ಬಜತ್ತೂರು-ಬಿದಿರಾಡಿ; 22 ಕೋಟಿ ರೂ.ಅನುದಾನದಲ್ಲಿ ನಿರ್ಮಾಣವಾಗಲಿರುವ ಡಾ| ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಭೂಮಿ ಪೂಜೆ

0

ಬಜತ್ತೂರು-ಬಿದಿರಾಡಿ; 22 ಕೋಟಿ ರೂ.ಅನುದಾನದಲ್ಲಿ ನಿರ್ಮಾಣವಾಗಲಿರುವ ಡಾ| ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಭೂಮಿ ಪೂಜೆ

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಬಿದಿರಾಡಿ ಎಂಬಲ್ಲಿ 22 ಕೋಟಿ ರೂ.ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಡಾ| ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡಕ್ಕೆ ಶಾಸಕ ಅಶೋಕ್‌ಕುಮಾರ್ ರೈ ಅವರು ಜು.18ರಂದು ಶಿಲಾನ್ಯಾಸ ನೆರವೇರಿಸಿದರು.

ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅಶೋಕ್‌ಕುಮಾರ್ ರೈ ಅವರು, ಈ ಭಾಗದ ಜನರ ಬಹುವರ್ಷದ ಬೇಡಿಕೆ ಈಡೇರುತ್ತಿದೆ. ಬಜತ್ತೂರಿನ ಜನರು ಪುಣ್ಯವಂತರು. ಬಜತ್ತೂರುಗೆ ಕೆಪಿಎಸ್ ಶಾಲೆಗೆ 10 ಕೋಟಿ ರೂ., ಅಂಬೇಡ್ಕರ್ ವಸತಿ ಶಾಲೆಗೆ 22 ಕೋಟಿ ರೂ.ಅನುದಾನ ಬಂದಿದೆ. ಈ ಯೋಜನೆಗಳನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ಹೇಳಿದರು. ವಿದ್ಯೆ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಮಕ್ಕಳಿಗೆ ವಿದ್ಯೆ ಕೊಟ್ಟರೆ ಕುಟುಂಬ, ರಾಜ್ಯ, ದೇಶ ಉದ್ಧಾರವಾಗಲಿದೆ. ಸ್ಟ್ರೈಕ್ ಮಾಡುವುದರಿಂದ ದೇಶ ಉದ್ಧಾರ ಆಗುವುದಿಲ್ಲ. ಬಡವರ ಮಕ್ಕಳೂ ಉನ್ನತ ಶಿಕ್ಷಣ ಪಡೆಯಬೇಕು. ವಸತಿ ಶಾಲೆಗಳಲ್ಲಿ ದ.ಕ.ಜಿಲ್ಲೆಯ ಮಕ್ಕಳು ಶೇ.5ರಷ್ಟೂ ಇಲ್ಲ. ಬೇರೆ ಜಿಲ್ಲೆಯ ಮಕ್ಕಳೇ ಹೆಚ್ಚಾಗಿ ಇದ್ದಾರೆ. ವಸತಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಒಳ್ಳೆಯ ಶಿಕ್ಷಣ ಸಿಗುತ್ತಿದೆ. ಇದರ ಬಗ್ಗೆ ಜನರಿಗೆ ಅರಿವು ಇರಬೇಕು. ವಸತಿ ಶಾಲೆಯಲ್ಲಿನ 250 ಮಕ್ಕಳ ಪೈಕಿ 200 ಮಕ್ಕಳು ಪುತ್ತೂರು ತಾಲೂಕಿನವರೇ ಇರಬೇಕೆಂಬುದು ನಮ್ಮ ಆಸೆ ಎಂದು ಹೇಳಿದ ಶಾಸಕರು, ಬಜತ್ತೂರಿಗೆ ವಸತಿ ಶಾಲೆ ಹಾಗೂ ಮುಂಡೂರಿನಲ್ಲಿ ಆರ್‌ಟಿಒ ಟ್ರ್ಯಾಕ್ ಮಂಜೂರಾತಿಗೆ ಸಾಕಷ್ಟು ಸಲ ಸಚಿವರನ್ನು ಭೇಟಿ ಮಾಡಿದ್ದೇನೆ. ಬಹಳಷ್ಟು ಪ್ರಯತ್ನ ಪಟ್ಟಿದ್ದೇನೆ. ವಸತಿ ಶಾಲೆಗೆ ಮೀಸಲಿಟ್ಟ ಜಾಗದಲ್ಲಿನ ಮರ ಕಡಿಯಲು ಅರಣ್ಯ ಇಲಾಖೆ ತಕರಾರು ಇತ್ತು. ಇದರ ಅನುಮತಿಗಾಗಿ ಸಾಕಷ್ಟು ಸಲ ಓಡಾಟ ನಡೆಸಿದ್ದೇನೆ. ಕೊನೆಗೂ ಹಿಂದಿನ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೇ ಕಡತ ತರಿಸಿಕೊಂಡು ಆದೇಶ ಮಾಡಿ ಅನುಕೂಲ ಮಾಡಿಕೊಟ್ಟರು ಎಂದು ಹೇಳಿದರು.

