







ರಸ್ತೆ ಅಭಿವೃದ್ಧಿ ಮಾಡಬೇಕೆಂಬ ಕನಸಿದೆಯಾದರೂ ನಿಮ್ಮ ವಿರೋಧದ ನಡುವೆ ಮಾಡಬೇಕೆಂಬ ಹಠವಿಲ್ಲ: ಅಶೋಕ್ ಕುಮಾರ್ ರೈ


ವಿಟ್ಲ : ಕಬಕ- ವಿಟ್ಲ ರಸ್ತೆಯನ್ನು ಫೋರ್ ಲೈನ್ ಮಾಡುವ ನಿಟ್ಟಿನಲ್ಲಿ ಈಗಾಗಲೇ 30 ಕೋಟಿ ರೂ. ಮಂಜೂರಾಗಿದ್ದು, ಇನ್ನೂ 10 ಕೋಟಿ ರೂ. ಮಂಜೂರಾಗಲಿದೆ. ಎರಡು ಸೇತುವೆ ಸೇರಿ ಸುಮಾರು ಏಳುವರೆ ಕಿ.ಮೀ. ರಸ್ತೆ ಅಭಿವೃದ್ಧಿಗೊಳ್ಳಲಿದೆ. ಅದು ವಿಟ್ಲ ವರೆಗೆ ಬರುವ ನಿಟ್ಟಿನಲ್ಲಿ ನಗರ ಬೆಳೆಯಲು ರಸ್ತೆ ಅವಶ್ಯಕತೆ ಇದೆ. ರಸ್ತೆ ಅಭಿವೃದ್ಧಿಯಾದರೆ ಬ್ಯುಸಿನೆಸ್ ಬೆಳೆಯುತ್ತದೆ. ನನಗೆ ವಿಟ್ಲದ ರಸ್ತೆಯನ್ನು ಅಭಿವೃದ್ಧಿ ಮಾಡಬೇಕೆಂಬ ಕನಸಿದೆ. ಆದರೆ ನಿಮ್ಮವಿರೋಧದ ನಡುವೆ ಮಾಡಬೇಕೆಂಬ ಹಠವಿಲ್ಲ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈರವರು ಹೇಳಿದರು.



ವಿಟ್ಲ ಪೇಟೆಯ ನಾಲ್ಕು ರಸ್ತೆಗಳ ಅಗಲೀಕರಣ ವಿಚಾರವಾಗಿ ಸಾಧಕ ಬಾಧಕಗಳನ್ನು ಚರ್ಚಿಸಲು ಜು.18ರಂದು ವಿಠಲ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಕರೆದ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲಾ ಕಡೆ ನಗರಗಳು ಬೆಳೆಯುತ್ತಿದ್ದಂತೆ ರಸ್ತೆಗಳು ಅಭಿವೃದ್ಧಿ ಹೊಂದುತ್ತಾ ಹೋಗುತ್ತಿದೆ. ಈಗ ನಮಗೆ ಸಮಸ್ಯೆ ಇರುವಂಥದ್ದು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ. ಆದ್ದರಿಂದ ಇಲ್ಲಿನ ವರ್ತಕರಲ್ಲಿ, ಅಂಗಡಿ ಮಾಲಕರಲ್ಲಿ ಮಾತುಕತೆ ನಡೆಸಿ ಅದರ ಸಾಧಕ ಬಾಧಕ ತಿಳಿಯುವ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ. ಇಲ್ಲಿ ಕಾಂಗ್ರೆಸ್ – ಬಿಜೆಪಿ ಇಲ್ಲ. