






ಸೆಪ್ಟೆಂಬರ್ನಲ್ಲಿ ಅನುಜ್ಞಾ ಕಲಶ, ಜನವರಿಯಲ್ಲಿ ಪ್ರತಿಷ್ಠಾ ಕಾರ್ಯ, ನೇಮ ನಡೆಸುವ ಬಗ್ಗೆ ಪ್ರಸ್ತಾಪ: ದೈವಜ್ಞರ ಸಲಹೆ ಪಡೆದು ದಿನಾಂಕ ಅಂತಿಮಗೊಳಿಸಲು ತೀರ್ಮಾನ
ದೈವಗಳ ಮೊಗ, ಪರಿಕರ, ಪ್ರತಿಷ್ಠಾ ಕಾರ್ಯ, ನೇಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳಿಗೆ ರೂ.10 ಲಕ್ಷ ವೆಚ್ಚ ಅಂದಾಜು: ಭಕ್ತವೃಂದದ ಸಹಕಾರ ಪಡೆಯಲು ನಿರ್ಧಾರ


ಪುತ್ತೂರು: ಎಂಟು ಶತಮಾನಗಳ ಐತಿಹ್ಯ ಹೊಂದಿರುವ ಮೇಲಿನ ಮುಕ್ಕೂರು ತರವಾಡಿನ ಶ್ರೀ ರಕ್ತೇಶ್ವರಿ, ಶ್ರೀ ಉಳ್ಳಾಕುಲು ದೈವ ಹಾಗೂ ಶ್ರೀ ಗುಳಿಗ ದೈವ ಸಾನಿಧ್ಯಗಳ ಜೀರ್ಣೋದ್ಧಾರ ಕಾಮಗಾರಿ ಅಂತಿಮ ಹಂತ ತಲುಪಿರುವ ಹಿನ್ನೆಲೆಯಲ್ಲಿ, ಮುಂದಿನ ಧಾರ್ಮಿಕ ವಿಧಿವಿಧಾನಗಳಾದ ಅನುಜ್ಞಾ ಕಲಶ, ಪ್ರತಿಷ್ಠಾ ಕಾರ್ಯ ಹಾಗೂ ನೇಮದ ಸಿದ್ಧತೆ ಕುರಿತು ಚರ್ಚಿಸಲು ಭಕ್ತವೃಂದದ ಪೂರ್ವಭಾವಿ ಸಭೆ ಮುಕ್ಕೂರು ಮೇಲಿನ ತರವಾಡು ಮನೆಯಲ್ಲಿ ನಡೆಯಿತು.




