ಕೆಸರುಮಯವಾದ ಕುಮಾರಧಾರ ಹಳೆ ಸೇತುವೆ ರಸ್ತೆ : ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿಗಳಿಗೆ ಸಂಕಷ್ಟ

0

ಉಪ್ಪಿನಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕ ಪಾದಾಚಾರಿಗಳ ಪಾಲಿಗೆ ಸುರಕ್ಷಿತ ಸಂಚಾರ ತಾಣವಾಗಿರುವುದು ಉಪ್ಪಿನಂಗಡಿಯ ಕುಮಾರಧಾರಾ ಹಳೇ ಸೇತುವೆ ರಸ್ತೆ. ಇದರಲ್ಲಿ ಘನ ವಾಹನ ಸಂಚಾರ ನಿಷೇಧಿಸಲ್ಪಟ್ಟ ಕಾರಣ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಬಹುತೇಕ ಪಾದಾಚಾರಿಗಳು ಇದೇ ಸೇತುವೆಯ ಮೂಲಕ ಉಪ್ಪಿನಂಗಡಿಗೆ ಸಂಪರ್ಕ ಸಾಧಿಸುತ್ತಾರೆ. ಆದರೆ ಈ ಸೇತುವೆಯ ಸಂಪರ್ಕ ರಸ್ತೆ ನೆಕ್ಕಿಲಾಡಿ ಭಾಗದಲ್ಲಿ ಸಂಪೂರ್ಣ ಕೆಸರಿನಿಂದ ಕೂಡಿ ಗದ್ದೆಯಂತಾಗಿದ್ದು, ನಡೆದಾಡಲು ಅಸಾಧ್ಯವೆನಿಸಿದ ಸ್ಥಿತಿ ಉದ್ಭವಿಸಿದೆ.


ಪಾದಚಾರಿಗಳಿಗೆ ಸುರಕ್ಷತೆಯಿಲ್ಲ:
ಇಲ್ಲಿ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥದ ಕಾಮಗಾರಿ ಸಂದರ್ಭ ಹೊಸ ಸೇತುವೆಯಲ್ಲಿ ಫೂಟ್‌ಪಾತ್ ಅನ್ನು ನಿರ್ಮಿಸಲಾಗಿತ್ತು. ಆದರೆ ಸೇತುವೆಯಲ್ಲಿ ಸುರಕ್ಷತಾ ಕಾಮಗಾರಿ ನಡೆಸಿದ ವೇಳೆ ಪೂಟ್ ಪಾತ್ ನಲ್ಲಿ ಹಾಕಲಾಗಿರುವ ಕಾಂಕ್ರೀಟ್ ಮಿಶ್ರಣ ಸಹಿತ ಕಸಕಡ್ಡಿಗಳನ್ನು ಹಾಗೆಯೇ ಉಳಿಸಲಾಗಿದ್ದು, ಇದನ್ನು ನಡೆಯಲು ಯೋಗ್ಯವಾಗದ ಸ್ಥಿತಿಯಲ್ಲಿ ಇರಿಸಲಾಗಿದೆ. ಮಾತ್ರವಲ್ಲದೆ ಚತುಷ್ಪಥ ಹೆದ್ದಾರಿಯ ತಡೆಬೇಲಿಯು ಸೇತುವೆಯಂಚಿನವರೆಗೆ ಹಾಕಲಾಗಿದ್ದು, ಪಾದಾಚಾರಿಗಳು ಫೂಟ್‌ಪಾತ್ ಅನ್ನು ಬಳಸಲು ಕೂಡಾ ಆಗದಂತಾಗಿದೆ. ಈ ಕಾರಣ ಪಾದಾಚಾರಿಗಳು ನೇರವಾಗಿ ಸೇತುವೆಯಲ್ಲಿಯೇ ನಡೆದಾಡಬೇಕಾಗಿದ್ದು, ಪೈಪೋಟಿಗಿಳಿದಂತೆ ವೇಗವಾಗಿ ಸಂಚರಿಸುವ ವಾಹನಗಳ ನಡುವೆ ಜೀವ ಕೈಯಲ್ಲಿ ಹಿಡಿದುಕೊಂಡು ನಡೆದಾಡಬೇಕಾಗಿದೆ. ಇಂತಹ ಸ್ಥಿತಿಯಲ್ಲಿ ಶಾಲೆಗೆ ಹೋಗುವ ಎಳೆಯ ಮಕ್ಕಳನ್ನು ಚತುಷ್ಪಥ ರಸ್ತೆಯ ಸೇತುವೆಯಲ್ಲಿ ನಡೆದಾಡಿಸಲು ಹೆತ್ತವರು ಭಯಪಡುತ್ತಿದ್ದಾರೆ. ಮಕ್ಕಳು ಮಹಿಳೆಯರ ಪಾಲಿಗೆ ಸುರಕ್ಷತಾ ಸಂಚಾರ ಮಾರ್ಗವಾಗಿರುವ ಕುಮಾರಧಾರಾ ಹಳೇ ಸೇತುವೆಯ ಸಂಪರ್ಕ ರಸ್ತೆಯನ್ನು ಸಂಚಾರಯೋಗ್ಯಗೊಳಿಸಬೇಕು ಎಂದು ಎಲ್ಲರ ಆಗ್ರಹವಾಗಿದೆ..ಕುಮಾರಧಾರ ಹಳೆ ಸೇತುವೆಯ ಈ ರಸ್ತೆಯಲ್ಲಿ ಮಳೆ ಬಂದಾಗ ಅನಿವಾರ್ಯವಾಗಿ ನಡೆದಾಡಲು ಪ್ರಯತ್ನಿಸಿದಾಗಲೆಲ್ಲಾ ಕೆಸರು ಮಣ್ಣಿನಲ್ಲಿ ಜಾರಿ ಬೀಳುವ ದೃಶ್ಯಗಳೇ ಇಲ್ಲಿ ನಿತ್ಯ ಕಾಣುವಂತಾಗಿದೆ. ದ್ವಿಚಕ್ರ ವಾಹನ ಸವಾರರೂ ಸ್ಕಿಡ್ ಆಗಿ ಬೀಳುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದೆ.


ಒಂದು ಮಗುವಿಗೂ ತೊಂದರೆಯಾಗಬಾರದೆಂಬ ಸದುದ್ದೇಶದಿಂದ ಮಳೆಯ ಮುನ್ಸೂಚನೆ ದೊರೆತಾಕ್ಷಣ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವ ಜಿಲ್ಲಾಡಳಿತ , ದಿನ ನಿತ್ಯ ಶಾಲಾ ಮಕ್ಕಳು ಅನಿವಾರ್ಯವಾಗಿ ಬಳಸುವ ಈ ರಸ್ತೆಯನ್ನು ಸುಸ್ಥಿತಿಯಲ್ಲಿಡಲು ಅಧಿಕಾರಿಗಳು ಬದ್ದತೆ ತೋರದಿರುವ ಬಗ್ಗೆ ಮಧ್ಯ ಪ್ರವೇಶಿಸಬೇಕು. ಸಂಕಷ್ಠಮಯ ಸಂಚಾರವನ್ನು ನಿವಾರಿಸುವ ನಿಟ್ಟಿನಲ್ಲಿ ರಸ್ತೆಯನ್ನು ಸಂಚಾರಯೋಗ್ಯವನ್ನಾಗಿಸುವ ಬಗ್ಗೆ ಅಧಿಕಾರಿ ವರ್ಗವನ್ನು ಕ್ರಿಯಾಶೀಲಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ದ.ಕ ಜಿಲ್ಲ್ಲಾಧಿಕಾರಿಯವರು ಗಮನ ಹರಿಸಬೇಕಾಗಿದೆ ಎಂದು ಉಪ್ಪಿನಂಗಡಿ ವರ್ತಕ ಸಂಘದ ಕೋಶಾಧಿಕಾರಿ ಲೋಕೆಶ್ ಆಚಾರ್ಯ ಆಗ್ರಹಿಸಿದ್ದಾರೆ.


