ಕೆಯ್ಯೂರು: ಮಳೆಗಾಳಿಗೆ ಹಾನಿಯಾಗಿದ್ದ ಮನೆಗೆ ಆಸರೆಯಾದ ವಿಜಯ ಸಾಮ್ರಾಟ್ ಸಂಸ್ಥೆ-ರೂ.50 ಸಾವಿರ ವೆಚ್ಚದಲ್ಲಿ ಮೇಲ್ಛಾವಣಿ ನಿರ್ಮಿಸಿ ಹಸ್ತಾಂತರ- ಸಂತ್ರಸ್ತ ಕುಟುಂಬದಿಂದ ಕೃತಜ್ಞತಾ ಗೌರವಾರ್ಪಣೆ

0

ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಣಂಗಳದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ವಿಧವೆ ಮಹಿಳೆಯೋರ್ವರ ಮನೆಯ ಮೇಲ್ಛಾವಣಿ ಹಾನಿಗೊಳಗಾಗಿತ್ತು. ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ವಿಜಯ ಸಾಮ್ರಾಟ್ ಸಂಸ್ಥೆಯು ಆಸರೆಯಾಗಿ ನಿಂತಿದ್ದು ಇದೀಗ ಮನೆಯ ಮೇಲ್ಛಾವಣಿಯನ್ನು ಸಂಪೂರ್ಣವಾಗಿ ಕಬ್ಬಿಣದ ರಾಡ್ ಬಳಸಿ ನಿರ್ಮಿಸಿ ಅದಕ್ಕೆ ಶೀಟು ಅಳವಡಿಸುವ ಮೂಲಕ ಸುಸಜ್ಜಿತ ಮೇಲ್ಛಾವಣಿ ನಿರ್ಮಿಸಿಕೊಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ.
ಸಣಂಗಳದಲ್ಲಿ ಲೀಲಾವತಿ ಯಶೋಧರ ಗೌಡ ಎಂಬವರು ತನ್ನ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಮೇ.11ರಂದು ಸುರಿದ ಮಳೆಗಾಳಿಯ ಆರ್ಭಟಕ್ಕೆ ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಗೊಳಗಾಗಿದ್ದು, ಆ ಕುಟುಂಬವು ತೀವ್ರ ತೊಂದರೆಗೆ ಸಿಲುಕಿತ್ತು. ಈ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ವರದಿಯನ್ನು ಗಮನಿಸಿದ ವಿಜಯ ಸಾಮ್ರಾಟ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ ಅವರು, ತಕ್ಷಣವೇ ಸ್ಪಂದಿಸಿ ಸಂತ್ರಸ್ತ ಕುಟುಂಬದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಸಂಸ್ಥೆಯ ಮಾನವೀಯ ಕಾರ್ಯ
ಕುಟುಂಬದ ಸಂಕಷ್ಟವನ್ನು ಅರಿತ ಸಹಜ್ ರೈ ಅವರು, ತಮ್ಮ ಸಂಸ್ಥೆಯ ವತಿಯಿಂದ ತಕ್ಷಣವೇ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡರು. ಸ್ಥಳ|ಈಯ ಶ್ರೀ ದುರ್ಗಾ ಇಂಡಸ್ಟ್ರೀಸ್‌ನವರನ್ನು ಕರೆಸಿ ಮನೆಗೆ ಸುಸಜ್ಜಿತ ಮೇಲ್ಛಾವಣಿ ನಿರ್ಮಿಸಲು ಸೂಚನೆ ನೀಡಿದ್ದರು. ಅದರಂತೆ ಸುಮಾರು 50 ಸಾವಿರ ರೂಪಾಯಿ ವೆಚ್ಚದಲ್ಲಿ ಮನೆಯ ಮಾಡಿಗೆ ಕಬ್ಬಿಣದ ರಾಡ್‌ಗಳನ್ನು ಅಳವಡಿಸಿ, ಸುಭದ್ರವಾದ ಹೊಸ ಶೀಟುಗಳನ್ನು ಹಾಕಿಸಿಕೊಡುವ ಮೂಲಕ ಆ ಕುಟುಂಬಕ್ಕೆ ನೆಮ್ಮದಿಯ ನೆರಳು ನೀಡಿದ್ದಾರೆ.


ಕೃತಜ್ಞತಾ ಸನ್ಮಾನ
ತಮ್ಮ ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿದ ವಿಜಯ ಸಾಮ್ರಾಟ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಸಹಜ್ ರೈ ಅವರ ಮಾನವೀಯ ಕಾರ್ಯಕ್ಕೆ ಸಂತ್ರಸ್ತ ಕುಟುಂಬದವರು ಭಾವುಕರಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಹಜ್ ರೈ ಅವರನ್ನು ಮನೆಗೆ ಆಹ್ವಾನಿಸಿ, ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜೇಶ್ ರೈ ಪರ್ಪುಂಜ, ಚಂದ್ರಶೇಖರ ರೈ ಸಣಂಗಳ, ಪ್ರಶಾಂತ್ ಕುಮಾರ್ ಬಾಕ್ತಿಮಾರ್, ದಿನೇಶ್ ವಾಸುಕಿ, ವಿನಯ ಕುಮಾರ್ ಕೊಡ್ಲೆ, ವಿಜಯ ಕುಮಾರ್ ಸಣಂಗಳ, ದಿಲೀಪ್ ಸಣಂಗಳ, ಸುಜನ್ ಕುಮಾರ್,ಜಯಂತಿ ಎರೆಕ್ಕಳ, ಶಿಲ್ಪಾ, ವೇದಾವತಿ ಸಣಂಗಳ, ಮನೆಯವರಾದ ಲೀಲಾವತಿ ಯಶೋಧರ ಗೌಡ,ಯಶ್ವಿತಾ, ಲಿಖಿತಾ, ಹರ್ಷಿತ್ ಉಪಸ್ಥಿತರಿದ್ದರು.

ಕಬ್ಬಿಣದ ರಾಡ್ ಬಳಸಿ ಮನೆಯ ಮೇಲ್ಛಾವಣಿ ನಿರ್ಮಿಸಿ ಶೀಟು ಅಳವಡಿಸಿ ವಾಸಕ್ಕೆ ಯೋಗ್ಯ ರೀತಿಯಲ್ಲಿ ಮಾಡಿ ಕೊಡುವ ಕೆಲಸವನ್ನು ವಿಜಯ ಸಾಮ್ರಾಟ್ ಸಂಸ್ಥೆಯ ವತಿಯಿಂದ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸರಕಾರದಿಂದ ಮನೆ ನಿರ್ಮಾಣಕ್ಕೆ ಸಹಾಯಧನ ಪಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಒಂದು ವೇಳೆ ಅನುದಾನ ಸಿಗದೇ ಹೋದರೆ ಸಂಸ್ಥೆಯ ವತಿಯಿಂದಲೇ ಮನೆ ನಿರ್ಮಾಣದ ಬಗ್ಗೆ ಚಿಂತನೆ ಮಾಡಲಾಗುವುದು. ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
-ಸಹಜ್ ರೈ ಬಳಜ್ಜ,
ಸ್ಥಾಪಕ ಅಧ್ಯಕ್ಷರು ವಿಜಯ ಸಾಮ್ರಾಟ್ ಸಂಸ್ಥೆ ಪುತ್ತೂರು

LEAVE A REPLY

Please enter your comment!
Please enter your name here