






ಉಪ್ಪಿನಂಗಡಿ: ಚತುಷ್ಪಥ ಹೆದ್ದಾರಿಯ ಅಪೂರ್ಣ ಕಾಮಗಾರಿಯಿಂದಾಗಿ ಉಪ್ಪಿನಂಗಡಿ ಭಾಗದಲ್ಲಿ ಮಳೆಗಾಲದಲ್ಲಿ ಉದ್ಭವಿಸಿರುವ ಸಮಸ್ಯೆಗಳು ಒಂದೆರಡಲ್ಲ. ಇದರ ನಡುವೆಯೇ ಗಾಂಧಿಪಾರ್ಕ್ ನಲ್ಲಿರುವ ಅಂಡರ್‌ಪಾಸ್‌ನಲ್ಲಿ ಬೃಹತ್ ಈಜುಕೊಳವೊಂದು ಸೃಷ್ಟಿಯಾಗಿದ್ದು, ಪಾದಚಾರಿಗಳು ನಡೆದಾಡಲು ಕಷ್ಟಪಡಬೇಕಾದ ಸ್ಥಿತಿ ಎದುರಾಗಿದೆ.


ಗಾಂಧಿಪಾರ್ಕ್‌ನಲ್ಲಿ ಎತ್ತರಿಸಲ್ಪಟ್ಟ ಜಾಗದಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಿದ್ದು, ಅದರ ಕೆಳಗೆ ಸರ್ವಿಸ್ ರಸ್ತೆ ನಿರ್ಮಾಣವಾಗಿದ್ದರೂ, ಅದಿನ್ನೂ ಅಲ್ಲಲ್ಲಿ ಅಪೂರ್ಣವಾಗಿಯೇ ಉಳಿದಿದೆ. ಈ ಸರ್ವಿಸ್ ರಸ್ತೆಯಿಂದ ಹಾಗೂ ಉಪ್ಪಿನಂಗಡಿ ಬ್ಯಾಂಕ್ ರಸ್ತೆಯಿಂದ ಹಿರೇಬಂಡಾಡಿಗೆ ಸಂಪರ್ಕ ಕಲ್ಪಿಸುವ ಮತ್ತೊಂದು ಸರ್ವಿಸ್ ರಸ್ತೆಗೆ ಹೋಗಲು ಎತ್ತರಿಸಲ್ಪಟ್ಟ ಹೆದ್ದಾರಿಯಲ್ಲಿ ಅಂಡರ್‌ಪಾಸ್ ನೀಡಲಾಗಿದೆ. ಆದರೆ ಈ ಅಂಡರ್‌ಪಾಸ್ ಕೆಳಗಡೆ ದೊಡ್ಡ ಡೊಡ್ಡ ಜಲ್ಲಿಗಳನ್ನು ಹರಡಿದ್ದು ಬಿಟ್ಟರೆ ಇನ್ಯಾವುದೇ ಕಾಮಗಾರಿ ಆಗಿಲ್ಲ. ದಿನಕ್ಕೆ ನೂರಾರು ವಾಹನಗಳು ಇದರಲ್ಲಿ ಸಂಚರಿಸುತ್ತಿದ್ದು, ಅಂಡರ್ ಪಾಸ್ ಕೆಳಗಡೆಯ ರಸ್ತೆ ಸಂಪೂರ್ಣ ಗುಂಡಿ ಬಿದ್ದಿದೆ. ಇದರಲ್ಲಿ ಭಾಗಶಃ ಮಳೆ ನೀರು ನಿಂತು ದೊಡ್ಡ ಈಜುಕೊಳವೇ ಸೃಷ್ಟಿಯಾಗಿ ಭಾಗಶಃ ನೀರೇ ತುಂಬಿರುವುದರಿಂದ ಒಂದು ಬದಿಯ ಸ್ವಲ್ಪ ಜಾಗದಲ್ಲಿ ಮಾತ್ರ ವಾಹನ ಸಂಚರಿಸಬೇಕಾದ ಅನಿವಾರ್ಯತೆ ಇದೆ. ವಾಹನಗಳ ಭರಾಟೆಯಿಂದಾಗಿ ಪಾದಚಾರಿಗಳಿಗೂ ಇಲ್ಲಿ ಸಂಚರಿಸಲು ಕಷ್ಟಕರವಾಗಿದೆ. ಕೆಸರಿನಿಂದ ಕೂಡಿದ ಈ ಕೃತಕ ಈಜುಕೊಳದ ಆಳದ ಅರಿವಿಲ್ಲದೆ ಸಂಚರಿಸುವ ಹಲವು ದ್ವಿಚಕ್ರ ವಾಹನಗಳು ಇಲ್ಲಿ ಮಗುಚಿ ಬಿದ್ದ ಘಟನೆಯೂ ನಡೆದಿದೆ. ಅಲ್ಲದೇ, ಈ ಸರ್ವಿಸ್ ರಸ್ತೆಯಿಂದ ಪೇಟೆಯೊಳಗಿನ ಬ್ಯಾಂಕ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಎತ್ತರದಿಂದ ಕೂಡಿದ್ದು, ದೊಡ್ಡ ದೊಡ್ಡ ಜಲ್ಲಿ ಕಲ್ಲುಗಳು ಅಲ್ಲಿ ಹರಡಿಕೊಂಡಿವೆ. ಇದು ಕೂಡಾ ಸಣ್ಣ ವಾಹನಗಳ ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ.



ಇಲ್ಲಿನ ಅವ್ಯವಸ್ಥೆಗೆ ಜನ ರೋಸಿ ಹೋಗಿದ್ದರೂ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯವರಾಗಲೀ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲೀ ಇಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲು ಮುಂದಾಗುತ್ತಲೇ ಇಲ್ಲ. ಅಪೂರ್ಣವಾಗಿರುವ ಚತುಷಥ ಹೆದ್ದಾರಿಯಿಂದ ಜನಸಾಮಾನ್ಯರಿಗಾಗುತ್ತಿರುವ ಸಮಸ್ಯೆಗೆ ಪರಿಹಾರ ದೊರಕಿಸಲು ಎಲ್ಲರೂ ಒಗ್ಗಟ್ಟಾಗಿ ಪ್ರತಿಭಟನೆಯ ಮೂಲಕವೇ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುವ ಅನಿವಾರ್ಯತೆ ಎದುರಾಗಿರುವುದು ಇಲ್ಲಿನ ದುಸ್ಥಿತಿ.