ಶಾಸಕರು ಮತದಾರರ ಋಣ ತೀರಿಸಿದ್ದಾರೆ-ಎಂ.ಎಸ್.ಮಹಮ್ಮದ್;
ಜಿ.ಪಂ.ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್ ಮಾತನಾಡಿ, ವಸತಿ ಶಾಲೆ ಗ್ರಾಮೀಣ ಪ್ರದೇಶಕ್ಕೆ ಬಂದಿರುವುದು ಸಂತಸ ತಂದಿದೆ. ಇಲ್ಲಿ 250 ಮಕ್ಕಳಿಗೆ ವಸತಿಯೊಂದಿಗೆ ಉಚಿತ ಶಿಕ್ಷಣ ಸಿಗಲಿದೆ. ಈ ಮೂಲಕ ಶಾಸಕರು ಪುಣ್ಯದ ಕೆಲಸ ಮಾಡಿದ್ದಾರೆ. ಎಲ್ಲರೂ ಶಿಕ್ಷಣ ಪಡೆಯಬೇಕೆಂಬುದು ಶಾಸಕರ ಅಭಿಲಾಷೆಯಾಗಿದೆ ಎಂದರು. ಜನರಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ನೀಡಲು ಅಶೋಕ್ ರೈ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪುತ್ತೂರಿಗೆ ಮೆಡಿಕಲ್ ಕಾಲೇಜು, ಆಯುರ್ವೇದ ಕಾಲೇಜು, ವಸತಿ ಶಾಲೆಗಳ ಸಹಿತ ಹಲವು ಯೋಜನೆಗಳು ಬಂದಿವೆ. ಆರಾಧನಾ ಕೇಂದ್ರಗಳ ಅಭಿವೃದ್ಧಿಗೂ ಅನುದಾನ ಮಂಜೂರು ಮಾಡಿದ್ದಾರೆ. ಶಾಸಕರಾದ ಎರಡೇ ವರ್ಷದಲ್ಲಿ ಮತದಾರರ ಋಣ ತೀರಿಸಿದ್ದಾರೆ ಎಂದರು.

ಶಾಸಕರಲ್ಲಿ ಇಚ್ಛಾಶಕ್ತಿ,ದೂರದೃಷ್ಟಿ ಇದೆ-ಡಾ.ರಾಜಾರಾಮ್;
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ.ಮಾತನಾಡಿ, ಕಾಡುಮಯವಾಗಿದ್ದ ಬಿದಿರಾಡಿಗೆ ವಸತಿ ಶಾಲೆ ಬಂದಿರುವುದರಿಂದ ಮುಂದೆ ಮಿನಿ ಪಟ್ಟಣದ ರೀತಿಯಲ್ಲಿ ಈ ಪ್ರದೇಶ ಅಭಿವೃದ್ಧಿಯಾಗಲಿದೆ. ಶಾಸಕ ಅಶೋಕ್‌ಕುಮಾರ್ ರೈ ಅವರಲ್ಲಿ ಇಚ್ಛಾಶಕ್ತಿ, ದೂರದೃಷ್ಟಿ, ವಿಷನ್ ಇದೆ. ಆದ್ದರಿಂದ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದಿದೆ. ಮುಂದಿನ ಎರಡು ವರ್ಷ ಇನ್ನಷ್ಟೂ ಅಭಿವೃದ್ಧಿ ಕೆಲಸ ನಡೆಯಲಿದೆ. ಡಾ| ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಆದಷ್ಟೂ ಶೀಘ್ರ ಪೂರ್ಣಗೊಳ್ಳಲಿ ಎಂದರು.

