







ಪುತ್ತೂರು: ತನ್ನ ಅಧಿನದಲ್ಲಿ 85 ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ, ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ, ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಮುಂದಿನ ಐದು ವರ್ಷಗಳ ಅವಽಗೆ ನೂತನ ಆಡಳಿತ ಮಂಡಳಿಯ ರಚನೆಯಾಗಿದ್ದು ಅಧ್ಯಕ್ಷರಾಗಿ ಕಡಬದ ಬಿಜೆಪಿ ಮುಖಂಡ, ಎಪಿಎಂಸಿಯ ಮಾಜಿ ಅಧ್ಯಕ್ಷರು, ಜಿ.ಪಂ. ಮಾಜಿ ಸದಸ್ಯರು, ಪ್ರಸ್ತುತ ಸಂಘದ ನಿರ್ದೇಶಕರೂ ಆಗಿರುವ ಕೃಷ್ಣಕುಮಾರ್ ಶೆಟ್ಟಿ ಕಡಬ ಹಾಗೂ ಕಾರ್ಯದರ್ಶಿಯಾಗಿ ನ್ಯಾಯವಾದಿಗಳು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕರೂ ಆಗಿರುವ ವಿಜಯ ನಾರಾಯಣ ಕೆ.ಎಂ ಕುಂಬಾಡಿಯವರು ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್‌ನ ನಿರ್ದೇಶಕರು, ನರೇಂದ್ರ ಪದವಿ ಪೂರ್ವ ಕಾಲೇಜಿನ ಮಾಜಿ ಅಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿಯಾಗಿರುವ ರೂಪಲೇಖಾ ಪರ್ಲಡ್ಕ, ಜತೆ ಕಾರ್ಯದರ್ಶಿಯಾಗಿ ದರ್ಬೆ ಲಕ್ಷ್ಮೀ ಇಂಜಿನಿಯರಿಂಗ್ ಇಂಡಸ್ಟ್ರೀಸ್‌ನ ಮ್ಹಾಲಕರು, ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ಸಂಚಾಲಕರಾಗಿರುವ ಭರತ್ ಪೈ, ಖಜಾಂಚಿಯಾಗಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಸಂಚಾಲಕರೂ ಆಗಿರುವ ಕೊಕ್ಕೋ ಗುರು ಸಂಸ್ಥೆಯ ಸಂತೋಷ್ ಬೋನಂತಾಯರವರು ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ನಿವೃತ್ತ ಪ್ರಾಂಶುಪಾಲರು, ಸಂಚಾಲಕರೂ ಆಗಿರುವ ವಸಂತ ಮಾಧವ ಮುಲಾರು ಕಲ್ಲಡ್ಕ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾಗಿರುವ ದಕ್ಷ ಕನ್‌ಸ್ಟ್ರಕ್ಷನ್ಸ್‌ನ ರವೀಂದ್ರ ಪಿ., ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷರು, ಉಪ್ಪಿನಂಗಡಿ ಶ್ರೀಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾಗಿರುವ ಉದ್ಯಮಿ ಕರುಣಾಕರ ಸುವರ್ಣ, ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಆರ್ಯಾಪು, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಕ್ಯಾಂಪಸ್ ಅಧ್ಯಕ್ಷ ರಮೇಶ್ಚಂದ್ರ ಕಾವು ಮುಂಡಕೊಚ್ಚಿ, ವಿವೇಕಾನಂದ ಕಾನೂನು ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿರುವ ಮಂಗಳಾ ಎಂಟರ್‌ಪ್ರೈಸಸ್ ಮ್ಹಾಲಕಿ ಮಹಾಲಕ್ಷ್ಮೀ ಕೆ. ದಾರಂದಕುಕ್ಕುರವರು ಆಯ್ಕೆಯಾಗಿದ್ದಾರೆ.



ಜು.19ರಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಾವರ್ಕರ್ ಸಭಾ ಭವನದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕರವರ ಅಧ್ಯಕ್ಷತೆಯಲ್ಲಿ ನಡೆದ 2025ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ವಸಂತ ಮಾಧವ ಟಿ., ರವೀಂದ್ರ ಪಿ., ಕರುಣಾಕರ ಸುವರ್ಣ, ಡಾ. ಶ್ರೀಪತಿ ಕಲ್ಲೂರಾಯ, ರಮೇಶ್‌ಚಂದ್ರ ಎಂ. ಮತ್ತು ಮಹಾಲಕ್ಷ್ಮೀ ಅವರುಗಳು ಆಡಳಿತ ಮಂಡಳಿಯ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಎಲ್ಲಾ ನಿರ್ದೇಶಕರು ಮರು ಆಯ್ಕೆಗೊಂಡಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ, ರಾಷ್ಟ್ರೀಯತೆ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ಬೆಳೆಸುವುದು ಸಂಘದ ಪ್ರಮುಖ ಧ್ಯೇಯವಾಗಿದೆ. 1915ಲ್ಲಿ ಪುತ್ತೂರು ಎಜುಕೇಷನ್ ಸೊಸೈಟಿ ಎಂಬ ಹೆಸರಿನಲ್ಲಿ ಆರಂಭಗೊಂಡ ಈ ಸಂಸ್ಥೆಯು 2009ರಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಎಂದು ಮರು ನಾಮಕರಣಗೊಂಡಿತ್ತು. ಪ್ರಸ್ತುತ ವಿದ್ಯಾವರ್ಧಕ ಸಂಘದ ಅಧಿನದಲ್ಲಿ 85ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಶಿಶುಮಂದಿರ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ, ತಾಂತ್ರಿಕ, ವೃತ್ತಿಪರ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳವರೆಗೆ ವ್ಯಾಪಕ ಶೈಕ್ಷಣಿಕ ಜಾಲವನ್ನು ಹೊಂದಿದೆ. ಕೇರಳ ರಾಜ್ಯದ ಪೆರ್ಲದಲ್ಲಿ ನಳಂದ ವಿದ್ಯಾಲಯ ಸೇರಿದಂತೆ ದ.