







ಪುತ್ತೂರು: ಮಹಾರಾಷ್ಟ್ರ ಮೂಲಕ ಉತ್ತರ ಭಾರತದ ರಾಜ್ಯಗಳಿಗೆ ತೆರಳುವ ಕರಾವಳಿಯ ಅಡಿಕೆ ಲಾರಿಗಳನ್ನು ಮಹಾರಾಷ್ಟ್ರ ಆರೋಗ್ಯ ಇಲಾಖೆ ಅಧಿಕಾರಿಗಳು ತಡೆದು ನಿಲ್ಲಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸಲಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದ್ದಾರೆ.


ಈ ಬಗ್ಗೆ ‘ಸುದ್ದಿ’ ಜೊತೆಗೆ ಮಾತನಾಡಿದ ಅವರು, “ಅಡಿಕೆಗೆ ಸಂಬಂಧಿಸಿದಂತೆ ನಮಗೆಲ್ಲರಿಗೂ ಒಂದು ಸವಾಲು ಎದುರಾಗಿದೆ. ಉತ್ತರ ಭಾರತಕ್ಕೆ ಅಡಿಕೆ ಹೇರಿಕೊಂಡು ಮಹಾರಾಷ್ಟ್ರ ಮೂಲಕ ಸಾಗುವ ಲಾರಿಗಳನ್ನು ಮಹಾರಾಷ್ಟ್ರದ ಪೊಲೀಸ್ ಇಲಾಖೆ ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ತಡೆದು ತೊಂದರೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 10 ದಿನಗಳ ಹಿಂದೆ ದೆಹಲಿಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದೇವೆ. ಈ ವೇಳೆ, ಈ ರೀತಿಯ ವಿಚಾರಗಳಿಂದ ಅಡಿಕೆ ಬೆಳೆಗಾರರಿಗೆ ತೊಂದರೆಯಾಗುತ್ತಿದೆ, ಮಹಾರಾಷ್ಟ್ರದಲ್ಲಿ ಕೂಡ ಬಹಳಷ್ಟು ಅಡಿಕೆ ಬೆಳೆಗಾರರಿದ್ದಾರೆ, ಹೀಗಾಗಿ ಯಾರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಂಡಿದ್ದೇವೆ. ಈ ಬಗ್ಗೆ ಸ್ಪಂದಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಲಾರಿಗಳನ್ನು ಬಿಡಬೇಕು ಎಂದು ಸೂಚಿಸಿದ್ದಾರೆ. ಅಲ್ಲದೇ, ಈ ಅಡಿಕೆ ಮಹಾರಾಷ್ಟ್ರದಲ್ಲಿ ಉಪಯೋಗ ಆಗುವುದಿಲ್ಲ, ಉತ್ತರ ಭಾರತದಲ್ಲಿ ಬಳಕೆ ಆಗುವುದು ಎನ್ನುವುದನ್ನು ಸೂಚಿಸಿದ್ದಾರೆ. ನಾವು ಈ ವಿಚಾರವನ್ನು ಫಾಲೋಅಪ್ ಮಾಡುತ್ತಿದ್ದೇವೆ. ಮುಂದಿನ ನಾಲ್ಕೈದು ದಿನಗಳಲ್ಲಿ ಸಮಸ್ಯೆ ಪರಿಹಾರ ಆಗುವಂತೆ ಪ್ರಯತ್ನಗಳನ್ನು ಮಾಡುತ್ತಿದ್ದೇವೆ” ಎಂದು ಹೇಳಿದರು.













