







ನಿಡ್ಪಳ್ಳಿ: ಪಠ್ಯಪುಸ್ತಕದ ಜೊತೆಗೆ ಪ್ರಕೃತಿಯ ಪಾಠವನ್ನೂ ಮಕ್ಕಳಿಗೆ ಕಲಿಸುತ್ತಿರುವ ಅಪರೂಪದ ಶಾಲೆಯಾಗಿ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆ ಗುರುತಿಸಿಕೊಂಡಿದೆ. ಇಲ್ಲಿ ಮಕ್ಕಳೇ ನೆಟ್ಟು ಬೆಳೆಸಿದ ರಾಸಾಯನಿಕ ಮುಕ್ತ ಸಾವಯವ ತರಕಾರಿಯೇ ಮಧ್ಯಾಹ್ನದ ಬಿಸಿ ಊಟಕ್ಕೆ ಬಳಕೆಯಾಗುತ್ತಿದೆ. ಪುಸ್ತಕದಿಂದ ಮಾತ್ರವಲ್ಲ, ಮಣ್ಣಿನಿಂದಲೂ ಕಲಿಕೆ ಸಾಧ್ಯ ಎಂದು ಸಾಧಿಸಿ ತೋರಿಸಿದ ಈ ಶಾಲೆ ಅಕ್ಷರ ದಾಸೋಹಕ್ಕೆ ತರಕಾರಿಯನ್ನು ಹಣ ಕೊಟ್ಟು ತರುವುದನ್ನು ನಿಲ್ಲಿಸಿ ಸ್ವಾವಲಂಭಿಯಾಗಿ ಬೇಕಾದಷ್ಟು ಬೆಳೆಸುತ್ತಿದೆ.



ಅಕ್ಷರ ಕೈತೋಟ – ಮಕ್ಕಳ ಕೈಯಲ್ಲಿ ಹಸಿರು ಕ್ರಾಂತಿ
ನವೋದಯ ಇಕೋ ಕ್ಲಬ್ ಮತ್ತು ಅಕ್ಷರ ಕೈತೋಟ ಯೋಜನೆಯಡಿ ಶಾಲಾ ಆವರಣದಲ್ಲೇ ಸುಂದರವಾದ ತರಕಾರಿ ತೋಟವನ್ನು ನಿರ್ಮಿಸಲಾಗಿದೆ. ಇಲ್ಲಿ ಹೀರೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಅಳಸಂಡೆ, ಅವರೆ, ಕುಂಬಳಕಾಯಿ, ಚೀನಿಕಾಯಿ, ಮರಗೆಣಸು, ಸಿಹಿ ಗೆಣಸು, ಬಸಳೆ, ವಿಟಮಿನ್ ಸೊಪ್ಪು, ತಿಮರೆ, ಅವುಂಡ ಬಾಳೆ, ಮುಂಡಿ, ಪಪ್ಪಾಯಿ, ಪೈನಾಪಲ್, ಸುವರ್ಣ ಗೆಡ್ಡೆ ಮುಂತಾದವುಗಳನ್ನು ವರ್ಷವಿಡೀ ಬೆಳೆಸುತ್ತಾರೆ. ಹಣ್ಣಿನ ಗಿಡಗಳಾದ ಚಿಕ್ಕು, ಬಾಳೆ, ಮಾವು, ನಿಂಬೆ, ತೆಂಗು, ಹಲಸು ಕೂಡ ಇವೆ.