ಜಲ್ಲಿ ಹುಡಿಯನ್ನಾದರೂ ಹಾಕಲಿ:
ಸೇತುವೆಯ ದುಸ್ಥಿತಿಯ ಬಗ್ಗೆ ಪಂಚಾಯತ್ ಆಡಳಿತಕ್ಕೆ ಖುದ್ದು ಲಿಖಿತ ಮನವಿ ಸಲ್ಲಿಸಿದ್ದ ನೆಕ್ಕಿಲಾಡಿ ನಿವಾಸಿ ಸುದರ್ಶನ್ ಗಾಣಿಗ ಮಾತನಾಡಿ, ಮನವಿ ಸಲ್ಲಿಸಿ ತಿಂಗಳು ಕಳೆದರೂ ಸಂಕಷ್ಟ ಭರಿತ ಸಂಚಾರ ನಮಗೆ ನಿತ್ಯ ನಿರಂತರ ಎಂದೆಣಿಸಿದೆ. ಜನಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇದ್ದಾಗ ನಮ್ಮ ಭಾವನೆಗೆ , ನೋವಿಗೆ ಸ್ಪಂದನ ಸಿಗುತ್ತಿತ್ತು. ಈಗ ಆಡಳಿತಾಧಿಕಾರಿಗಳು. ಅವರು ವಾಹನದಲ್ಲಿ ಸಂಚರಿಸುವವರು. ನಡೆದಾಡುವವರ ನೋವು ಅವರಿಗೆಲ್ಲಿ ಅರ್ಥವಾಗುವುದು. ಮಕ್ಕಳು , ಮಹಿಳೆಯರು ಈ ರಸ್ತೆಯಲ್ಲಿ ನಡೆದಾಡುವಾಗ ಜಾರಿ ಬೀಳುವುದನ್ನು ಕಂಡಾಗ ಬೇಸರವಾಗುತ್ತದೆ. ಕನಿಷ್ಟ ಜಲ್ಲಿ ಹುಡಿ ತಂದು ಹಾಕಿ, ರಸ್ತೆಯ ಇಕ್ಕೆಲದಲ್ಲಿ ಮಳೆ ನೀರು ಹರಿದು ಹೋಗುವಂತಹ ಚರಂಡಿ ನಿರ್ಮಿಸಿದರೆ ಇಲ್ಲಿ ಸಮಸ್ಯೆ ಬಗೆಹರಿದಂತೆ. ಅದಕ್ಕೂ ಪಂಚಾಯತ್ ಆಡಳಿತ ಬಡತನ ತೋರಿದರೆ ನಾವೇನು ಮಾಡಲು ಸಾಧ್ಯ ಎಂದು ಅಸಹಾಯಕತೆ ತೋರಿದ್ದಾರೆ.

ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ. ಮಳೆ ಬಂದಾಗ ರಸ್ತೆ ಕೆಸರುಮಯವಾಗುತ್ತಿರುವ ಬಗ್ಗೆ ಈಗಾಗಲೇ ದೂರುಗಳು ಬಂದಿದೆ. ಈ ಬಗ್ಗೆ ನಾನು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಆದರೆ ಅದಕ್ಕವರು ನಾವು ಮೇಲೆ ಚತುಷ್ಪಥ ಹೆದ್ದಾರಿ ಮಾಡಿಕೊಟ್ಟಿದ್ದೇವೆ. ಆದ್ದರಿಂದ ಈ ರಸ್ತೆಯನ್ನು ದುರಸ್ತಿ ಮಾಡಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಎಲ್ಲಿಯಾದರೂ ಚರಳಿನ ಲಭ್ಯತೆ ಇದ್ದಲ್ಲಿ ಅದನ್ನು ಇಲ್ಲಿ ತಂದು ಹಾಕಿ ಸಮಸ್ಯೆ ನಿವಾರಣೆಗೆ ಗ್ರಾ.ಪಂ.ನಿಂದ ಕ್ರಮಕೈಗೊಳ್ಳಲಾಗುವುದು.
ರವಿಚಂದ್ರ
ಅಭಿವೃದ್ಧಿ ಅಧಿಕಾರಿ, 34 ನೆಕ್ಕಿಲಾಡಿ ಗ್ರಾ.ಪಂ.

LEAVE A REPLY

Please enter your comment!
Please enter your name here