







ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ ಮತ್ತು ಪ್ರಸಾದ್ ನೇತ್ರಾಲಯ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ಜು.14 ರಂದು ಪುತ್ತೂರು ರಾಧಾಕೃಷ್ಣ ಬಿಲ್ಡಿಂಗ್ ನಲ್ಲಿನ ಪುತ್ತೂರು ರೋಟರಿ ಕಣ್ಣಿನ ಆಸ್ಪತ್ರೆಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.



ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ಪುತ್ತೂರು ರೋಟರಿ ಕ್ಲಬ್ ಈಗಾಗಲೇ ರೋಟರಿಪುರದಲ್ಲಿ ಫಲಾನುಭವಿಗಳಿಗೆ ಮನೆ ನಿರ್ಮಾಣ, ಅಶಕ್ತರಿಗೆ ಅಗತ್ಯ ಸಂದರ್ಭದಲ್ಲಿ ನೆರವು, ಅಂಗನವಾಡಿಗಳ ಅಭಿವೃದ್ಧಿ, ಮ್ಯಾಮೋಗ್ರಾಫಿ ಸೆಂಟರ್ ಮುಂತಾದ ಕೊಡುಗೆಗಳೊಂದಿಗೆ ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಕೇಂದ್ರ ಮುಂತಾದ ಶಾಶ್ವತ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು ಇದೀಗ ಮತ್ತೊಂದು ಶಾಶ್ವತ ಯೋಜನೆಯಾದ ಕಣ್ಣಿನ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದೆ. ಈ ಕಣ್ಣಿನ ಆಸ್ಪತ್ರೆಯಲ್ಲಿ ಇದೀಗ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು ಈ ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲಾಗುವುದು, ಬಿಪಿಎಲ್ ಕಾರ್ಡುದಾರರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಲಾಗುವುದು. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ನಿಗದಿಪಡಿಸಿದ ದಿನಾಂಕಗಳಲ್ಲಿ ಮಾಡಲಾಗುವುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.



ಶಿಬಿರದಲ್ಲಿ ರೋಟರಿ ಪುತ್ತೂರು ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್, ಕಾರ್ಯದರ್ಶಿ ಲೋವಲ್ ಮೇವಾಡ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಶ್ರೀಧರ್ ಕಣಜಾಲು, ಸದಸ್ಯರಾದ ಹೆರಾಲ್ಡ್ ಮಾಡ್ತಾ, ಸುದರ್ಶನ್ ರಾವ್, ವೈದ್ಯೆ ಡಾ.ವಿಷ್ಣುಪೂಜಾ, ರೋಟರಿ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
30 ಫಲಾನುಭವಿಗಳು..
ಶಿಬಿರದಲ್ಲಿ 30 ಮಂದಿ ಫಲಾನುಭವಿಗಳು ಭಾಗವಹಿಸಿ ತಜ್ಞ ವೈದ್ಯರಿಂದ ಸೂಕ್ತ ಸಲಹೆಯನ್ನು ಪಡೆದಿರುತ್ತಾರೆ. ಇದರಲ್ಲಿ 19 ಮಂದಿ(ಬಿಪಿಎಲ್ 11, ಎಪಿಎಲ್ 3) ಮಂದಿಗೆ ಕಣ್ಣಿನ ಪೊರೆ ಚಿಕಿತ್ಸೆಗೆ ವೈದ್ಯರು ಸೂಚಿಸಿರುತ್ತಾರೆ. 4 ಮಂದಿಗೆ ಕನ್ನಡಕ, ಈರ್ವರಿಗೆ ಮೆಡಿಸಿನ್ ನೀಡಿದ್ದು, ಮೂರು ಮಂದಿಗೆ ಮಂಗಳೂರಿನ ಪ್ರಸಾದ್ ನೇತ್ರಾಲಯಕ್ಕೆ ಚಿಕಿತ್ಸೆಗೆ ಸೂಚಿಸಿರುತ್ತಾರೆ.









