25ರಲ್ಲಿ ವಲಯ 5ರ ರೋಟರ್ಯಾಕ್ಟ್ ಸಂಯೋಜಕರಾಗಿ ಸೇವೆ ಸಲ್ಲಿಸಿದ ಇವರ ಸೇವೆ ಮತ್ತು ನಾಯಕತ್ವಕ್ಕೆ ಐದು ಬಾರಿ “ನವರತ್ನ ಆಫ್ ಡಿಸ್ಟ್ರಿಕ್ಟ್” ಪ್ರಶಸ್ತಿ, ಜನಪದ ಪಯಸ್ವಿನಿ ಪ್ರಶಸ್ತಿ, ಅತ್ಯುತ್ತಮ ಕಾರ್ಯದರ್ಶಿ, ಅತ್ಯುತ್ತಮ ಅಧ್ಯಕ್ಷ, ಅತ್ಯುತ್ತಮ ವಲಯ ಪ್ರತಿನಿಧಿ ಹಾಗೂ “ಬೆಸ್ಟ್ ಡಿಆರ್ಆರ್ ಇನ್ ಸೌತ್ ಏಷ್ಯಾ ” ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಮೌನೇಶ್ ವಿಶ್ವಕರ್ಮರವರು ಕಳೆದ 24 ವರ್ಷಗಳಿಂದ ಪತ್ರಿಕಾರಂಗ ಹಾಗೂ ಮಕ್ಕಳ ರಂಗಭೂಮಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ 2012ರಿಂದ 2018ರವರೆಗೆ ಕಾರ್ಯ ನಿರ್ವಹಿಸಿದ್ದಾರೆ. 2007 ರಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ನೀಡುವ ಯುವ ಕಲಾವಿದರ ಸ್ಕಾಲರ್ ಶಿಪ್ ಹಾಗೂ 2011ರಲ್ಲಿ ಯುನಿಸೆಫ್ ಹಾಗೂ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರವು ನೀಡುವ “ಮಾಧ್ಯಮ ಫೆಲೋಷಿಫ್″ ಗೆ ಮೌನೇಶ್ ಆಯ್ಕೆಯಾಗಿದ್ದರು. ಬಂಟ್ವಾಳದಿಂದ ಕನ್ನಡ ಪ್ರಭ, ಸುದ್ದಿಬಿಡುಗಡೆ ಮತ್ತು ದೈಜಿವರ್ಲ್ಡ್ ನ್ಯೂಸ್ ವೆಬ್ ಸೈಟ್ ನ ವರದಿಗಾರರಾಗಿರುವ ಮೌನೇಶ್ ಮಕ್ಕಳ ರಂಗ ಚಟುವಟಿಕೆಯಲ್ಲೂ ಸಕ್ರಿಯರಾಗಿದ್ದು, ಇವರ ಮಕ್ಕಳ ಮಾತು ಕೃತಿಗೆ ಕರ್ನಾಟಕ ಪುಸ್ತಕ ಪ್ರಾಧಿಕಾರದ ಪುರಸ್ಕಾರ ದೊರೆತಿದೆ. 20ಕ್ಕೂ ಅಧಿಕ ಮಕ್ಕಳ ನಾಟಕ, ವಿಜ್ಞಾನ ನಾಟಕಗಳನ್ನು ಬರೆದಿರುವ ಮೌನೇಶ್ ಪ್ರಸ್ತುತ ಬಂಟ್ವಾಳದಿಂದ ಕನ್ನಡ ಪ್ರಭ ದಿನಪತ್ರಿಕೆ, ಸುದ್ದಿಬಿಡುಗಡೆ, ವರದಿಗಾರರಾಗಿದ್ದಾರೆ. ದ.ಕ.ಜಿಲ್ಲಾ ಪಂಚಾಯತ್ ನ ಎನ್ ಆರ್ ಎಲ್ ಎಂ ನಲ್ಲಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿರುವ ಇವರು, ಅನೇಕ ಸ್ವಸಹಾಯ ಗುಂಪುಗಳ ಬಲವರ್ಧನೆಗೆ ತರಬೇತಿ ನೀಡುತ್ತಿದ್ದಾರೆ. ಬೆಂಗಳೂರಿನ ಐಎಫ್ಎ ಸಂಸ್ಥೆ ಕಲಿಕಲಿಸು ಯೋಜನೆಯಲ್ಲಿ ನೀಡುವ ಅನುದಾನದ ನೆರವಿನಲ್ಲಿ ಕಲ್ಲಡ್ಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಬಹುಮುಖಿ ಕಲಾಪತ್ರಿಕೆಯನ್ನು ಪ್ರಕಟಿಸಿದ್ದಾರೆ. ನಾಟಕ ನಿರ್ದೇಶನ, ನಟನೆಯ ಜೊತೆಗೆ ತರಬೇತುದಾರರಾಗಿ ಗುರುತಿಸಿಕೊಂಡಿದ್ದು, ಸಾವಿರಕ್ಕೂ ಅಧಿಕ ಬೀದಿನಾಟಕಗಳ ಪ್ರದರ್ಶನ, 25ಕ್ಕೂ ಅಧಿಕ ಜಾಗೃತಿ ಜಾಥಾಗಳ ಆಯೋಜನೆ, ನಾಟಕ ರಂಗ ,ಶಿಕ್ಷಣ, ಮಕ್ಕಳ ಹಕ್ಕು , ಪಂಚಾಯತ್ ರಾಜ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುದ್ರಾಡಿ ನಮತುಳುವೆರ್ ಕಲಾ ಸಂಘಟನೆ ಕೊಡಮಾಡುವ ಬಿ.ವಿ.ಕಾರಂತ ಪುರಸ್ಕಾರ, ಕರ್ನಾಟಕ ಪತ್ರಕರ್ತರ ಸಂಘದ ಸಾಂಘಿಕ ಪ್ರಶಸ್ತಿ, ಪೂಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ ಸ್ವಸ್ತಿ ಸಿರಿ ಪ್ರಶಸ್ತಿ, ಸಂಪಾದಕರ ಮತ್ತು ವರದಿಗಾರರ ಸಂಘದಿಂದ ಚೆಲ್ಲಯ್ಯ ನಾಡಾರ್ ಪ್ರಶಸ್ತಿ ಸಹಿತ ಹಲವು ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ.
ಜೂ.26:ಪದ ಪ್ರದಾನ..
ಜೂ.26 ರಂದು ನೆಹರುನಗರದ ಸುದಾನ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಸಂಜೆ ಜರಗಲಿದೆ. ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3181ರ ಮಾಜಿ ಜಿಲ್ಲಾ ಗವರ್ನರ್ ರೋಟೇರಿಯನ್ ವಿಕ್ರಮ ದತ್ತರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಯೆನಪೋಯ (ಡೀಮ್ಡ್ ಟು ಬಿ ಯುನಿವರ್ಸಿಟಿ)ದ ಸುಜಾ ಮೊಹಮ್ಮದ್ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ರೋಟರಿ ಜಿಲ್ಲೆ 3181ರ ವಲಯ-5ರ ಅಸಿಸ್ಟೆಂಟ್ ಗವರ್ನರ್ ಅಬ್ದುಲ್ ರಜಾಕ್ ಕಬಕಕಾರ್ಸ್ ಹಾಗೂ ವಲಯ ಸೇನಾನಿ ಶಶಿಧರ್ ಕಿನ್ನಿಮಜಲು ಉಪಸ್ಥಿತಲಿರುವರು. “Create Lasting Impact” ಎಂಬ ರೋಟರಿ ಧ್ಯೇಯವಾಕ್ಯಗಳೊಂದಿಗೆ ನೂತನ ತಂಡವು ಸಮಾಜಮುಖಿ ಸೇವಾ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಸಂಕಲ್ಪದೊಂದಿಗೆ ಅಧಿಕಾರ ಸ್ವೀಕರಿಸಲಿದ್ದು, ಹೊಸ ಸೇವಾಯೋಜನೆಗಳಿಗೆ ಈ ಸಮಾರಂಭದಲ್ಲಿ ಚಾಲನೆ ಸಿಗಲಿದೆ.









