







ಉಪ್ಪಿನಂಗಡಿ: ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಮಧ್ಯೆ ಸಂಪರ್ಕ ಸೇತುವಾಗಿರುವ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸೇತುವೆಯಲ್ಲಿ ಅಲ್ಲಲ್ಲಿ ಸಿಮೆಂಟ್ ಕಾಂಕ್ರೀಟ್ ಎದ್ದು ಹೋಗಿ ಕಬ್ಬಿಣದ ಕಂಬಿಗಳು ಕಾಣಲಾರಂಭಿಸಿರುವ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆ, ವೆಬ್ ಸೈಟ್ ನಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ನಾಯಕ್ ನೇತೃತ್ವದ ತಂಡ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಸೇತುವೆ ಪರಿಶೀಲನೆ ನಡೆಸಿದರು.


ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ಗಮನಿಸಿದ ಹಾಗೆ ಈ ಸೇತುವೆಯು 15 ವರ್ಷ ಬಾಳಿಕೆ ಬರುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದರು. ಇನ್ನು ಫಿಲ್ಲರ್ ಸೇರಿದಂತೆ ಸೇತುವೆಯ ಅಡಿಭಾಗದಲ್ಲಿ ಕಾಂಕ್ರೀಟ್ ಎದ್ದು ಹೋಗಿ ಕಬ್ಬಿಣದ ಕಂಬಿಗಳು ಕಾಣುತ್ತಿರುವ ಬಗ್ಗೆ ಉತ್ತರಿಸಿದ ಅವರು, ಈಗ ನದಿಯಲ್ಲಿ ನೀರು ತುಂಬಿರುವುದರಿಂದ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಮಳೆಗಾಲ ಮುಗಿದ ಕೂಡಲೇ ಇದನ್ನು ಸರಿಪಡಿಸಲಾಗುವುದು ಹಾಗೂ ಈ ಸೇತುವೆಯ ಮೇಲೆ ಘನ ಗಾತ್ರದ ಲಾರಿಗಳು ಮಣ್ಣು ಸಾಗಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಸೇತುವೆಯ ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರದ ವಾಹನಗಳು ಸಂಚರಿಸುವುದರಿಂದ ಸೇತುವೆಗೆ ಅಪಾಯವಾಗುವ ಸಾಧ್ಯತೆ ಇದೆ. ಈ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಲು ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.




ಸೇತುವೆಯನ್ನು ನಿರ್ವಹಣೆ ಮಾಡದ್ದರಿಂದ ಸೇತುವೆಯ ಮೇಲೆ ಮಣ್ಣು ನಿಂತಿದ್ದು, ಸೇತುವೆಯನ್ನು ಆಶ್ರಯಿಸಿಕೊಂಡು ಕೆಲವು ಜಾತಿಯ ಮರಗಳು ಬೆಳೆದಿರುವ ಬಗ್ಗೆ ಉತ್ತರಿಸಿದ ಅವರು, ಕೂಡಲೇ ಇದರ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರಲ್ಲದೆ, ಉಪ್ಪಿನಂಗಡಿ- ಕುಪ್ಪೆಟ್ಟಿ ನಡುವಣ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಮನವರಿಕೆಯಾಗಿದ್ದು, ಇದರ ಮರುಡಾಮರೀಕರಣಕ್ಕೆ ಅಂದಾಜುಪಟ್ಟಿ ಸಿದ್ಧಪಡಿಸಿ ಕಳುಹಿಸಿಕೊಡಲಾಗಿದೆ ಎಂದರು.
ಈ ಸಂದರ್ಭ ಸಹಾಯಕ ಎಂಜಿನಿಯರ್ ಗೋಪಾಲ್, ಕಿರಿಯ ಎಂಜಿನಿಯರ್ ಸೂರಜ್, ಗುತ್ತಿಗೆದಾರರಾದ ಅಕ್ಷಯ್ ಸುವರ್ಣ, ಯೋಗೀಶ ಅಳಕೆ, ಇಳಂತಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಇಸುಬು ಪೆದಮಲೆ, ಮಾಜಿ ಸದಸ್ಯ ಯು.ಟಿ. ಫಯಾಜ್, ಅಹಮ್ಮದ್, ತಣ್ಣೀರುಪಂತ ಗ್ರಾ.ಪಂ. ಮಾಜಿ ಸದಸ್ಯ ಡಿ.ಕೆ. ಅಯೂಬ್, ಸ್ಥಳೀಯರಾದ ರಶೀದ್ ಯು.ಟಿ., ಅಮನ್, ನಬೀಲ್ ಉಪಸ್ಥಿತರಿದ್ದರು.










