







ಪುತ್ತೂರು:ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಗಳಿಂದಾಗಿ ನಡೆಯುವ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ವಿಟ್ಲ,ಉಪ್ಪಿನಂಗಡಿ ಸಹಿತ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಮೊದಲ ಹಂತದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.


ಮೊದಲ ಹಂತವಾಗಿ ವಿಟ್ಟ ಪೊಲೀಸ್ ಠಾಣೆ, ಉಪ್ಪಿನಂಗಡಿ ಪೊಲೀಸ್ ಠಾಣೆ, ಸುಳ್ಯ ಪೊಲೀಸ್ ಠಾಣೆ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಜು.23ರಿಂದ ಕಾಯಾರಂಭಗೊಂಡಿವೆ.ಸದ್ರಿ ಕ್ಯಾಮರಾಗಳ ಮೂಲಕ ಸಂಚಾರ ನಿಯಮಗಳ ಉಲ್ಲಂಘನೆಗಳನ್ನು ಪತ್ತೆಮಾಡಿ, ಸಂಬಂಧಪಟ್ಟ ವಾಹನದ ಮಾಲೀಕರಿಗೆ ನೋಟೀಸ್ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.



ದಿನೇ ದಿನೇ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು ಈಗಾಗಲೇ ಹಲವು ಜೀವ ಬಲಿಯಾಗಿದ್ದು ಹಲವರು ಗಾಯಗೊಂಡಿದ್ದಾರೆ. ಸಂಚಾರ ನಿಯಮಗಳ ಉಲ್ಲಂಘನೆಯಿಂದಾಗಿ ನಡೆಯುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪುತ್ತೂರು ಸಹಿತ ದ.ಕ.ಜಿಲ್ಲೆಯಾದ್ಯಂತ ಸಿಸಿ ಕ್ಯಾಮರಾಗಳ ಅಳವಡಿಕೆಯಾಗುವ ಸಾಧ್ಯತೆಯಿದೆ.










