







ಪುತ್ತೂರು: ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂಸೇವಕರ ತರಬೇತಿ ಕಾರ್ಯಗಾರವು ಜು.7ರಂದು ಬೊಳುವಾರು ವಿಶ್ವಕರ್ಮ ಸಮುದಾಯ ಭವನದಲ್ಲಿ ನೆರವೇರಿತು.
ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಮಾತನಾಡಿ, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ ರಾಜ್ಯಾದ್ಯಂತ 10,000 ಸ್ವಯಂ ಸೇವಕರನ್ನು ಹೊಂದಿರುವ ಬಲಿಷ್ಟ ಸಂಘಟನೆ ಆಗಿದೆ. ವಿಪತ್ತು ಸಂದರ್ಭದಲ್ಲಿ ತನ್ನದೇ ಸೇವೆ ನೀಡುತ್ತಾ ಬಂದಿದೆ ಎಂದರು
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಕಮಾಂಡರ್ ಶಾಂತಿಲಾಲ್ ಜಟಿಯ ಮಾತನಾಡಿ, ಶೌರ್ಯ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ತಂಡದ ಕೆಲಸವು ಸೇವಾ ಮನೋಭಾವದಿಂದ ಕೂಡಿದೆ. ಯಾವುದೇ ಕೆಲಸಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಸದಾ ಸೇವೆಗೆ ಸಿದ್ದ ಎನ್ನುವ ಭಾವನೆಯಿಂದ ದುಡಿಯುತ್ತಿರುವ ಸದಸ್ಯರ ಶಕ್ತಿ ಶ್ಲಾಘನೀಯ. ತಾವು ಮಾಡುವ ಸೇವೆಯು ದೇಶಸೇವೆಗೆ ಸಮಾನವಾದದು. ಸೈನಿಕರು ಗಡಿಯನ್ನು ರಕ್ಷಿಸಿದರೆ, ಶೌರ್ಯ ತಂಡದ ಸದಸ್ಯರು ತಮ್ಮ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ತಮ್ಮಸೇವೆಯ ಮೂಲಕ ಸಮಾಜವನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಹೇಳಿದರು.



ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸತೀಶ್ ನಾಕ್ ಮಾತನಾಡಿ ಶುಭ ಹಾರೈಸಿದರು.
ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡ, ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ, ಮಾಸ್ಟರ್ ಕ್ಯಾಪ್ಟನ್ ಗಳಾದ ಜಯರಾಮ್ ಪಿ.ಜಿ., ಸತೀಶ್ ನಾಲ್ಕೂರು, ಭವಾನಿ ಶಂಕರ, ಮನೋಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಕಾರ್ಯಕ್ರಮದಲ್ಲಿ ಸುಳ್ಯ, ಪುತ್ತೂರು, ಕಡಬ ಯೋಜನಾ ಕಚೇರಿ ವ್ಯಾಪ್ತಿಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಮಾಸ್ಟರ್ ಹಾಗೂ ಕ್ಯಾಪ್ಟನ್ಗಳನ್ನು ಆಯ್ಕೆ ಮಾಡಲಾಯಿತು.
ಶೌರ್ಯ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ್ ಪಟಗಾರ ಪ್ರಸ್ತಾವಣೆ ಗೈದರು. ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಸ್ವಾಗತಿಸಿ, ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ವಂದಿಸಿದರು. ಮೇಲ್ವಿಚಾರಕ ಹರೀಶ್ ಕಾರ್ಯಕ್ರಮ ನಿರೂಪಿಸಿದರು, ಜ್ಞಾನವಿಕಾಸ ಸಮನ್ವಧಿಕಾರಿ ಕು. ಕಾವ್ಯ ಪ್ರಾರ್ಥಿಸಿದರು.
ಉದ್ಘಾಟನಾ ಸಭಾ ಕಾರ್ಯಕ್ರಮದ ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯ ಸುಭಾಷ್ ಶಿಂಧೆ ನೇತೃತ್ವದ ತಂಡದಿಂದ ತುರ್ತು ಸಂದರ್ಭದಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಪ್ರಾತ್ಯಕ್ಷತೆಗಳ ಮೂಲಕ ತರಬೇತಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಇದರ ಪುತ್ತೂರು, ಸುಳ್ಯ, ಕಡಬ ತಾಲೂಕು ಶೌರ್ಯ ತಂಡದ ಸ್ವಯಂ ಸೇವಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು










