ಇಡ್ಕಿದು: ಮನೆಯ ಹಿಂಬಾಗಿಲ ಮೂಲಕ ಒಳನುಗ್ಗಿದ ಕಳ್ಳರಿಂದ ವೈದ್ಯ ದಂಪತಿಯ ಚಿನ್ನಾಭರಣ ಕಳವು

0

ವಿಟ್ಲ: ರಾತ್ರಿ ವೇಳೆ ಮನೆಗೆ ನುಗ್ಗಿದ ಕಳ್ಳರು ವೃದ್ದ ದಂಪತಿಯ ಕುತ್ತಿಗೆಯಲ್ಲಿದ್ದ ಚಿನ್ನದ ಆಭರಣವನ್ನು ಕಸಿದು ಪರಾರಿಯಾಗಿ, ಅಲ್ಪ ದೂರದಲ್ಲಿದ್ದ ಮನೆಯೊಂದರ ಅಂಗಳದಲ್ಲಿರಿಸಲಾಗಿದ್ದ ಆ್ಯಕ್ಟೀವಾ ಸ್ಕೂಟರನ್ನು ಕಳ್ಳರು ಕದ್ದೊಯ್ದ ಘಟನೆ ಜು.25ರಂದು ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಕೋಲ್ಪೆ ಕೊಡಂಗೆ ಎಂಬಲ್ಲಿ ನಡೆದಿದೆ.

ಇಡ್ಕಿದು ಗ್ರಾಮದ ಕೋಲ್ಪೆ ಕೊಡಂಗೆ ನಿವಾಸಿ ನಿವೃತ್ತ ವೈದ್ಯ ಡಾ. ಪುಂಡಿಕಾಯಿ ಸೂರ್ಯನಾರಾಯಣ ಭಟ್ (75 ವ.) ರವರ ಮನೆಯಲ್ಲಿ ಕಳವು ಕೃತ್ಯ ನಡೆದಿದೆ.

ಇಡ್ಕಿದು ಗ್ರಾಮದ ಕೋಲ್ಪೆ ಕೊಡಂಗೆ ನಿವಾಸಿಯಾದ ನಿವೃತ್ತ ವೈದ್ಯ ಡಾ. ಪುಂಡಿಕಾಯಿ ಸೂರ್ಯನಾರಾಯಣ ಭಟ್ ರವರ ಮನೆಯ ಹಿಂಭಾಗಿಲಿನ ಮೂಲಕ ಒಳಪ್ರವೇಶಿಸಿ ಕೃತ್ಯ ಎಸಗಿದೆ. ಘಟನೆ ನಡೆದ ಸಮಯದಲ್ಲಿ ಸೂರ್ಯನಾರಾಯಣ ಭಟ್ ಅವರು ಕೆಳ ಅಂತಸ್ತಿನಲ್ಲಿ ಟಿವಿ ವೀಕ್ಷಿಸುತ್ತಿದ್ದರು. ಮನೆ ಮೇಲಿನ ಅಂತಸ್ತಿನಲ್ಲಿ ಅವರ ಪುತ್ರ, ಸೊಸೆ ಇದ್ದರು. ಈ ವೇಳೆ ಹಿಂಭಾಗಿಲಿನಿಂದ ಮನೆಯ ಒಳ ಪ್ರವೇಶಿಸಿದ ಕಳ್ಳರು, ವೃದ್ಧ ವೈದ್ಯರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಅಭರಣಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಘಟನೆಯಿಂದ ಆಘಾತಗೊಂಡ ಅವರು ಜೋರಾಗಿ ಬೊಬ್ಬೆ ಹೊಡೆದುದರಿಂದ ಹೆದರಿದ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಘಟನೆ ನಡೆದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿರುವ ಕೋಲ್ಪೆ ಕೊಡಂಚರಪಾಲು ನಿವಾಸಿ ಆನಂದ ಸಫಲ್ಯ ಎಂಬುವರ ಮನೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಆಕ್ಟಿವಾ ಸ್ಕೂಟರ್ ಅನ್ನು ದುಷ್ಕರ್ಮಿಗಳು ಕದ್ದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಷ್ಟೇ ಅಲ್ಲದೆ, ಸಮೀಪದ ಮತ್ತೊಂದು ಮನೆಯ ಅಂಗಳದಲ್ಲಿದ್ದ ಬೈಕ್ ಒಂದರ ಲಾಕ್ ಮುರಿದು ಕಳ್ಳತನ ಮಾಡಲು ಯತ್ನಿಸಿದ್ದು, ಅದು ವಿಫಲವಾದ ಹಿನ್ನೆಲೆಯಲ್ಲಿ ಅವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಆಗಮಿಸಿ ಪ್ರಮುಖ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here