ವಲಯಾರಣ್ಯಾಧಿಕಾರಿ ಕಿರಣ್, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೌಸಿಫ್, ವಲಯಾಧ್ಯಕ್ಷ ವಿನೋದ್‌ಕುಮಾರ್ ಬೆದ್ರೋಡಿ, ಬಜತ್ತೂರು ಗ್ರಾ.ಪಂ.ಪಿಡಿಒ ಚಿತ್ರಾವತಿ, ಗ್ರಾಮ ಆಡಳಿತಾಧಿಕಾರಿ ನರಿಯಪ್ಪ ಮಠದ, ಗುತ್ತಿಗೆದಾರ, ಕಾರ್ಕಳ ಎಸ್‌ಕೆಎಸ್ ಇನ್ಫ್ರಾ ಪ್ರಾಜೆಕ್ಟ್ ಕಂಪನಿಯ ಸುಜಯ್‌ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.


ಡಾ| ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಉಪ್ಪಿನಂಗಡಿ ಇಲ್ಲಿನ ಪ್ರಾಂಶುಪಾಲ ಸತೀಶ್ ಸ್ವಾಗತಿಸಿ, ನಿರೂಪಿಸಿದರು. ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಮುರಳೀಧರ, ವಸತಿ ಶಾಲೆ ಶಿಕ್ಷಕರಾದ ಕೃಷ್ಣಕುಮಾರ್, ವಸಂತ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಜಯಪ್ರಕಾಶ್ ಬದಿನಾರು, ಶಿವಪ್ರಸಾದ್ ಮಠಂತಬೆಟ್ಟು, ಫಾರೂಕ್ ಪೆರ್ನೆ, ಬಜತ್ತೂರು ಗ್ರಾ.ಪಂ.ಮಾಜಿ ಸದಸ್ಯರಾದ ಸಂತೋಷ್‌ಕುಮಾರ್ ಪಂರ್ದಾಜೆ, ಮಾಧವ ಪೂಜಾರಿ ಒರುಂಬೋಡಿ, ಪ್ರೆಸಿಲ್ಲಾ ಡಿ.ಸೋಜ, ಯಶೋಧಾ, ಸ್ಥಳೀಯ ಪ್ರಮುಖರಾದ ಶೇಖರ ಪೂಜಾರಿ ಶಿಬಾರ್ಲ, ಸಂತೋಷ್‌ಕುಮಾರ್ ಜೈನ್ ಬಾರಿಕೆ, ಲಕ್ಷ್ಮೀನಾರಾಯಣ ಭಟ್ ಕಾಂಚನ, ಕೃಷ್ಣಪ್ರಸಾದ್ ಅಂಬಟೆಮಾರ್, ರವಿಕೃಷ್ಣ ಅಂಬಟೆಮಾರ್, ಗೋಪಾಲ ಬಾರಿಕೆ, ಶ್ರೀಧರ ಕಾಂಚನ, ಪ್ರವೀಣ್ ಪಿಂಟೋ, ಜಯಪ್ರಕಾಶ್ ಮಣಿಮೇರಿ, ಉಮೇಶ್ ಗೌಡ ಬಜತ್ತೂರು, ಸುರೇಶ್ ಬಿದಿರಾಡಿ, ಮೋನಪ್ಪ ಪೂಜಾರಿ ಡೆಂಬಲೆ, ಪೊಡಿಯಾ ಬಿದಿರಾಡಿ, ತಿಮ್ಮಪ್ಪ ಬಿದಿರಾಡಿ, ದಿವಾಕರ ಬಿದಿರಾಡಿ, ಪೆರ್ನು ಬಿದಿರಾಡಿ, ಮಹೇಶ್ ಖಂಡಿಗ, ದಿನೇಶ್ ಮೇಲೂರು, ಉಮೇಶ್ ನಾಯಕ್ ಬಿದಿರಾಡಿ, ಸುಶೀಲ ಬಿದಿರಾಡಿ, ಸುಂದರಿ ಬಿದಿರಾಡಿ ಮತ್ತಿತರರು ಉಪಸ್ಥಿತರಿದ್ದರು.

