ಪಾಣಾಜೆ : ವೃದ್ಧ ದಂಪತಿಗೆ ಪುತ್ತಿಲ ಪರಿವಾರದ ನೆರವು – ನೂತನ ಶೌಚಾಲಯ, ಮನೆ ನವೀಕರಣ

0

ನಿಡ್ಪಳ್ಳಿ: ದೀರ್ಘಾವಧಿ ಅಧಿಕಾರ ನಡೆಸಿದ ಪ್ರಧಾನಿಯಾಗಿ ದಾಖಲೆ ಬರೆದ ನರೇಂದ್ರ ಮೋದಿ ಅವರ ಸಾಧನೆಯ ಸಂದರ್ಭದಲ್ಲಿ, ಸ್ವಚ್ಛ ಭಾರತ ಅಭಿಯಾನದ ಆಶಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪಾಣಾಜೆ ಗ್ರಾಮದ ತೂಂಬಡ್ಕದಲ್ಲಿ ವೃದ್ಧ ದಂಪತಿಗೆ ನೂತನ ಶೌಚಾಲಯ ನಿರ್ಮಿಸಿ ಮನೆ ನವೀಕರಿಸಿ ಕೊಟ್ಟಿದೆ.

ಪಾಣಾಜೆ ಗ್ರಾಮದ ಕಾರ್ಯಕರ್ತರೊಬ್ಬರ ಮನೆಯ ಶುಭ ಸಮಾರಂಭಕ್ಕೆ ಆಗಮಿಸಿದ್ದ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಬಳಿ ವೃದ್ಧ ದಂಪತಿಗಳಾದ ಗೌರಿ ನಾರಾಯಣ ನಾಯ್ಕ ಅವರು ತಮ್ಮ ಮನೆಯಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದೆ, ಹುಟ್ಟಿನಿಂದಲೂ ಶೌಚಾಲಯ ಬಳಸಿಲ್ಲ ಎಂಬ ನೋವು ಹಂಚಿಕೊಂಡಿದ್ದರು.ಇದನ್ನು ಗಂಭೀರವಾಗಿ ಪರಿಗಣಿಸಿದ ಅರುಣ್ ಕುಮಾರ್ ಪುತ್ತಿಲ ತಕ್ಷಣ ಗ್ರಾಮ ಸಮಿತಿ ಕಾರ್ಯಕರ್ತರೊಂದಿಗೆ ಚರ್ಚಿಸಿ ಶೌಚಾಲಯ ನಿರ್ಮಾಣಕ್ಕೆ ಸೂಚಿಸಿದರು.

ಜೊತೆಗೆ ಮನೆಯಲ್ಲಿ ಕಿಟಕಿ, ಬಾಗಿಲುಗಳೂ ಇಲ್ಲದಿರುವುದನ್ನು ಗಮನಿಸಿ ಅವುಗಳನ್ನು ಅಳವಡಿಸಿ ಅಗತ್ಯ ನವೀಕರಣ ಕಾರ್ಯವನ್ನೂ ಪೂರ್ಣಗೊಳಿಸಲಾಯಿತು.ದಾನಿಗಳು ಹಾಗೂ ಸ್ಥಳೀಯ ಕಾರ್ಯಕರ್ತರು ಈ ಸೇವಾ ಕಾರ್ಯಕ್ಕೆ ಕೈಜೋಡಿಸಿದ್ದು, ವೃದ್ಧ ದಂಪತಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಸಮಾಜದ ಅಗತ್ಯವಿರುವ ಕುಟುಂಬಗಳಿಗೆ ನೆರವಾಗುವ ಇಂತಹ ಸೇವಾ ಚಟುವಟಿಕೆಗಳು ನಿರಂತರವಾಗಿ ನಡೆಯಲಿವೆ ಎಂದು ಟ್ರಸ್ಟ್ ತಿಳಿಸಿದೆ.

ಈ ಸಂದರ್ಭದಲ್ಲಿ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ಪ್ರಧಾನ ಕಾರ್ಯದರ್ಶಿ ಪ್ರೇಮ್ ರಾಜ್ ಆರ್ಲಪದವು, ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ, ನಿರ್ದೇಶಕರಾದ ಸುಜಿತ್ ಕಜೆ, ಮನೀಶ್ ಕುಲಾಲ್, ಧೀರನ್, ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಮಾರ್ಗದರ್ಶಕರಾದ ರಾಕೇಶ್ ರೈ ಕಡಮಾಜೆ, ಹರಿಪ್ರಸಾದ್ ಕಾಸರಗೋಡು ಹಾಗೂ ಪಾಣಾಜೆ ಗ್ರಾಮ ಸಮಿತಿ ಅಧ್ಯಕ್ಷ ಶ್ರೀನಿವಾಸ ಕುಲಾಲ್ ಉಡ್ಡಂಗಳ, ಪ್ರಧಾನ ಕಾರ್ಯದರ್ಶಿ ಸುಖಿನ್ ರಾಜ್ ಕೊಂದಲ್ಕಾನ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here