






ಶಿಕ್ಷಕರೇ ಅಪ್ಡೇಟ್ ಆಗಿ ಇಲ್ಲದಿದ್ದರೆ ಔಟ್ಡೇಟ್ ಆಗುತ್ತೀರಿ : ರಘುರಾಜ್ ಉಬರಡ್ಕ


ಪುತ್ತೂರು: “ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಕಾಲಕಾಲಕ್ಕೆ ಅಪ್ಡೇಟ್ ಆಗದಿದ್ದರೆ ಔಟ್ಡೇಟ್ ಆಗಬೇಕಾಗುತ್ತದೆ. ಕನ್ನಡ-ಆಂಗ್ಲ ಮಾಧ್ಯಮ ಎನ್ನುವ ಟ್ರೆಂಡ್ ಅಂತ್ಯವಾಗಿ ಸರಕಾರಿ, ಖಾಸಗಿ ಶಾಲೆ ಎನ್ನುವ ಹೊಸ ಅಧ್ಯಾಯ ಆರಂಭಗೊಂಡಿದೆ” ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಕ ರಘುರಾಜ್ ಉಬರಡ್ಕ ಅಭಿಪ್ರಾಯಪಟ್ಟರು.




ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜೂ. 25ರಂದು ನಡೆದ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, “ದಶಕಗಳ ಹಿಂದೆ ಶಿಕ್ಷಕರನ್ನು ನೋಡಿ ಮಕ್ಕಳನ್ನು ಶಾಲೆಗೆ ಸೇರಿಸುವ ಪದ್ಧತಿ ಮತ್ತೆ ಪುನರಾವರ್ತನೆಯಾಗುತ್ತಿದೆ. ‘ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬೀಳದೆ’ ಬದಲಾದ ವ್ಯವಸ್ಥೆಯನ್ನು ಒಪ್ಪಿಕೊಂಡು, ಕಾರ್ಯಾಗಾರಗಳ ಅನುಭವವನ್ನು ತರಗತಿಯಲ್ಲಿ ಅನುಷ್ಠಾನಗೊಳಿಸಬೇಕು” ಎಂದರು.ಕಾರ್ಯಾಗಾರವನ್ನು ಸುಳ್ಯ ಸ.ಪ.ಪೂ. ಕಾಲೇಜಿನ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಉದ್ಘಾಟಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ಮಾತನಾಡಿ, “ಶಿಕ್ಷಣದಲ್ಲಿ ಒತ್ತಡದ ಜೊತೆಗೆ ಬದಲಾವಣೆಯೂ ಆಗುತ್ತಿದೆ. ವಿದ್ಯಾರ್ಥಿಗಳನ್ನು ಸಮಾಜಮುಖಿ ಬೆಳವಣಿಗೆಯಲ್ಲಿ ಗಟ್ಟಿ ಮಾಡಿದಾಗ ಮಾತ್ರ ಸಮಾಜ ಭದ್ರವಾಗುತ್ತದೆ. ತರಬೇತಿ ಒಂದು ದಿನಕ್ಕೆ ಸೀಮಿತವಾಗದೆ, ಪಡೆದ ಜ್ಞಾನ ವಿದ್ಯಾರ್ಥಿಗಳಿಗೆ ನಿರಂತರವಾಗಿ ತಲುಪಬೇಕು” ಎಂದರು.ಶಿಕ್ಷಕಿ ಲತಾ ಶಂಕರಿ ಸ್ವಾಗತಿಸಿದರು. ಸಮಾಜ ವಿಜ್ಞಾನ ವರ್ತುಲ ಸಂಯೋಜಕಿ ಸೌಮ್ಯಕುಮಾರಿ ವಂದಿಸಿದರು. ಗೀತಾ ನಿರೂಪಿಸಿದರು.

