ಎಸ್‌ಐಆರ್ ಪ್ರಕ್ರಿಯೆ-ಪುತ್ತೂರಿನಲ್ಲಿ ಶೇ. 93.79 ಪ್ರಗತಿ- ತಹಶೀಲ್ದಾರ್ ಎಸ್.ಬಿ ಕೂಡಲಗಿ

0

ಫೆಸಿಲಿಟೇಷನ್ ಸೆಂಟರ್ ಪ್ರಾರಂಭ |ತಾಲೂಕು ಸಹಾಯವಾಣಿ ಕೇಂದ್ರ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಐ.ಆರ್.ಗೆ ಸಂಬಂಧಿಸಿದಂತೆ 2,16,542 ಮತದಾರರಲ್ಲಿ ಒಟ್ಟು 2,03,102 ನಮೂನೆಗಳನ್ನು ಮತದಾರರಿಗೆ ಹಂಚಿಕೆ ಮಾಡಲಾಗಿದ್ದು, ಶೇಕಡಾ 93.79 ಪ್ರಗತಿ ಸಾಧಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ತಹಶೀಲ್ದಾರ್ ಎಸ್.ಬಿ ಕೂಡಲಗಿ ಮಾಹಿತಿ ನೀಡಿದರು.


ತಾಲೂಕು ಕಚೇರಿ ಸಭಾಂಗಣದಲ್ಲಿ ಜು.9ರಂದು ನಡೆದ ರಾಜಕೀಯ ಪಕ್ಷದ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪುತ್ತೂರು, ಉಪ್ಪಿನಂಗಡಿ, ವಿಟ್ಲ ಹೋಬಳಿಯನ್ವಯ ಒಟ್ಟು 221 ಮತಗಟ್ಟೆಗಳಲ್ಲಿ ಹಂಚಿಕೆಯಾದ ನಮೂನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮನೆಮನೆಗಳಿಗೆ ಭೇಟಿ ನೀಡಿ ಮತದಾರರಿಗೆ ಹಂಚಿಕೆ ಪ್ರಾರಂಭಗೊಂಡಿದ್ದು, ಬಿ.ಎಲ್.ಓಗಳು ಮತ್ತು ಬಿ.ಎಲ್.ಎ ಏಜೆಂಟ್‌ಗಳು ಕೂಡಿಕೊಂಡು ಮನೆ ಮನೆಗೆ ತೆರಳಿ ನಮೂನೆಗಳನ್ನು ಸರಿಯಾಗಿ ವಿತರಣೆ ಮಾಡಬೇಕು. ಈಗಾಗಲೇ ರಾಜಕೀಯ ಪಕ್ಷದ ವಾಟ್ಸಾಪ್ ಗ್ರೂಪ್‌ಗಳಲ್ಲಿ ಮಾಹಿತಿಯನ್ನು ನೀಡಲಾಗುತ್ತಿದೆ. ಅಲ್ಲದೇ ರಾಜಕೀಯ ಪಕ್ಷದ ಪ್ರತಿನಿಧಿಗಳ ಸಭೆಯನ್ನು ಕರೆದು ಮಾಹಿತಿಯನ್ನು ನೀಡಲು ಚುನಾವಣಾ ಆಯೋಗ ಸ್ಪಷ್ಟ ಸೂಚನೆ ನೀಡಿದ್ದು, ಅದರಂತೆ ಎಲ್ಲಾ ಮಾಹಿತಿಯನ್ನು ನೀಡಲಾಗುವುದು ಹಾಗೂ ಈ ಸಂಬಂಧ ಎಲ್ಲಾ ರಾಜಕೀಯ ಪಕ್ಷದವರು ತಮ್ಮ ಇಮೇಲ್ ಮಾಹಿತಿಯನ್ನು ನೀಡಬೇಕು. ಆ ಮೂಲಕ ಪ್ರತಿದಿನ ಇಎಫ್ ನಮೂನೆಗಳ ವಿತರಣೆ ಮತ್ತು ಭರ್ತಿಯಾದ ನಮೂನೆಗಳನ್ನು ಡಿಜಿಟೈಸ್ ಮಾಡುವ ಪ್ರಕ್ರಿಯೆಗಳ ಮಾಹಿತಿಯನ್ನು ಇಮೇಲ್ ಮಾಡಲಾಗುವುದು ಎಂದು ತಿಳಿಸಿದರು.