ಅಭಿವೃದ್ಧಿ ಪರ ರಾಜಕೀಯ:
ಕಳೆದ ಚುನಾವಣೆಯಲ್ಲಿ ಬಜತ್ತೂರಿನಲ್ಲಿ ನನಗೆ ಅತ್ಯಂತ ಕಡಿಮೆ ಮತ ಸಿಕ್ಕಿದೆ. ಆದರೂ ಬಜತ್ತೂರು ಗ್ರಾಮಕ್ಕೆ ಅತೀ ಹೆಚ್ಚು ಅಕ್ರಮ-ಸಕ್ರಮ, 94ಸಿ ಮಂಜೂರಾತಿ ಮಾಡಿ ಕೊಟ್ಟಿದ್ದೇನೆ. ಕೆಪಿಎಸ್ ಮಂಜೂರು ಆಗಿದೆ. ಇದೀಗ ವಸತಿ ಶಾಲೆಯೂ ಬಂದಿದೆ. ಪಕ್ಕದ ಕೊಯಿಲ ಪಶುವೈದ್ಯಕೀಯ ಮಹಾವಿದ್ಯಾಲಯ ಕಾಲೇಜು ಮುಂದಿನ ವರ್ಷದಿಂದ ಆರಂಭವಾಗಲಿದೆ. ನಾನು ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಈ ಹಿಂದೆ ಪಕ್ಕದ ಊರಿನವರೇ ಶಾಸಕರಾಗಿದ್ದರೂ ಯಾರಿಗೂ ಅಕ್ರಮ ಸಕ್ರಮ ಮಾಡಿಕೊಟ್ಟಿಲ್ಲ. ನಾನು ಶಾಸಕನಾದ ಬಳಿಕ ಬಿಜೆಪಿ, ಕಾಂಗ್ರೆಸ್‌ನವರು ಎಂದು ಕೇಳದೆ ಅಕ್ರಮ-ಸಕ್ರಮ, 94ಸಿ, 94ಸಿಸಿ ಮಾಡಿಕೊಟ್ಟಿದ್ದೇನೆ. ಜನರಲ್ಲಿ ಮತ ಹಾಕುವಂತೆ ಕೇಳಿದ್ದೇನೆಯೇ ಹೊರತು ಬೇರೆ ಏನೂ ಕೇಳಿಲ್ಲ. ದುಡ್ಡಿಗಾಗಿ ಕೈಚಾಚಿಲ್ಲ ಎಂದು ಅಶೋಕ್ ಕುಮಾರ್ ರೈ ಹೇಳಿದರು. ದ.ಕ.ಜಿಲ್ಲೆಯಲ್ಲಿ ಧರ್ಮಾಧರಿತ ರಾಜಕೀಯ ನಡೆಯುತ್ತಿದೆ. ಇದಕ್ಕೆ ಜನ ಆಸ್ಪದ ಕೊಡಬಾರದು. ರಾಜಕೀಯ ಅಭಿವೃದ್ಧಿಯ ಪರವಾಗಿರಬೇಕು. ಅಭಿವೃದ್ಧಿ ನೋಡಿ ಮತ ಹಾಕಿ ಎಂದು ಅಶೋಕ್‌ಕುಮಾರ್ ರೈ ಹೇಳಿದರು.

LEAVE A REPLY

Please enter your comment!
Please enter your name here