







ಬೆಳ್ಳಾರೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲದೇ ರಾಜ್ಯಮಟ್ಟದಲ್ಲೂ ದೊಡ್ಡ ಸದ್ದು ಮಾಡಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರನ್ನು ಬಂಧಿಸಲಾಗಿದೆ. ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಇದೀಗ ನಾಲ್ಕು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ನೌಷದ್ (32) ಮತ್ತು ಕೊಡಗು ಸೋಮವಾರಪೇಟೆಯ ಅಬ್ದುಲ್ ನಾಸಿರ್ (41) ಬಂಧಿತರು.
ತಲೆಮರೆಸಿಕೊಂಡಿದ್ದ ನೌಷದ್ನನ್ನು ಬೆಂಗಳೂರಿನಲ್ಲೂ ಅಬ್ದುಲ್ ನಾಸಿರ್ನನ್ನು ಕೇರಳದ ಕೊಚ್ಚಿಯಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.



2022ರ ಜು.26ರಂದು ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ಸುಳ್ಯ ತಾಲೂಕಿನ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ತಾನು ವ್ಯವಹಾರ ಮಾಡುತ್ತಿದ್ದ ಅಕ್ಷಯ ಫಾರ್ಮ್ ಕೋಳಿ ಅಂಗಡಿಯ ಸಮೀಪದಲ್ಲೇ ಮಾರಕಾಸಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.ಅಂದಿನ ಬಿಜೆಪಿ ಸರ್ಕಾರ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿತ್ತು. ಈ ಪ್ರಕರಣಕ್ಕೆ ಸಂಬಂಽಸಿದಂತೆ ಒಟ್ಟು 28 ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.ಇದುವರೆಗೆ ಒಟ್ಟು 23 ಆರೋಪಿಗಳ ಬಂಧನವಾಗಿದ್ದು, ಐವರು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಸದ್ಯ ಬಂಧಿತನಾಗಿರುವ ನೌಶಾದ್, ಪ್ರಕರಣದಲ್ಲಿನ ಪ್ರಮುಖ ಆರೋಪಿಗಳು ತಪ್ಪಿಸಿಕೊಳ್ಳಲು ಚಾಲಕನಾಗಿ ಸಹಾಯ ಮಾಡಿದ್ದ ಎಂದು ಆರೋಪಿಸಲಾಗಿದೆ. ಆರೋಪಿಗಳನ್ನು ಎನ್ಐಎ ಅಧಿಕಾರಿಗಳು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ತಲೆಮರೆಸಿಕೊಂಡಿದ್ದ ಬಗ್ಗೆ ರಾಷ್ಟ್ರೀಯ ತನಿಖಾ ದಳ ಪತ್ರಿಕಾ ಪ್ರಕಟಣೆ ಹೊರಡಿಸಿ ಪತ್ತೆಗೆ ಸಹಕರಿಸಿದ್ದಲ್ಲಿ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು.
ಕ್ಯಾಬ್ ಡ್ರೈವರ್ ಸೇರಿದಂತೆ ವಿವಿಧ ಕೆಲಸಗಳಲ್ಲಿ ದುಡಿದಿದ್ದ ಪ್ರವೀಣ್ ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ಆರಂಭಿಸಿದ್ದರು, ಅವರ ಪತ್ನಿ ಕೂಡ ಕೆಲಸ ಮಾಡುತ್ತಿದ್ದು, ಬದುಕು ಚೆನ್ನಾಗಿ ನಡೆಯುತ್ತಿತ್ತು. ಇದರ ಮಧ್ಯೆ ನೆಟ್ಟಾರುವಿನಲ್ಲಿ ಮನೆ ನಿರ್ಮಿಸುವ ಕನಸನ್ನು ಪ್ರವೀಣ್ ಇಟ್ಟುಕೊಂಡಿದ್ದರು. ಈ ಕನಸನ್ನು ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಈಡೇರಿಸಿದ್ದರು.