ಪ್ರಾಯೋಗಿಕ ತರಬೇತಿಯ ಹೈಲೈಟ್ಸ್
ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಮೂಡಿತ್ತಾಯ ಅವರು ಗೋಳದ ಪರಿಕಲ್ಪನೆ, ವಿನ್ಯಾಸ, ಬಳಕೆ, ಪ್ರಯೋಜನ ಹಾಗೂ ತರಗತಿಯಲ್ಲಿ ಗೋಳದ ಚಟುವಟಿಕೆ ಮೂಲಕ ಕಲಿಕಾ ಶಕ್ತಿ ವೃದ್ಧಿಸುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿದರು. ನಕಾಶೆ ಪರಿಚಯದೊಂದಿಗೆ ಪ್ರಪಂಚ, ದೇಶ, ರಾಜ್ಯ, ಜಿಲ್ಲೆಗೆ ಸೀಮಿತವಾಗಿರದೆ, ಸ್ಕೇಲ್ ಮಾನದಂಡ ಬಳಸಿ ಮನೆ ಹಾಗೂ ಶಾಲೆಯ ನಕ್ಷೆ ರಚಿಸುವ ಕ್ರಮ ವಿವರಿಸಿದರು. ಮೊಬೈಲ್ ಮೂಲಕ ದಿಕ್ಕುಗಳನ್ನು ಸುಲಭವಾಗಿ ಗುರುತಿಸುವ ವಿಧಾನ ಹಾಗೂ ಖಂಡಗಳ ಚಟುವಟಿಕೆ ಮೂಲಕ ಆಸಕ್ತಿ ಮೂಡಿಸುವ ಕಲಿಕಾ ಕ್ರಮವನ್ನು ಪ್ರದರ್ಶಿಸಿದರು.

ಸಂಜೆ ನಡೆದ ಸಮಾರೋಪ ಕಾರ್ಯಕ್ರಮ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ರಾವ್ ಮಂಕುಡೆ ಅಧ್ಯಕ್ಷತೆಯಲ್ಲಿ ನಡೆಯಿತು. “ಸಮಾಜವನ್ನು ಧನಾತ್ಮಕ ವಿಚಾರಗಳ ಕಡೆಗೆ ಪರಿವರ್ತಿಸುವ ಜವಾಬ್ದಾರಿ ಸಮಾಜ ವಿಜ್ಞಾನ ಶಿಕ್ಷಕರ ಮೇಲಿದೆ. ವಿದ್ಯಾರ್ಥಿ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಲು ಸರಿಯಾದ ಮಾರ್ಗದರ್ಶನ ಶಿಕ್ಷಕರಿಂದಲೇ ಸಾಧ್ಯ” ಎಂದರು.
ಮುಖ್ಯ ಅತಿಥಿ, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕೋಶಾಧಿಕಾರಿ ಕೃಷ್ಣ ಮೋಹನ ಮಾತನಾಡಿ, “ಓದು-ಬರಹದ ಕಾಲ ಮುಗಿದಿದೆ. ದೃಶ್ಯ ಸಾಕ್ಷೀಕರಣದ ಮೂಲಕ ಪಾಠ ಮಾಡಬೇಕಾದ ಅನಿವಾರ್ಯತೆ ಇದೆ. ಪ್ರಾಜೆಕ್ಟರ್ ಬಳಕೆ ಇಂದು ಅತ್ಯಗತ್ಯ. ಭಾರತದ ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಬಲಿಯಾಗುವುದನ್ನು ತಪ್ಪಿಸಿ, ಅವರನ್ನು ‘ಇಂಡಿಯಾ’ದಿಂದ ‘ಭಾರತ’ಕ್ಕೆ ಕರೆತರುವ ಕಾರ್ಯ ಶಿಕ್ಷಕರದ್ದು” ಎಂದು ಕಿವಿಮಾತು ಹೇಳಿದರು.ಲೀಲಾವತಿ ಸ್ವಾಗತಿಸಿ, ಸೌಮ್ಯ ವಂದಿಸಿದರು. ರಶ್ಮಿತಾ ನಿರೂಪಿಸಿದರು. ಕಾರ್ಯಾಗಾರದಲ್ಲಿ ಪಾಲ್ಗೊಂಡ ಎಲ್ಲ ಶಿಕ್ಷಕರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.










