






ಪುತ್ತೂರು: ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಕ್ಷಮೇತ್ ಜೈನ್ ‘ರಾಜ್ಯ ಸ್ತರೀಯ ಬಾಲ ವೈಜ್ಞಾನಿಕ ಪ್ರದರ್ಶನಿ 2025-26’ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.



‘ವಿಕಸಿತ ಮತ್ತು ಆತ್ಮನಿರ್ಭರ ಭಾರತಕ್ಕಾಗಿ STEM’ ಎಂಬ ಪರಿಕಲ್ಪನೆಯಡಿಯಲ್ಲಿ ‘ಆರೋಗ್ಯ ಮತ್ತು ನೈರ್ಮಲ್ಯ’ ವಿಷಯದಲ್ಲಿ ವಿಜ್ಞಾನ ಮಾದರಿಯನ್ನು ಪ್ರಸ್ತುತಪಡಿಸಿದ್ದ ಕ್ಷಮೇತ್, ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾನೆ. ಶ್ರೀಮತಿ ಶ್ರುತಿ ಕುಮಾರಿ ಮತ್ತು ಹನೀಶ್ ಕುಮಾರ್ ದಂಪತಿಯ ಪುತ್ರನಾದ ಕ್ಷಮೇತ್ ತಯಾರಿಸಿರುವ ಮಾದರಿಯು ಆರೋಗ್ಯ ಮತ್ತು ನೈರ್ಮಲ್ಯದ ಜೊತೆಗೆ ಕಲುಷಿತ ವಾತಾವರಣಕ್ಕೆ ಪರಿಸರ ಸ್ನೇಹಿ ಪರಿಹಾರಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಮೊದಲ ಹಂತದ ಸ್ಪರ್ಧೆ ಆನ್‌ಲೈನ್ ಮೂಲಕ ನಡೆದಿದ್ದು, ಅದನ್ನು ಯಶಸ್ವಿಯಾಗಿ ಪೂರೈಸಿ ಕ್ಷಮೇತ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಎಂದು ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