ಕ.ಜಿಲ್ಲೆಯಲ್ಲಿ 28ಕ್ಕೂ ಹೆಚ್ಚು ಕ್ಯಾಂಪಸ್‌ಗಳಲ್ಲಿ ಸುಮಾರು 21 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸುಮಾರು 1,4೦೦ಕ್ಕೂ ಹೆಚ್ಚು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃಷ್ಣಕುಮಾರ್ ಶೆಟ್ಟಿ ಪರಿಚಯ:
ಕೃಷ್ಣಕುಮಾರ್ ಶೆಟ್ಟಿ ಕಡಬ ಅವರು ಕುಟ್ರುಪಾಡಿ ಗ್ರಾಮದ ನಂದುಗುರಿ ನಿವಾಸಿಯಾಗಿದ್ದಾರೆ. 1996ರಲ್ಲಿ ಪದವಿ ಶಿಕ್ಷಣ ಮುಗಿಸಿ ಉದ್ಯಮಿಯಾಗಿದ್ದ ಕೃಷ್ಣ ಶೆಟ್ಟಿಯವರು 2003ರಲ್ಲಿ ಹಿಂದೂ ಜಾಗರಣಾ ವೇದಿಕೆಯ ಮೂಲಕ ಸಂಘಟನೆಯ ಕಾರ್ಯದಲ್ಲಿ ಧುಮುಕಿ ಸಂಘಟನಾ ಚತುರರೆನಿಸಿಕೊಂಡರು. ಸ್ಥಳೀಯ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷವಾದ ಸೇವೆಯನ್ನು ಸಲ್ಲಿಸಿದ್ದಾರೆ. 2001ರಲ್ಲಿ ಬಿಜೆಪಿ ವಲಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಕೃಷ್ಣ ಶೆಟ್ಟಿಯವರು 2005-2010ರವರೆಗೆ ಜಿ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದರು. ಬಿಜೆಪಿಯ ಮಂಡಲ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಜಿಲ್ಲಾ ಪ್ರ.ಶಿಕ್ಷಣ ಪ್ರಕೋಷ್ಠದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಒಂದು ಅವಧಿಗೆ ಪುತ್ತೂರು ಎ.ಪಿ.ಎಂ.ಸಿ. ಸದಸ್ಯರಾಗಿಯೂ ಆಯ್ಕೆಯಾಗಿದ್ದರು. 2004ರಲ್ಲಿ ಕಡಬದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ವೆಂಕಟ್ರಮಣ ರಾವ್ ಮಂಕುಡೆ ಅವರ ನೇತೃತ್ವದಲ್ಲಿ ಶಿಶು ಮಂದಿರವನ್ನು ಪ್ರಾರಂಭಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. 10 ವರ್ಷ ಕಡಬ ಸರಸ್ವತೀ ವಿದ್ಯಾಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಇವರು ವಿವೇಕಾನಂದ ವಿದ್ಯಾವರ್ಧಕ ಸಂಘದಲ್ಲಿ ಜತೆ ಕಾರ್ಯದರ್ಶಿಯಾಗಿ 5 ವರ್ಷ ಸೇವೆ ಸಲ್ಲಿಸಿ, ಕಳೆದ 10 ವರ್ಷದಿಂದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು ಇದೀಗ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೃಷಿಕನಾಗಿ, ಉದ್ಯಮಿಯಾಗಿ ಇವರು ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ವಿಶೇಷ ಅನುಭವ ಮತ್ತು ಸಂಘಟನಾ ಚತುರತೆಯಿಂದ ತನ್ನದೇ ಆದ ಛಾಪನ್ನು ಮೂಡಿಸಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
2016ರಿಂದ ಪ್ರಭಾಕರ ಭಟ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಪ್ರತಿ 5 ವರ್ಷಕ್ಕೊಮ್ಮೆ ಸಂಘದ ಅಡಳಿತ ಮಂಡಳಿಯ ಪುನರ್ ರಚನೆಯಾಗುತ್ತಿದೆ. 2016ರಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಕಳೆದ ಹತ್ತು ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಮಾಜಿ ಶಾಸಕ ದಿ. ರಾಮ ಭಟ್, ಕ್ಯಾಂಪ್ಕೋದ ಮಾಜಿ ಅಧ್ಯಕ್ಷರು, ಆರ್‌ಎಸ್‌ಎಸ್ ಮುಖಂಡರೂ ಆದ ಎಸ್.ಆರ್. ರಂಗಮೂರ್ತಿ, ಸ್ವರ್ಣೋದ್ಯಮಿ ಜಿ.ಎಲ್. ಆಚಾರ್ಯ ಸೇರಿದಂತೆ ಹಲವು ಗಣ್ಯರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ನೀಡಿದ್ದಾರೆ-ಕೃಷ್ಣ ಶೆಟ್ಟಿ
ಸುದ್ದಿ ಯೊಂದಿಗೆ ಮಾತನಾಡಿದ ಕೃಷ್ಣಶೆಟ್ಟಿಯವರು, ಸುಮಾರು 65 ವರ್ಷಗಳಿಂದ ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಿದ್ದಾರೆ. ಹಿರಿಯರ ಅಪೇಕ್ಷೆ ಮತ್ತು ಸಲಹೆಯೊಂದಿಗೆ ಸಂಸ್ಥೆಯನ್ನು ಇನ್ನಷ್ಟು ಬೆಳೆಸಿ ಶಿಕ್ಷಣ ಸಂಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.