ಫೆಸಿಲಿಟೇಷನ್ ಸೆಂಟರ್ ಪ್ರಾರಂಭ:
ಪುತ್ತೂರು ವಿಧಾನ ಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳನ್ನು ಮತದಾರರ ಫೆಸಿಲಿಟೇಷನ್ ಕೇಂದ್ರವಾಗಿ ಮತ್ತು ಎಲ್ಲಾ ಗ್ರಾಮ ಪಂಚಾಯತ್ ಕಚೇರಿಯನ್ನು ಬಿ.ಎಲ್.ಓ ಫೆಸಿಲಿಟೇಷನ್ ಕೇಂದ್ರವಾಗಿ ತೆರೆಯಲಾಗಿದೆ. ಇಲ್ಲಿಗೆ ಸಿಬ್ಬಂದಿಯನ್ನು ನೇಮಿಸಿ ಭರ್ತಿ ಮಾಡಿದ ನಮೂನೆಯನ್ನು ಅಪ್ಲೋಡ್ ಮಾಡಲು ದತ್ತಾಂಶ ನಮೂದಕರನ್ನು ಬಿಎಲ್‌ಓ ಅವರಿಗೆ ಸಹಕರಿಸಲು ನೇಮಿಸಲಾಗಿದೆ. ಬಿಎಲ್‌ಓಗೆ ತ್ವರಿತ ಗತಿಯಲ್ಲಿ ಪ್ರಗತಿ ಸಾಧಿಸಲು ಈ ಕೇಂದ್ರಗಳು ವೈಫೈ ಸೌಲಭ್ಯ ಮತ್ತು ಎಲ್ಲಾ ಮೂಲಭೂತ ಸೌಕರ್ಯವನ್ನು ನೀಡುವ ಮೂಲಕ ಸಹಕಾರಕ್ಕೆ ಸಿದ್ಧವಾಗಿರುತ್ತದೆ ಎಂದರು.


ತಾಲೂಕು ಸಹಾಯವಾಣಿ ಕೇಂದ್ರ:
ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 206ಕ್ಕೆ ಸಂಬಂಧಿಸಿದಂತೆ ಮತದಾರರಿಗೆ ತ್ವರಿತ ಮಾಹಿತಿಯನ್ನು ನೀಡಲು ತಾಲೂಕು ಕಚೇರಿ ದೂರವಾಣಿ ಸಂಖ್ಯೆ-230349ನ್ನು ಸಹಾಯವಾಣಿ ಕೇಂದ್ರವಾಗಿ ಲಭ್ಯವಾಗಿರಿಸುವ ಮೂಲಕ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ.


ಭರ್ತಿ ಮಾಡುವ ಬಗ್ಗೆ:
ಎನ್ಯೂಮರೇಷನ್ ಫಾರಂ ಮೇಲ್ಬಾಗದಲ್ಲಿ ಎಡಭಾಗದಲ್ಲಿ 2002ರಲ್ಲಿ ಇರುವ ಮತದಾರರು ಭರ್ತಿ ಮಾಡುವುದು ಹಾಗೂ 2002ರಲ್ಲಿ ತಂದೆ, ತಾಯಿ, ಅಜ್ಜ, ಅಜ್ಜಿಗೆ ಪ್ರೊಜೆನಿಯಾಗಿ ಮ್ಯಾಪಿಂಗ್ ಮಾಡುವವರು, ಬಲಭಾಗದಲ್ಲಿ 2002ರ ತಂದೆ/ತಾಯಿ/ಅಜ್ಜ ಅಜ್ಜಿ/ಯಾರಾದರೂ ಒಬ್ಬರ ಮಾಹಿತಿಯನ್ನು ದಾಖಲಿಸಬೇಕು. ಹಾಗೂ ನಮೂನೆಯ ಕೆಳಭಾಗದಲ್ಲಿ 2025ರ ತಮ್ಮ ಮತದಾರರ ಮಾಹಿತಿಯನ್ನು ದಾಖಲಿಸಬೇಕೆನ್ನುವ ಮಾಹಿತಿಯನ್ನು ನೀಡಲಾಯಿತು. ಮಾಹಿತಿ ತಪ್ಪಾಗಿ ಭರ್ತಿ ಮಾಡದಂತೆ ಸೂಕ್ತ ಮಾರ್ಗದರ್ಶನವನ್ನು ಬಿ.ಎಲ್.ಓ ಅಥವಾ ಬಿ.ಎಲ್.ಓ ಸುಪರ್ವೈಸರ್ ಕಡೆಯಿಂದ ಮಾಹಿತಿ ಪಡೆದು ಭರ್ತಿ ಮಾಡಲು ಸಭೆಯಲ್ಲಿ ತಿಳಿಸಲಾಯಿತು. ಎಲ್ಲಾ ಮತಗಟ್ಟೆಯ ಬಿ.ಎಲ್.ಎ. ಅವರು ತಮ್ಮ ವ್ಯಾಪ್ತಿಯಡಿ ಮತದಾರರಿಗೆ ತಿಳಿಸಲು ತಹಶೀಲ್ದಾರ್ ಅವರು ಸೂಚಿಸಿದರು.


ಭಾರತೀಯ ಜನತಾ ಪಾರ್ಟಿಯಿಂದ ಹರೀಶ್ ಬಿಜತ್ರೆ, ಕಾಂಗ್ರೆಸ್ ಪಕ್ಷದಿಂದ ಪೂರ್ಣೇಶ್ ಕುಮಾರ್, ಆಮ್ ಆದ್ಮಿ ಪಕ್ಷದ ಸಯ್ಯದ್ ನಿಸಾರ್, ಜಾತ್ಯಾತೀತ ಜನತಾದಳದ ಅಶ್ರಫ್ ಕಲ್ಲೇಗ ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here