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡುವವ ನಾನಲ್ಲ. ನನಗೂ ಬೇಸರ ಇದೆ. ನೀವುಗಳು ಇಲ್ಲಿ ಉದ್ಯಮವನ್ನು ಮಾಡುತ್ತಾ ಬದುಕು ಕಟ್ಟಿಕೊಂಡವರು. ನಾನು ಮಾತನಾಡುವಾಗ ಬೇಸರವಾಗ ಬಹುದು ಎಂದ ಶಾಸಕರಲ್ಲಿ ಎಷ್ಟು ವರ್ಷಾ ಅಂತ ಹೀಗೆ ಮುಂದುವರೆಯುವುದು. ಇಂದಲ್ಲ ನಾಳೆ ಹಳೇ ಕಟ್ಟಡಗಳು ಬೀಳುತ್ತದೆ. ಆಗ ನೀವುಗಳು ರಸ್ತೆ ಮಾರ್ಜಿನ್ ಬಿಟ್ಟೇ ಕಟ್ಟಡ ಕಟ್ಟಬೇಕಾಗುತ್ತದೆ. ರಸ್ತೆಗೆ ಜಾಗ ಬಿಟ್ಟು ಕೊಟ್ಟವರಿಗೆ ಸಬ್ ರಿಜಿಸ್ಟರ್ ಕಚೇರಿಯಲ್ಲಿನ ರೇಟಿನ ಮೂರು ಪಾಲು ನೀಡಲಾಗುವುದು. ಸರಿಯಾದ ರೀತಿಯಲ್ಲಿ ಸರ್ವೆ ಮಾಡಿ ಅವರಿಗೆ ಸಿಗಬೇಕಾದ ಹಣವನ್ನು ನೀಡಿ ಬಳಿಕ ಅಗಲೀಕರಣ ಮಾಡಲಾಗುವುದು. ನಿಮಗೆ ಹೊಂದಾಣಿಕೆ ಆಗುವ ರೀತಿಯಲ್ಲಿ ಮುಂದುವರೆಯೋಣ. ಅಭಿವೃದ್ಧಿ ಮಾಡುವುದು ಜನಪ್ರತಿನಿಧಿಯಾದ ನನ್ನ ಧರ್ಮ ಎಂದರು. ಅನುಮತಿ ಇಲ್ಲದೆ ಸರಕಾರಿ ಜಾಗದಲ್ಲಿ ಕಟ್ಟಿದ ಕಟ್ಟಡಗಳಿಗೆ ಯಾವುದೇ ಪರಿಹಾರ ಸಿಗುವುದಿಲ್ಲ. ರಸ್ತೆ ಅಗಲೀಕರಣ ಮಾಡಿ ಎಂದು ನನಗೆ ಸುಮಾರು 200ಕರೆ ಬಂದಿದೆ. ಅಭಿವೃದ್ಧಿಯ ವಿಚಾರದಲ್ಲಿ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ನಿಮ್ಮೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುತ್ತೇನೆ. ಒಂದು ಕಮರ್ಷಿಯಲ್ ಕಾಂಪ್ಲೆಕ್ಸ್ ಇದ್ದರೆ ಅದರಲ್ಲಿ ಓನರ್ ಶಿಪ್ ನಲ್ಲಿ ಅಂಗಡಿ ಪಡೆದಿರುತ್ತಾರೆ ಆಗ ರಸ್ತೆ ಅಗಲೀಕರಣಕ್ಕೆ ಬೇಕಾಗುವ ಒಟ್ಟು ಜಾಗದ ವ್ಯಾಲ್ಯೂ ಮೇಲೆ ಎಲ್ಲರಿಗೂ ಸಮಾನವಾಗಿ ಪರಿಹಾರ ಸಿಗುತ್ತದೆ. ಎಲ್ಲರೂ ಜೊತೆಯಾಗಿ ಸೇರಿ ಅಭಿವೃದ್ಧಿ ಮಾಡುವ ಕೆಲಸ ಮಾಡೋಣ. ಉತ್ತಮ ಕೆಲಸ ಆಗುವಾಗ ಬೇಸರವಾಗುವುದು ಸಹಜ ಈಗಾಗಲೇ ರಸ್ತೆ ಅಗಲೀಕರಣವಾಗುವಾಗ 22 ಮೀ. ನಷ್ಟು ಜಾಗ ಬಿಟ್ಟುಕೊಡಬೇಕಾಗುತ್ತದೆ. ಸಾಧಕ ಬಾಧಕಗಳನ್ನು ನೋಡಿಕೊಂಡು ಪೇಟೆಯಲ್ಲಿ ಅದನ್ನು 15 ಮೀ.ಗೆ ಇಳಿಸಲು ಸಾಧ್ಯವೇ ಎಂದು ಪರಿಶೀಲನೆ ನಡೆಸಲಾಗುವುದು ಎಂದರು.