ಸಭೆಯ ಆರಂಭದಲ್ಲಿ ಮುಕ್ಕೂರು ಮೇಲಿನ ತರವಾಡು ಮನೆಯ ಲಕ್ಷ್ಮೀಶ ಬೈಪಾಡಿತ್ತಾಯ ಅವರು ಇದುವರೆಗೆ ನಡೆದಿರುವ ಜೀರ್ಣೋದ್ಧಾರ ಕಾಮಗಾರಿಗಳ ವಿವರವನ್ನು ಮಂಡಿಸಿದರು. ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳು, ಬಾಕಿ ಉಳಿದಿರುವ ಕೆಲಸಗಳು ಹಾಗೂ ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ಧಾರ್ಮಿಕ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸೆಪ್ಟೆಂಬರ್ ತಿಂಗಳಲ್ಲಿ ಅನುಜ್ಞಾ ಕಲಶ ಹಾಗೂ ಪ್ರತಿಷ್ಠಾ ಕಾರ್ಯವನ್ನು, 2027ರ ಜನವರಿಯಲ್ಲಿ ನೇಮವನ್ನು ನಡೆಸುವ ಬಗ್ಗೆ ಪ್ರಸ್ತಾವಗೊಂಡಿತ್ತು. ಪ್ರತಿಷ್ಠಾ ಕಾರ್ಯ ಹಾಗೂ ನೇಮದ ದಿನಾಂಕವನ್ನು ದೈವಜ್ಞರ ಅಭಿಪ್ರಾಯದ ಆಧಾರದ ಮೇಲೆ ಅಂತಿಮಗೊಳಿಸಲು ನಿರ್ಧರಿಸಲಾಯಿತು. ದೈವಗಳ ಮೊಗ ಹಾಗೂ ಇತರ ಪರಿಕರಗಳ ದುರಸ್ತಿ ಅಥವಾ ಹೊಸದಾಗಿ ಖರೀದಿ ಸೇರಿದಂತೆ ಅಗತ್ಯ ಪರಿಕರಗಳ ಖರೀದಿ, ಅನುಜ್ಞಾ ಕಲಶ, ಪ್ರತಿಷ್ಠಾ ಕಾರ್ಯ, ನೇಮ ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಸೇರಿದಂತೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸುಮಾರು ರೂ.10 ಲಕ್ಷ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ಅಂದಾಜು ಮಂಡಿಸಲಾಯಿತು. ಈ ಮೊತ್ತವನ್ನು ಸಂಗ್ರಹಿಸಲು ಕ್ಷೇತ್ರದ ವ್ಯಾಪ್ತಿಯ ಭಕ್ತರ ಮನೆಗಳಿಂದ ದೇಣಿಗೆ ಸಂಗ್ರಹಿಸಲು ತೀರ್ಮಾನಿಸಲಾಯಿತು. ಈ ಕುರಿತು ಮನವಿ ಪತ್ರ ಸಿದ್ಧಪಡಿಸಲು ನಿರ್ಧರಿಸಲಾಯಿತು.
ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೂ ಮೇಲಿನ ತರವಾಡಿನ ದೈವ ಸಾನಿಧ್ಯಗಳಿಗೆ ನೇರ ಸಂಬಂಧ ಇರುವುದರಿಂದ ಪೆರುವೋಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಉಮೇಶ್ ರಾವ್ ಕೊಂಡೆಪ್ಪಾಡಿ ಅವರ ಉಪಸ್ಥಿತಿಯಲ್ಲಿ ಇನ್ನೊಂದು ಸುತ್ತಿನ ಭಕ್ತವೃಂದದ ಸಭೆ ನಡೆಸಿ ಮನವಿ ಪತ್ರ ಅಂತಿಮಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮಾಜಿ ಆಡಳಿತ ಮೊಕ್ತೇಸರ ಎಂ.ಕೆ. ಬಾಲಚಂದ್ರ ರಾವ್ ಕೊಂಡೆಪ್ಪಾಡಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸುಬ್ರಾಯ ಭಟ್ ನೀರ್ಕಜೆ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ., ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಹಾಗೂ ಪ್ರಗತಿಪರ ಕೃಷಿಕ ರಾಮಚಂದ್ರ ಕೋಡಿಬೈಲು ಸಲಹೆ-ಸೂಚನೆ ನೀಡಿದರು.
ವೇದಿಕೆಯಲ್ಲಿ ವೆಂಕಟಕೃಷ್ಣ ರಾವ್ ಕಜೆ, ಸುಧೀರ್ ಕೊಂಡೆಪ್ಪಾಡಿ, ವಸಂತ ಬೈಪಾಡಿತ್ತಾಯ ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಮುಖರಾದ ಚಂದ್ರಹಾಸ ರೈ ಮುಕ್ಕೂರು, ಗುಡ್ಡಪ್ಪ ಗೌಡ ಅಡ್ಯತಕಂಡ, ಸುಜಾತ ವಿ. ರಾಜ್, ಪುರುಷೋತ್ತಮ ಗೌಡ ಕಾಯರ್ಮಾರ್, ದೇವಕಿ ಪಿ. ಪೂಜಾರಿ ಮುಕ್ಕೂರು, ವಿಜಯಕುಮಾರ್ ರೈ ಪೆರುವೋಡಿ, ವೀರಪ್ಪ ಗೌಡ ಕರ್ಪುತ್ತಾರು, ಸಂಜೀವ ಗೌಡ ಬೈಲಂಗಡಿ, ಹೊನ್ನಪ್ಪ ಗೌಡ ಕರ್ಪುತ್ತಾರು, ಸಾವಿತ್ರಿ ಚಾಮುಂಡಿಮೂಲೆ, ಜಯಂತ ಗೌಡ ಕುಂಡಡ್ಕ, ಕುಶಾಲಪ್ಪ ಗೌಡ ಪೆರುವಾಜೆ, ಲಿಂಗಪ್ಪ ಗೌಡ, ದಿವಾಕರ ಬೀರುಸಾಗು, ರಕ್ಷಿತ್ ಗೌಡ ಕಾನಾವು, ಭರತ್ ಗೌಡ ಬೊಣ್ಯಕುಕ್ಕು, ಶಿವಮ್ಮ ತುಂಡುಕಾಡು, ಭಾಸ್ಕರ ಕುಂಡಡ್ಕ, ರವಿ ಕುಂಡಡ್ಕ, ಎಲ್ಯಣ್ಣ ಪೂಜಾರಿ, ವಸಂತ ನಾಯ್ಕ ಕುಂಡಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.










