ಶಿಕ್ಷಕರ ಗುಣಮಟ್ಟ ವೃದ್ಧಿಗೆ ಗಣಿತ-ವಿಜ್ಞಾನ ಸನಿವಾಸ ಕಾರ್ಯಾಗಾರಕ್ಕೆ ಚಾಲನೆ

0

ಪುತ್ತೂರು: ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು (ರಿ.) ಇದರ ಸಂಯುಕ್ತ ಸಹಕಾರದಲ್ಲಿ ಮೂರು ದಿವಸಗಳ ಗಣಿತ-ವಿಜ್ಞಾನ ಶಿಕ್ಷಕರ ಸನಿವಾಸ ಕಾರ್ಯಾಗಾರ ಜು. 26ರಂದು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಾಗಾರವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು (ರಿ.) ಇದರ ಉಪಾಧ್ಯಕ್ಷೆ ರೂಪಲೇಖಾ ಅವರು ಉದ್ಘಾಟಿಸಿ, ಸಂಘದ ಹಿರಿಯರ ದೂರದೃಷ್ಟಿ ಮತ್ತು ಮೌಲ್ಯಾಧಾರಿತ ಚಿಂತನೆಯೊಂದಿಗೆ ಈ ಸಂಸ್ಥೆಯನ್ನು ಕಟ್ಟಿಬೆಳೆಸಿದ್ದಾರೆ. ಅವರ ಆದರ್ಶಗಳು ಮತ್ತು ಮೂಲಚಿಂತನೆಗಳನ್ನು ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಆ ಮೌಲ್ಯಗಳನ್ನು ಉಳಿಸಿಕೊಂಡು ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದರು.

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ತೆಂಕಿಲದ ಸಂಚಾಲಕರಾದ ಶ್ರೀ ರವಿನಾರಾಯಣ ಎಂ. ಅಧ್ಯಕ್ಷತೆ ವಹಿಸಿ, ಕಾರ್ಯಾಗಾರದಲ್ಲಿ ಕೇವಲ ಸಾಂಕೇತಿಕವಾಗಿ ಭಾಗವಹಿಸುವುದಲ್ಲ, ಇಲ್ಲಿ ದೊರೆಯುವ ಪ್ರತಿಯೊಂದು ಕಲಿಕೆಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಉನ್ನತ ಶಿಕ್ಷಣ ಕ್ಷೇತ್ರದ ತಜ್ಞರು ನಮ್ಮೊಂದಿಗಿದ್ದು, ಅವರ ಅನುಭವ ಮತ್ತು ಮಾರ್ಗದರ್ಶನವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ನಮ್ಮ ಬೋಧನಾ ಕೌಶಲ್ಯವನ್ನು ಇನ್ನಷ್ಟು ವೃದ್ಧಿಸಿಕೊಳ್ಳಬೇಕು ಎಂದು ಹೇಳಿ, ಶುಭಹಾರೈಸಿದರು.

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹಾಗೂ ವಿದ್ಯಾಭಾರತಿ ಕರ್ನಾಟಕದ ಕ್ಷೇತ್ರೀಯ ನೈತಿಕ ಮತ್ತು ಆಧ್ಯಾತ್ಮಿಕ ಪ್ರಮುಖ್ ವೆಂಕಟರಮಣ ರಾವ್ ಮಂಕುಡೆ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ, ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾದ ಶಶಿಕಾಂತ್ ಜೋಷಿ, ರಾಮಚಂದ್ರ ಭಟ್ ಬಿ.ಜಿ., ಲಕ್ಷ್ಮೀಪ್ರಸಾದ್ ನಾಯಕ್, ಎ. ಶ್ರೀನಿವಾಸ್, ಎ. ರಾಮಸ್ವಾಮಿ, ಟಿ.ಕೆ. ಪ್ರಸನ್ನ ಮೂರ್ತಿ, ಡಾ. ಆನಿ ಡಿಂಪಲ್ ಕ್ಯಸ್ತ ಅವರು ಉಪಸ್ಥಿತರಿದ್ದರು. ಸಭೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಕೋಶಾಧಿಕಾರಿ ಅಶೋಕ್ ಕುಂಬ್ಲೆ, ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕರಾದ ಸುಬ್ರಹ್ಮಣ್ಯ ಭಟ್ ಭಾಗವಹಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಯೋಜಕರಾದ ರಘುರಾಜ್ ಉಬರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.

ಈ ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಗಣಿತ ಮತ್ತು ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದು, ಬೋಧನಾ ಕೌಶಲ್ಯ, ನೂತನ ಶಿಕ್ಷಣ ವಿಧಾನಗಳು ಹಾಗೂ ಪ್ರಾಯೋಗಿಕ ಚಟುವಟಿಕೆಗಳ ಕುರಿತು ವಿಶೇಷ ತರಬೇತಿ ನಡೆಯಲಿದೆ.

LEAVE A REPLY

Please enter your comment!
Please enter your name here