ರಾಮಕುಂಜ ಪ.ಪೂ.ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ, ವಿವಿಧ ಸಂಘಗಳ ಉದ್ಘಾಟನೆ

0

ವಿದ್ಯಾರ್ಥಿ ಸಂಘದ ಪ್ರತಿ ನಾಯಕನೂ ಜವಾಬ್ದಾರಿ ಅರಿತು ಕೆಲಸ ಮಾಡಬೇಕು: ಕೇಶವ ಅಮೈ

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಮತ್ತು ವಿವಿಧ ಸಂಘಗಳ ಚಟುವಟಿಕೆಗಳ ಉದ್ಘಾಟನೆ ನಡೆಯಿತು.
ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ, ಎಸ್‌ಆರ್‌ಕೆ ಲ್ಯಾಡರ್ಸ್‌ನ ಮಾಲಕ ಕೇಶವ ಅಮೈ ಅವರು ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು. ನಮ್ಮ ದೇಶದ ಆಡಳಿತವು ಪ್ರಜಾಪ್ರಭುತ್ವ ನೆಲೆಯಲ್ಲಿ ಕಾರ್ಯಾಚರಿಸುತ್ತಿದೆ. ಇದೇ ಮಾದರಿಯಲ್ಲಿ ಆಯ್ಕೆ ಆದ ಈ ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರತಿ ನಾಯಕನೂ ತನ್ನ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಆಗ ದೇಶದ ಆಡಳಿತ ಯಂತ್ರ ಹೇಗೆ ನಡೆಯುತ್ತದೆ ಎಂಬ ವಿಚಾರ ವಿದ್ಯಾರ್ಥಿ ನಾಯಕರ ಅರಿವಿಗೆ ಬರುತ್ತದೆ. ಹಾಗಾಗಿ ಎಲ್ಲಾ ನಾಯಕರು ಉತ್ತಮವಾಗಿ ಕೆಲಸ ಮಾಡಿ ಭವಿಷ್ಯದಲ್ಲಿ ದೇಶದ ಆಸ್ತಿಯಾಗಬೇಕು ಎಂದು ಕರೆ ಕೊಟ್ಟರು.


ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿ ಸಂಘದ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಮತ್ತು ವಿವಿಧ ಸಂಘಗಳ ಚಟುವಟಿಕೆಗಳ ಉದ್ಘಾಟನೆಯಾಗಿದೆ. ಕಾಲೇಜಿನ ಈ ಎಲ್ಲಾ ಸಂಘಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಈ ಸಂಘಗಳ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್.ಅವರು ಮಾತನಾಡಿ, ವಿದ್ಯಾರ್ಥಿ ಸಂಘವು ವಿದ್ಯಾರ್ಥಿಗಳು, ಅಧ್ಯಾಪಕ ವೃಂದ, ಆಡಳಿತ ಮಂಡಳಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಸ್ಥೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಬೇಕು. ಕಾರ್ಯಕ್ರಮಗಳ ಆಯೋಜನೆ ಮಾತ್ರವಲ್ಲದೇ ಉತ್ತಮ ಅಂಕ, ಫಲಿತಾಂಶವನ್ನು ಎಲ್ಲಾ ವಿದ್ಯಾರ್ಥಿಗಳು ಹೊಂದುವಲ್ಲಿ ಸಹಕರಿಸಬೇಕು. ಆಗ ನಮ್ಮ ಸಂಸ್ಥೆಯ ಉದ್ದೇಶದ ಈಡೇರಿಕೆ ಆಗುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಕೀರ್ತನ್, ಸರ್ಜನ ಸಾಂಸ್ಕೃತಿಕ ಸಂಘದ ಸಂಯೋಜಕರಾದ ತಿಲಕಾಕ್ಷ, ವಿಜ್ಞಾನ ಸಂಘದ ಸಂಯೋಜಕರಾದ ಬಿ.ಸುಬ್ರಹ್ಮಣ್ಯ ಕಾರಂತ್, ಚುನಾವಣಾ ಅಧಿಕಾರಿ ಚೇತನ್ ಎಂ. ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಜೀವಿತ ಮತ್ತು ಬಳಗದವರು ಪ್ರಾರ್ಥಿಸಿದರು. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ರಕ್ಷಾ ಸ್ವಾಗತಿಸಿದರು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಸುಶಾಂತ್ ವಂದಿಸಿದರು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಲಿಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕೇಶವ ಅಮೈ ಅವರಿಗೆ ಗೌರವಾರ್ಪಣೆ:
ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್‌ಆರ್‌ಕೆ ಲ್ಯಾಡರ್ಸ್‌ನ ಮಾಲಕ ಕೇಶವ ಅಮೈ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ರಾಜ್ಯಶಾಸ್ತ್ರ ಉಪನ್ಯಾಸಕರಾದ ದಾಮೋದರ ಎನ್. ಪ್ರಮಾಣ ವಚನ ಬೋಧಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರ ನೂತನ ಟೀ ಶರ್ಟ್ ಉಡುಪು ಅನಾವರಣಗೊಳಿಸಲಾಯಿತು.

LEAVE A REPLY

Please enter your comment!
Please enter your name here