







ಪುತ್ತೂರು: ಉರ್ವ ಮಾರ್ಕೆಟ್ ಬಳಿಯ ಮಠದಕಣಿಯ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ಮೂಲದ 3 ಜನ ಕುಖ್ಯಾತ ಮನೆಗಳ್ಳರನ್ನು ಬರ್ಕೆ ಪೊಲೀಸರು ಬಂಧಿಸಿ, ಸುಮಾರು ರೂ. 10 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.


ಬಂಧಿತ ಆರೋಪಿಗಳನ್ನು ತಿಲಕ್ ಕುಮಾರ್ ಖಡ್ಕ (ತಿಲಕ್ ಖಡ್ಕ) (36) – ನೇಪಾಳ, ಅಶೋಕ್ ರಾಜ್ (ಅಶೋಕ್ ಸಿಂಗ್, ಅಶೋಕ್ ಸಿಂಗ್ ಠಾಕುರಿ) (33) – ನೇಪಾಳ, ದಿಪೆಂದರ್ ರಸೈಲಿ (25) – ನೇಪಾಳ ಎಂದು ಗುರುತಿಸಲಾಗಿದೆ.




11-07-2026 ರಂದು ಸಂಜೆ ಮನೆಯವರು ಲಾಕ್ ಮಾಡಿ ಬಂಟ್ವಾಳ ತಾಲೂಕಿನ ವಿಟ್ಲ ಕಡಂಬುವಿನ ಸಂಬಂಧಿಕರ ಮನೆಗೆ ತೆರಳಿದ್ದರು. 12-07-2026 ರಂದು ಬೆಳಗ್ಗೆ ವಾಪಸ್ ಬಂದು ನೋಡಿದಾಗ ಹಿಂಬಾಗಿಲು ಒಡೆದು ಸುಮಾರು 64 ಗ್ರಾಂ ಚಿನ್ನಾಭರಣ ಮತ್ತು 25,000 ರೂ. ನಗದು ಸೇರಿದಂತೆ ಒಟ್ಟು 8,57,000 ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 70/2026 ಕಲಂ: 331(4), 305 BNS ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ಐದು ದಿನಗಳಲ್ಲಿ ಬರ್ಕೆ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಯವರು 17-07-2026ರ ಬೆಳಗಿನ ಜಾವ ಬೋಳೂರಿನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಶದಿಂದ ಬರ್ಕೆ ಠಾಣಾ ಪ್ರಕರಣದ ಎಲ್ಲಾ ಚಿನ್ನಾಭರಣಗಳು ಹಾಗೂ ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಕಳ್ಳತನ ಮಾಡಿದ್ದ 790 ಗ್ರಾಂ ಬೆಳ್ಳಿ ಆಭರಣಗಳು ಸೇರಿದಂತೆ ಸುಮಾರು 10 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳು 2026 ರ ಮಾರ್ಚ್ ನಲ್ಲಿ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನಕ್ಕೆ ಪ್ರಯತ್ನಿಸಿದ್ದ ಅ.ಕ್ರ 44/2026 ಪ್ರಕರಣದಲ್ಲೂ ಭಾಗಿಯಾಗಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಕರ್ನಾಟಕದ ಬೆಂಗಳೂರು, ದಾವಣಗೆರೆ, ಉಡುಪಿ ಸೇರಿದಂತೆ ಹಲವು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 15ಕ್ಕೂ ಹೆಚ್ಚು ಮನೆ ಕಳ್ಳತನ ಮಾಡಿದ್ದಾರೆ. ತಮಿಳುನಾಡು, ದೆಹಲಿ, ಹರ್ಯಾಣ ರಾಜ್ಯಗಳಲ್ಲಿಯೂ ಆರೋಪಿಗಳ ಮೇಲೆ ಪ್ರಕರಣಗಳಿವೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಮುಖ ಪಾತ್ರವಹಿಸಿದ್ದು, ಪ್ರಕರಣವನ್ನು ಅಲ್ಪಾವಧಿಯಲ್ಲೇ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.









