






ನಿಡ್ಪಳ್ಳಿ: ದಕ್ಷಿಣ ಭಾರತದ ಏಕೈಕ ನೈಸರ್ಗಿಕ ಬಿಸಿ ನೀರಿನ ಚಿಲುಮೆ ಎಂಬ ಖ್ಯಾತಿಯ ಇರ್ದೆ ಗ್ರಾಮದ ಬೆಂದ್ರ್ ತೀರ್ಥ ಕ್ಷೇತ್ರ ಶಿಥಿಲಾವಸ್ಥೆಯಲ್ಲಿದ್ದು, ಸ್ಥಳೀಯ ಶಿವಾಜಿ ಯುವಸೇನೆ (ರಿ.) ಬೆಂದ್ರ್ ತೀರ್ಥ ಇರ್ದೆ ಸಂಘಟನೆಯ ಯುವಕರು ಸ್ವಂತ ಶ್ರಮದಿಂದ ಅಭಿವೃದ್ಧಿಪಡಿಸಿ ಮಾದರಿಯಾಗಿದ್ದಾರೆ.



ಸಂಘಟನೆ 10 ವರ್ಷ ಪೂರೈಸಿದ ಸಂದರ್ಭದಲ್ಲಿ ಕೈಗೊಂಡ ಈ ಅಭಿವೃದ್ಧಿ ಕಾರ್ಯ 2026ರ ಜನವರಿ 15ರಂದು ಆರಂಭವಾಗಿ ಜೂನ್ 25ಕ್ಕೆ ಪೂರ್ಣಗೊಂಡಿದೆ. 3 ಹಂತಗಳಲ್ಲಿ ನಡೆದ ಕಾಮಗಾರಿಗೆ ಸುಮಾರು ₹3 ಲಕ್ಷಕ್ಕೂ ಅಧಿಕ ವೆಚ್ಚವಾಗಿದ್ದು, ಯುವಕರು ವಾರಕ್ಕೊಮ್ಮೆ ಧನ ಸಂಗ್ರಹಿಸಿ, ಊರ-ಪರವೂರ ಭಕ್ತರ ಸಹಕಾರದೊಂದಿಗೆ ಕೆಲಸ ನಡೆಸಿದ್ದಾರೆ.




ಧಾರ್ಮಿಕ-ವೈಜ್ಞಾನಿಕ ಮಹತ್ವ:
ಇರ್ದೆ ಗೋಪಾಲ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ನಿಕಟ ಸಂಬಂಧ ಹೊಂದಿರುವ ಬೆಂದ್ರ್ ತೀರ್ಥ ಹಿಂದೂಗಳ ಶ್ರದ್ಧಾ ಕೇಂದ್ರ. ಭಾರತೀಯ ಪುರಾತತ್ವ ಸಂಸ್ಥೆಯ ಅಧ್ಯಯನದ ಪ್ರಕಾರ ಇದು ದಕ್ಷಿಣ ಭಾರತದ ಏಕೈಕ ನೈಸರ್ಗಿಕ ಬಿಸಿ ನೀರಿನ ಚಿಲುಮೆ. ಇಲ್ಲಿನ ನೀರಿನಲ್ಲಿ ಅಧಿಕ ಖನಿಜಾಂಶವಿದ್ದು, ಚರ್ಮ ಸಂಬಂಧಿ ಕಾಯಿಲೆಗಳಿಗೆ ರಾಮಬಾಣ ಎಂಬ ನಂಬಿಕೆ ಇದೆ. ನವ ವಿವಾಹಿತರು ಇಲ್ಲಿಗೆ ಭೇಟಿ ನೀಡುವ ಸಂಪ್ರದಾಯ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ.

ಜಾತಿ-ಪಕ್ಷ ಮೀರಿದ ಸೇವೆ:
“ಈ ಪುಣ್ಯಕ್ಷೇತ್ರ ನಶಿಸಬಾರದು, ಭಕ್ತರಿಗೆ ಸರಿಯಾದ ವ್ಯವಸ್ಥೆ ಸಿಗಬೇಕು. ನಮ್ಮೂರಿನ ಇತಿಹಾಸ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂಬುದೇ ನಮ್ಮ ಉದ್ದೇಶ” ಎಂದು ಶಿವಾಜಿ ಯುವಸೇನೆ ಪದಾಧಿಕಾರಿಗಳು ತಿಳಿಸಿದ್ದಾರೆ. ಅಭಿವೃದ್ಧಿ ಕಾರ್ಯದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಹಿರಿಯರವರೆಗೆ ಎಲ್ಲರೂ ಒಂದೇ ಮನಸ್ಸಿನಿಂದ ಕೈಜೋಡಿಸಿದ್ದಾರೆ.

ಶಾಸಕರಿಂದ ರೂ.10 ಲಕ್ಷ ಭರವಸೆ:
ಯುವಕರ ಶ್ರಮವನ್ನು ಮೆಚ್ಚಿರುವ ಪುತ್ತೂರು ಶಾಸಕರು ಕ್ಷೇತ್ರದ ಮುಂದಿನ ಅಭಿವೃದ್ಧಿಗೆ ರೂ.10 ಲಕ್ಷ ನೀಡುವ ಭರವಸೆ ನೀಡಿದ್ದಾರೆ. ಸದ್ಯ ದೇವಾಲಯ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು, ಈಗಾಗಲೇ ರೂ.1,60,000ಕ್ಕೂ ಹೆಚ್ಚು ಮೊತ್ತವನ್ನು ವಿವಿಧ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ. ಮುಂದಿನ ವಾರದಲ್ಲಿ ಬೆಂದ್ರ್ ತೀರ್ಥದ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ಸಂಘಟನೆ ತಿಳಿಸಿದೆ.

ನಮ್ಮ ಉದ್ದೇಶ ಒಂದೇ
“ನಮ್ಮೂರ ಇತಿಹಾಸ ಹೊಂದಿರುವ ಈ ಪುಣ್ಯಕ್ಷೇತ್ರ ಮುಂದೆಯೂ ಪವಿತ್ರ ಕ್ಷೇತ್ರವಾಗಿ ಉಳಿಯಬೇಕು. ಅಲ್ಲದೆ ಮುಂದಿನ ಪೀಳಿಗೆಗೆ ಇದು ಒಂದು ದಾರಿದೀಪವಾಗಬೇಕು. ಇದಕ್ಕೆ ಭಕ್ತರ ಸಂಪೂರ್ಣ ಸಹಕಾರ ಮುಂದೆಯೂ ಸಿಗಬೇಕು ಎಂಬುದು ನಮ್ಮೆಲ್ಲರ ಆಶಯ”
ಶಿವಾಜಿ ಯುವಸೇನೆ, ಬೆಂದ್ರ್ ತೀರ್ಥ, ಇರ್ದೆ










