






ಪುತ್ತೂರು: ಮಾಣಿಲ ಗ್ರಾಮದಲ್ಲಿರುವ ಶ್ರೀಧಾಮ ಮಾಣಿಲ ಕ್ಷೇತ್ರ ಪ್ರಾರಂಭವಾದಾಗಿನಿಂದ ದೊಡ್ಡ ಮೊತ್ತದ ಅನುದಾನ ಶಾಸಕ ಅಶೋಕ್ ರೈಯವರ ಮೂಲಕ ಕ್ಷೇತ್ರಕ್ಕೆ ಮಂಜೂರಗೊಂಡಿದ್ದು ಇದು ಶಾಸಕ ಅಶೋಕ್ ರೈ ಅವರ ಅಭಿವೃದ್ದಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.


ಅವರು ಮಾಣಿಲ ಕ್ಷೇತ್ರದಲ್ಲಿ ಶಾಸಕ ಅಶೋಕ್ ರೈ ಅವರು ಮಂಜೂರುಗೊಳಿಸಿದ 15 ಲಕ್ಷ ರೂ ಅನುದಾನದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.



ರಾಜಕೀಯಕ್ಕೆ ಬರುವ ಮೊದಲೇ ಅಶೋಕ್ ರೈ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು, ಶಾಸಕರಾದ ಬಳಿಕ ಅದು ಇಮ್ಮಡಿಯಾಗಿದೆ. ಬಸವಣ್ಣ ಅವರ ತತ್ವದಂತೆ ಕಾಯಕವೇ ಕೈಲಾಸ ಇದರಡಿ ಕೆಲಸ ಮಾಡುತ್ತಿರುವ ಶಾಸಕರ ಕಾರ್ಯವೈಖರಿಯನ್ನು ಕ್ಷೇತ್ರದ ಜನತೆ ಒಪ್ಪಿಕೊಂಡಿದ್ದಾರೆ ಎಂದು ಶ್ರೀಗಳು ಹೇಳಿದರು.
ಮಾಣಿಲದ ಸೀರೆ ನದಿಗೆ ಕೇರಳ ಸಂಪರ್ಕಕಕ್ಕಾಗಿ 26 ಕೋಟಿ ರೂ ಅನುದಾನದಲ್ಲಿ ಸೇತುವೆಯೊಂದು ಮಂಜೂರು ಮಾಡುವ ಮೂಲಕ ಈ ಭಾಗದ ಜನತೆಯ ಅನೇಕ ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದಾರೆ. ಇಲ್ಲಿ ಸೇತುವೆ ಆಗುತ್ತದೆ ಎಂದು ಜನ ಕನಸಿನಲ್ಲಿಯೂ ನೆನೆಸಿರಲಿಲ್ಲ ಅಂತಹ ಕೆಲಸವನ್ನು ಶಾಸಕರು ಮಾಡಿರುವುದು ಅವರ ಅಭಿವೃದ್ದಿ ಇಚ್ಚಾಶಕ್ತಿಯನ್ನು ತೋರಿಸುತ್ತದೆ.ಸಮಾಜದ ಎಲ್ಲಾ ಧರ್ಮದವರ ಜೊತೆ ಉತ್ತಮ ಬಾಂಧವ್ಯ ಹೊಂದಿ ರಾಜಕೀಯದಲ್ಲಿ ಹೊಸ ಮನ್ವಂತರವನ್ನು ಪ್ರಾರಂಭಿಸಿದ್ದಾರೆ. ಹಿಂದೂ ಧರ್ಮದ ದೇವಸ್ಥಾನಗಳನ್ನು ಅಭಿವೃದ್ದಿ ಮಾಡುವ ಕೆಲಸವನ್ನು ಮಾಡುತ್ತಿರುವುದು ಧರ್ಮ ಅಭಿವೃದ್ದಿ ವಿಚಾರದಲ್ಲಿ ಅತ್ಯಂತ ಸಂತೋಷದ ವಿಚಾರವಾಗಿದೆ. ಪುತ್ತೂರಿಗೆ ಅಗತ್ಯವಾಗಿ ಬೇಕಾಗಿದ್ದ ಮೆಡಿಕಲ್ ಕಾಲೇಜನ್ನೂ ಮಂಜೂರು ಮಾಡುವ ಮೂಲಕ ತಾನೊಬ್ಬ ಧೀಮಂತ ಶಾಸಕ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನ ಅಭಿವೃದ್ದಿ ಪರ ಆಶೀರ್ವಾದ ಮಾಡಲಿದ್ದಾರೆ ಎಂದು ಸ್ವಾಮೀಜಿ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಅಶೋಕ್ ರೈ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಬ್ಲಾಕ್ ಕಾರ್ಯದರ್ಶಿ ಶ್ರೀಧರ್ ಬಾಳೆಕಲ್ಲು, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ವಲಯ ಅಧ್ಯಕ್ಷ ವಿಷ್ಣುಭಟ್ ಕೊಮ್ಮುಂಜೆ, ಮಾಜಿ ಗ್ರಾಪಂ ಅಅಧ್ಯಕ್ಷೆ ವನಿತಾ ತಾರಿದಳ, ಬೂತ್ ಅಧ್ಯಕ್ಷ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.










