







ಸಮುದಾಯದ ಒಳಿತಿಗೆ, ಅಭಿವೃದ್ಧಿಗೆ ಸರಕಾರದ ಯೋಜನೆಯನ್ನು ಬಳಸಿ-ವಂ|ಡಾ|ಜೆ.ಬಿ ಸಲ್ದಾನ್ಹಾ


ಪುತ್ತೂರು:ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯಕ್ಕೆ ಸರಕಾರದಿಂದ ಸಿಗುವ ಕಾರ್ಯ ಯೋಜನೆಗಳು ಸಮುದಾಯಕ್ಕೆ ತಲುಪುವಂತಾಗಬೇಕು. ಜನರ ಬೆಳವಣಿಗೆಗೆ ಇರುವಂತಹ ಸರಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು. ಕ್ರಿಶ್ಚಿಯನ್ ಸಮುದಾಯದ ಒಳಿತಿಗೆ, ಅಭಿವೃದ್ಧಿಗೆ ಸರಕಾರದ ಯೋಜನೆಯನ್ನು ತಲುಪಿಸೋಣ ಎಂದು ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ನಿರ್ದೇಶಕರೂ ಆಗಿರುವ ವಂ|ಡಾ|ಜೋನ್ ಬ್ಯಾಪ್ಟಿಸ್ಟ್ ಸಲ್ದಾನ್ಹಾರವರು ಹೇಳಿದರು.



ಜು.೧೮ ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಮಾಯಿದೆ ದೇವುಸ್ ಚರ್ಚ್ನ ಸಾಮಾಜಿಕ ಕಾಳಜಿ ಮತ್ತು ಅಭಿವೃದ್ಧಿ ಆಯೋಗ ಹಾಗೂ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಇದರ ಜಂಟಿ ಸಹಯೋಗದಲ್ಲಿ ನಡೆದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ ಸೌಲಭ್ಯಗಳ ಮಾಹಿತಿ ಕಾರ್ಯಾಗಾರದಲ್ಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮುಸ್ಲಿಂ ಸಮುದಾಯ ಆಸಕ್ತಿ ತೋರಿಸಿ ಅವನ್ನು ಪಡೆದುಕೊಳ್ಳುತ್ತಿದ್ದಾರೆ. ನಮ್ಮ ಕ್ರಿಶ್ಚಿಯನ್ ಸಮುದಾಯ ಸರಕಾರದಿಂದ ಸಿಗುವ ಸವಲತ್ತುಗಳಿಗೆ ಅದ್ಯಾಕೆ ಸ್ಪಂದನೆ ನೀಡುತ್ತಿಲ್ಲ ಎಂಬ ಕೊರಗು ನಮಗಿದೆ. ಸರಕಾರದಿಂದ ಸಿಗುವ ಸವಲತ್ತುಗಳು ಇಂದು, ನಾಳೆಯೇ ನಮಗೆ ಸಿಗಬೇಕು ಎನ್ನುವ ಧೋರಣೆ ನಮ್ಮದಾಗಿದ್ದು ಕಾಯುವ ಅಭ್ಯಾಸ ನಮಗಿಲ್ಲವಾಗಿರುವುದು ವಿಷಾಧನೀಯ ಎಂದರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿನ ಯೋಜನೆಗಳ ಮಾಹಿತಿ-ಮುಹಮ್ಮದ್ ರಫೀಕ್:
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಕೇಂದ್ರದ ಮುಖ್ಯಸ್ಥ ಮುಹಮ್ಮದ್ ರಫೀಕ್ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿಗಳಿಗೆ ಕೌಶಲ್ಯ ಅಭಿವೃದ್ಧಿ ಯೋಜನೆ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ಶೇ.50ರ ಮೇಲೆ ಅಂಕ ಪಡೆದವರಿಗೆ ಹಾಗೂ ರೂ.1 ಲಕ್ಷದೊಳಗೆ ಆದಾಯ ಇರುವವರಿಗೆ ವಿದ್ಯಾರ್ಥಿ ವೇತನ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರೊಫೆಶನಲ್ ಕೋರ್ಸ್ ಮಾಡುವವವರಿಗೆ ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೌಲಭ್ಯ ಸಿಗದಿರುವ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ, ವಿದೇಶದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಓವರ್ ಸೀಸ್ ಸ್ಕಾಲರ್ಶಿಪ್, ಬಿ.ಎಡ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ನರ್ಸಿಂಗ್/ಜಿ.ಎನ್.ಎಂ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಪಿ.ಎಚ್.ಡಿ ವ್ಯಾಸಂಗ ಮಾಡುವವರಿಗೆ ಫೆಲೋಶಿಪ್, ಪದವಿ ಹಾಗೂ ಸ್ನಾತಕೋತ್ತರ ಪದವಿ ಮಾಡುವವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿನ ಸೌಲಭ್ಯಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿ, ಚರ್ಚ್ ಹಾಗೂ ಸಮುದಾಯಭವನದ ಅಭಿವೃದ್ಧಿ ಬಗ್ಗೆ ಸಿಗುವ ಸವಲತ್ತುಗಳ ಮಾಹಿತಿ ನೀಡಿದರು.

ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ಸೌಲಭ್ಯಗಳ ಮಾಹಿತಿ-ಹೆರಾಲ್ಡ್ ಡಿ’ಸೋಜ:
ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ಸೌಲಭ್ಯಗಳ ಕುರಿತು ಮಾತನಾಡಿದ ಸಿ.ಎಲ್.ಸಿ ಮಾಜಿ ಕಾರ್ಯದರ್ಶಿ ಹೆರಾಲ್ಡ್ ಡಿ’ಸೋಜರವರು, ಒಂದರಿಂದ 5 ಎಕರೆ ಕೃಷಿ ಭೂಮಿ ಇರುವವರಿಗೆ ಸಿಗುವ ಸವಲತ್ತುಗಳ ಗಂಗಾ ಕಲ್ಯಾಣ ಯೋಜನೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೋಸ್ಕರ ಅರಿವು ಯೋಜನೆ, ಸ್ವಂತ ಉದ್ಯಮ ನಡೆಸುವವರಿಗೆ ವ್ಯಾಪಾರ/ಉದ್ದಿಮೆ ನೇರ ಸಾಲ ಯೋಜನೆ, ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ, ಸ್ವಾವಲಂಭಿಯಾಗಿ ದುಡಿಯುವಲ್ಲಿ ಹಳದಿ ಬೋರ್ಡ್ ಟ್ಯಾಕ್ಸಿ, ರಿಕ್ಷಾ ಓಡಿಸುವವರಿಗೆ ಸ್ವಾವಲಂಭಿ ಸಾರಥಿ ಯೋಜನೆ, ವಯಸ್ಸು 18ರಿಂದ 55 ವರ್ಷದೊಳಗಿನವರಿಗೆ ವೃತ್ತಿ ಪ್ರೋತ್ಸಾಹ ಯೋಜನೆ, ಕುಲಕಸುಬನ್ನೇ ನೆಚ್ಚಿಕೊಂಡ ಶ್ರಮಜೀವಿಗಳಿಗೆ ಶ್ರಮಶಕ್ತಿ ಯೋಜನೆ, ವಿಧವೆಯರಿಗೆ ಶ್ರಮಶಕ್ತಿ ಮಹಿಳಾ ಯೋಜನೆ, ಕ್ರಿಶ್ಚಿಯನ್ ಸಮುದಾಯದ ಸ್ವ-ಸಹಾಯ ಗುಂಪುಗಳಿಗೆ ಸಹಾಯಧನ ಮುಂತಾದ ಯೋಜನೆಗಳ ಬಗ್ಗೆ ಹೇಳಿದರು.
ಕು.ಅನುಷಾ ಪಿಂಟೊ ಮತ್ತು ಬಳಗ ಪ್ರಾರ್ಥಿಸಿದರು. ಮಾಯಿದೆ ದೇವುಸ್ ಚರ್ಚ್ 21 ಆಯೋಗಗಳ ಸಂಯೋಜಕ ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್ ಸ್ವಾಗತಿಸಿ, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಅಧ್ಯಕ್ಷ ವಿಲಿಯಂ ನೊರೋನ್ಹಾ ವಂದಿಸಿದರು. ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಲಸ್ರಾದೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿ.ಎಲ್.ಸಿ ಕಾರ್ಯದರ್ಶಿ ರುಡೋಲ್ಫ್ ಪಿಂಟೊ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ಸಿ.ಎಲ್.ಸಿ ಸದಸ್ಯ ಓಸ್ವಾಲ್ಡ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.