ಬೈಪಾಸ್ ರಸ್ತೆ ನಿರ್ಮಿಸಿದರೆ ಸಮಸ್ಯೆ ಪರಿಹಾರ-ಬಾಬು ಕೊಪ್ಪಳ:
ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಬಾಬು ಕೊಪ್ಪಳ ರವರು ಮಾತನಾಡಿ ರಸ್ತೆ ಅಗಲೀಕರಣಕ್ಕೆ ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಮತ ಇರುವುದಿಲ್ಲ. ಕೆಲವರುಷಗಳ ಹಿಂದೆ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳ ಮಾತಿಗೆ ಮಣಿದು ಯಾವುದೇ ಫಲಾಪೇಕ್ಷೇ ಪಡೆಯದೆ ವಿಟ್ಲದ ರಸ್ತೆ ಅಗಲೀಕರಣಕ್ಕೆ ಬೇಕಾದ ಜಾಗವನ್ನು ಬಿಟ್ಟುಕೊಟ್ಟಿರುತ್ತೇವೆ. ಇದೀಗ ಮತ್ತೆ ರಸ್ತೆ ಅಗಲೀಕರಣವಾದರೆ ನಮಗೆ ನುಂಗಲಾರದ ತುತ್ತಾಗಿದೆ. ನಮಗೆ ಬಹಳಷ್ಟು ಸಮಸ್ಯೆಯಾಗುತ್ತದೆ. ವ್ಯಾಪಾರ ಚಟುವಟಿಕೆಗಳು ತಾಳತಪ್ಪಲಿದೆ. ಬೈಪಾಸ್ ರಸ್ತೆ ನಿರ್ಮಿಸಿದಲ್ಲಿ ಸಮಸ್ಯೆ ಪರಿಹಾರವಾಗ್ತದೆ ಎಂದರು.
ಈ ವೇಳೆ ಶಾಸಕರು ಮಾತನಾಡಿ ಯಾವುದೇ ಜಾಗವನ್ನು ನಾವು ಈ ಬಾರಿ ಉಚಿತವಾಗಿ ಪಡೆಯುವುದಿಲ್ಲ. ಅವರ ಜಾಗದ, ಕಟ್ಟಡ ಸೇರಿದಂತೆ ಎಲ್ಲಾ ವಸ್ತುಗಳಿಗೂ ನ್ಯಾಯಯುತ ಬೆಲೆ ನೀಡಲಿದ್ದೇವೆ. ವರ್ತಕರಿಗೆ, ಕಟ್ಟಡ ಮಾಲಕರಿಗೆ ಸಮಸ್ಯೆಯಾಗದ ರೀತಿಯಲ್ಲಿ ರಸ್ತೆ ಅಗಲೀಕರಣ ಮಾಡಲಾಗುವುದು. ಬೈಪಾಸ್ ರಸ್ತೆ ನಿರ್ಮಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ ಎಂದರು.
ಮುಂದೆ ಅಗಲೀಕರಣವಾದರೆ ವಿಟ್ಲ ಪೇಟೆಯೇ ಇರಲಿಕ್ಕಿಲ್ಲ-ಸುರೇಶ್ ಬನಾರಿ:
ಜಾಗದ ಮಾಲಕರಾದ ಸುರೇಶ್ ಬನಾರಿ ರವರು ಮಾತನಾಡಿ ಮುಂದೆ ರಸ್ತೆ ಎಷ್ಟು ಅಗಲ ಬೇಕು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕಿದೆ. ಈಗಿನ ಲೆಕ್ಕಾಚಾರದಲ್ಲಿ ರಸ್ತೆ ಅಗಲೀಕರಣವಾದರೆ ವಿಟ್ಲ ಪೇಟೆಯೇ ಇರಲಿಕ್ಕಿಲ್ಲ. ಜಾಗದ ಮಾಲಕರಿಗೆ ಸಹಕಾರವಾಗುವ ಕಾನೂನನ್ನು ತರುವುದು ಒಳಿತು. ರಸ್ತೆ ಆಗುವವರೆಗೆ ಎಲ್ಲರೂ ಹೇಳುತ್ತಾರೆ. ಆದರೆ ರಸ್ತೆ ಆದ ಮೇಲೆ ನಮ್ಮ ಮಾತನ್ನು ಯಾರೂ ಕೇಳುವವರಿಲ್ಲ ಎಂದರು.