ಆಡಳಿತ ಮಂಡಳಿಯ ಪ್ರೋತ್ಸಾಹ
ಶಾಲಾ ಆಡಳಿತ ಮಂಡಳಿಯು ಕಳೆದ ನವೆಂಬರ್ ತಿಂಗಳಲ್ಲಿ ತೋಟಕ್ಕಾಗಿ ಜಾಗವನ್ನು ಸಮತಟ್ಟು ಮಾಡಿಕೊಟ್ಟು ಪ್ರೋತ್ಸಾಹಿಸಿದೆ. ಶಿಕ್ಷಕಿ ಭುವನೇಶ್ವರಿ ಎಂ ಅವರು ಅಕ್ಷರ ಕೈತೋಟದ ಮಾರ್ಗದರ್ಶಕರಾಗಿ ವಿಶೇಷ ಮುತುವರ್ಜಿ ವಹಿಸಿದ್ದಾರೆ. ದೈಹಿಕ ಶಿಕ್ಷಕರಾದ ಬಾಲಕೃಷ್ಣ.ಪಿ ಹಾಗೂ ಇತರೆ ಎಲ್ಲಾ ಶಿಕ್ಷಕರ ಸಹಕಾರದಿಂದ ಮಕ್ಕಳಿಗೆ ತರಕಾರಿ ಕೃಷಿ ಮತ್ತು ಹೂತೋಟದ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ
ಮಕ್ಕಳ ಆರೋಗ್ಯಕ್ಕೆ ಶುದ್ಧ ಆಹಾರ
ಇಲ್ಲಿ ಬೆಳೆದ ರಾಸಾಯನಿಕ ಮುಕ್ತ, ಉತ್ತಮ ಗುಣಮಟ್ಟದ ತಾಜಾ ತರಕಾರಿಗಳನ್ನು ನೇರವಾಗಿ ಮಧ್ಯಾಹ್ನದ ಬಿಸಿಊಟಕ್ಕೆ ಬಳಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ಪೌಷ್ಟಿಕ ಆಹಾರದ ಜೊತೆಗೆ ಕೃಷಿಯ ಮಹತ್ವವೂ ಅರಿವಾಗುತ್ತಿದೆ.
ಪರಿಸರ ಮಿತ್ರ ಶಾಲೆಗೆ ಸಂದ ಗೌರವ
ನವೋದಯ ಇಕೋ ಕ್ಲಬ್ ವತಿಯಿಂದ ಹಲವು ವರ್ಷಗಳಿಂದ ನಡೆಸುತ್ತಿರುವ ಪರಿಸರ ಚಟುವಟಿಕೆಗಳಿಗೆ ಮನ್ನಣೆ ಸಿಕ್ಕಿದೆ. ಸತ 3 ವರ್ಷಗಳ ಕಾಲ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಉತ್ತಮ ಪರಿಸರಮಿತ್ರ ಶಾಲೆ ಜಿಲ್ಲಾ ಮಟ್ಟದ ಪ್ರಶಸ್ತಿ ಫಲಕ ಹಾಗೂ ನಗದು ಪುರಸ್ಕಾರವನ್ನು ಈ ಶಾಲೆ ಪಡೆದಿದೆ.
ಸಾಮೂಹಿಕ ಸಹಕಾರ
ಈ ಸುಂದರ ಅಕ್ಷರ ಕೈತೋಟ ನಿರ್ಮಾಣದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಶಾಲಾ ಸಂಚಾಲಕರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರು, ಪೋಷಕರು, ಇಕೋ ಕ್ಲಬ್ ಸದಸ್ಯರು ಮತ್ತು ಎಲ್ಲಾ ವಿದ್ಯಾರ್ಥಿಗಳ ಸಹಕಾರವಿದೆ ಎಂದು ಮುಖ್ಯ ಶಿಕ್ಷಕಿ ಪುಷ್ಪಾವತಿ ಎಸ್ ತಿಳಿಸಿದ್ದಾರೆ.ಎಲ್ಲಾ ಶಾಲೆಗಳಲ್ಲಿ ಇಂಥ ಚಟುವಟಿಕೆಗಳು ನಿರಂತರವಾಗಿ ನಡೆದಾಗ ಅಕ್ಷರ ದಾಸೋಹದಲ್ಲಿ ಸ್ವಾವಲಂಭಿಯಾಗಿ ಬೆಳೆಯಬಹುದು ಎಂದು ಅವರು ಹೇಳಿದರು.