ಈ ವೇಳೆ ಶಾಸಕರು ಮಾತನಾಡಿ ಈಗ ಇರುವ ಕಾನೂನನ್ನು ಮಾತ್ರ ನಾವು ಅಪ್ಲೈ ಮಾಡಬಹುದು ಬೈಲಾವನ್ನು ತಿದ್ದುಪಡಿ ಮಾಡಿ ಅಭಿವೃದ್ಧಿ ಮಾಡಲಾಗುವುದಿಲ್ಲ. ಒತ್ತುವರಿ ಮಾಡುವ ನಿಮ್ಮ ಜಾಗಕ್ಕೆ ನಾವು ಪರಿಹಾರ ನೀಡುತ್ತೇವೆ. ಅದರ ಹಿಂದೆ ಬಿಡುವ 6 ಮೀಟರ್ ಜಾಗ ಅದು ನಿಮ್ಮ ಕಟ್ಟಡಕ್ಕೆ ಪಾರ್ಕಿಂಗ್ ಗಾಗಿ ಬಿಡುವುದಾಗಿದೆ. ನಾವು ನಿಮ್ಮ ವಿರೋಧವಾಗಿ ಹೋಗುವ ಪ್ರಶ್ನೆಯೇ ಇಲ್ಲ. ರಸ್ತೆ ಅಗಲೀಕರಣ ಎಂದರೆ ಸುಲಭದ ವಿಷಯವಲ್ಲ ಮಿನಿಮಮ್ 25 ಕೋಟಿ ರೂಪಾಯಿಗಿಂತ ಮೇಲೆ ಜಾಗಕ್ಕೆ ಕೊಡಬೇಕಾಗಿ ಬರಬಹುದು ಎಂದರು.

ಕನ್ವರ್ಷನ್ ಜಾಗ-ಎಷ್ಟು ಪರಿಹಾರ-ಅರುಣ್ ವಿಟ್ಲ:
ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅರುಣ್ ವಿಟ್ಲರವರು ಮಾತನಾಡಿ ಇಲ್ಲಿರುವ ಅಂಗಡಿ ಕಟ್ಟಡಗಳ ಪೈಕಿ ಹೆಚ್ಚಿನವು ಬಹಳ ಹಳೆಯದ್ದು, ಕನ್ವರ್ಷನ್ ಆಗದ ಜಾಗ ಇರುವುದು ಅವರಿಗೆ ಎಷ್ಟು ಪರಿಹಾರ ನೀಡುತ್ತೀರಿ ಎಂದರು.
ಈ ವೇಳೆ ಮಾತನಾಡಿದ ಶಾಸಕರು, ಕನ್ವರ್ಶನ್ ಆಗದ ಜಾಗದಲ್ಲಿ ಕಟ್ಟಡ ಕಟ್ಟಿರುವುದು ಇಲ್ಲೀಗಲ್ ಬಿಲ್ಡಿಂಗ್ ಆಗಿದೆ. ನಾವು ನಿಮ್ಮೆಲ್ಲರ ಅಭಿಪ್ರಾಯ ಗಳನ್ನು ಸಂಗ್ರಹಿಸಿ ಆ ಬಳಿಕ ಹಂತಹಂತವಾಗಿ ಸರ್ವೆ ನಡೆಸಲಾಗುವುದು. ಸರಕಾರಿ ಜಾಗದಲ್ಲಿರುವ ಕಟ್ಟಡಗಳಿಗೆ ಯಾವುದೇ ಪರಿಹಾರ ಸಿಗುವುದಿಲ್ಲ. ಲೀಗಲ್ ಆಗಿ ಇರುವ ಜಾಗಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ಎರಡೂ ಬದಿಯ ಜಾಗ ಬಳಸಿ ರಸ್ತೆ ಅಗಲೀಕರಣ ಮಾಡಿ-ಮಾಧವ:
ನಿವೃತ್ತ ಅದ್ಯಾಪಕರಾದ ಮಾಧವ ಕುದ್ರೆತ್ತಾರವರು ಮಾತನಾಡಿ ಅಭಿವೃದ್ದಿಯಲ್ಲಿ ರಾಜಕೀಯ ಮಾಡಬೇಡಿ. ಪರಂಬೋಕನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ರಸ್ತೆ ಅಗಲೀಕರಣ ಉತ್ತಮ ಬೆಳವಣಿಗೆ. ಆದರೆ ಎರಡೂ ಕಡೆಯ ಜಾಗವನ್ನು ಬಳಸಿ ರಸ್ತೆ ಅಗಲೀಕರಣ ಮಾಡಿ ಎಂದರು.
ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಕ್ಲಿಪರ್ಡ್ ವೇಗಸ್, ಜಾಗದ ಮಾಲಕರಾದ ವಿ.ಎ. ರಶೀದ್, ಪ್ರಮುಖರಾದ ಇಕ್ಬಾಲ್ ಹೋನೆಸ್ಟ್, ನೀಲಪ್ಪ ಗೌಡ, ಸಂಜೀವ ಪೂಜಾರಿ ಮೊದಲಾದವರು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟು, ಉಪಾಧ್ಯಕ್ಷರಾದ ಸಂಗೀತ ಪಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವಿನಾಶ್, ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಽಕಾರಿ ಕರುಣಾಕರ ವಿ. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾರ್ವಜನಿಕರ ಹಿತಾಸಕ್ತಿಯ ವಿರುದ್ಧ ಹೋಗುವ ಪ್ರಶ್ನೆ ಇಲ್ಲ
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪೇಟೆಯ ನಾಲ್ಕು ರಸ್ತೆಗಳನ್ನು ಅಗಲೀಕರಣ ಗೊಳಿಸುವ ನಿಟ್ಟಿನಲ್ಲಿ ಆ ಭಾಗದ ವರ್ತಕರು, ಕಟ್ಟಡ ಮಾಲಿಕರು ಹಾಗೂ ಸಾರ್ವಜನಿಕರ ಸಭೆಯನ್ನು ನಾವಿಂದು ಕರೆದಿದ್ದೆವು. ಹಲವಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ರಸ್ತೆ ಅಗಲೀಕರಣದ ಬಗ್ಗೆ ಚರ್ಚೆ ನಡೆಸಿದೆವು. ನಮ್ಮ ವಿಚಾರ ಏನಿದೆ ಅಂದ್ರೆ ಸರಕಾರ ಈಗಾಗಲೇ ನಮಗೆ ಸುತ್ತೋಲೆಗಳನ್ನು ಹೊರಡಿಸಿದೆ. ಪಿಡಬ್ಲ್ಯೂಡಿ ರಸ್ತೆಯ ಪಕ್ಕದಲ್ಲಿರುವ ಜಾಗಗಳನ್ನು ಸರ್ವೆ ಮಾಡಬೇಕು. ಸರಿಯಾದ ವರದಿಯನ್ನು ಸರಕಾರಕ್ಕೆ ಮಂಡಿಸಬೇಕು. ಯಾರೆಲ್ಲಾ ಸರಕಾರಿ ಜಾಗಗಳನ್ನು ಒತ್ತುವರಿ ಮಾಡಿದ್ದಾರೆ ಅದನ್ನು ತೆರವುಗೊಳಿಸುವ ಕೆಲಸವನ್ನು ಮಾಡುವುದರ ಜೊತೆಗೆ ರಸ್ತೆ ಅಗಲೀಕರಣಗೊಳಿಸಬೇಕು ಎನ್ನುವ ಸುತ್ತೋಲೆಗಳನ್ನು ಸರಕಾರ ಈಗಾಗಲೇ ನೀಡಿದೆ.
ಸಾರ್ವಜನಿಕರಿಂದಲೂ ಇಲ್ಲಿ ಬೇಡಿಕೆ ಇರುವ ಕಾರಣ ಎಲ್ಲರನ್ನೂ ಕರೆದು ಚರ್ಚೆ ಮಾಡುವಂತ ಕೆಲಸವನ್ನು ಮಾಡಿದ್ದೇನೆ. ಕೆಲವರು ಈಗ ಇರುವಂತೆಯೇ ರಸ್ತೆ ಸಾಕು ಅನ್ನುತ್ತಿದ್ದಾರೆ. ಒಂದಷ್ಟು ಮಂದಿ ಅಭಿವೃದ್ಧಿ ಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಹಿತಾಸಕ್ತಿಯ ವಿರುದ್ಧ ಹೋಗುವ ಪ್ರಶ್ನೆ ಇಲ್ಲ. ಅವರ ಅಭಿಪ್ರಾಯಗಳನ್ನು ತೆಗದುಕೊಂಡೇ ಮುಂದೆ ಹೋಗುವ ಕೆಲಸಗಳನ್ನು ಮಾಡಲಾಗುವುದು.
ಅಶೋಕ್ ಕುಮಾರ್ ರೈ, ಶಾಸಕರು , ಪುತ್ತೂರು ವಿಧಾನಸಭಾ ಕ್ಷೇತ್ರ










