






ಕಡಬ ತಾಲೂಕಿನ ಭಜನಾ ಪರಿಷತ್ ವಿಶೇಷ ಸ್ಥಾನ ಪಡೆದಿದೆ- ಚಂದ್ರಶೇಖರ್ ಸಾಲ್ಯಾನ್
ಖಾವಂದರು ಸಾಮಾಜಿಕ ಬದಲಾವಣೆಯ ಹರಿಕಾರರಾಗಿದ್ದಾರೆ- ಪ್ರಕಾಶ್ ಕುಮಾರ್


ಪುತ್ತೂರು: ಕಡಬ ತಾಲೂಕು ಭಜನಾ ಪರಿಷತ್ ಸಭೆಯು ಕಡಬದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಛೇರಿಯಲ್ಲಿ, ನಡೆಯಿತು. ರಾಜ್ಯ ಭಜನಾ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಸಾಲ್ಯಾನ್ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯ ಭಜನಾ ಪರಿಷತ್ತಿನ ಮುಖೇನ ಹತ್ತು ಹಲವರು ಧಾರ್ಮಿಕ ಕಾರ್ಯಕ್ರಮಗಳು ತಾಲೂಕು ಭಜನಾ ಪರಿಷತ್ತಿನ ಸಹಕಾರದಲ್ಲಿ ಅತ್ಯುತ್ತಮ ರೀತಿಯಲ್ಲಿ ನಡೆಯುತ್ತಿದ್ದು ಅದರಲ್ಲೂ ಕಡಬ ತಾಲೂಕಿನ ಭಜನಾ ಪರಿಷತ್ ವಿಶೇಷ ಸ್ಥಾನವನ್ನು ಪಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.




ಭಜನೆಯ ಜೊತೆಗೆ ಇತರ ಸಾಮಾಜಿಕ ಸೇವೆಗಳನ್ನು ಭಜನಾ ಮಂಡಳಿಯವರು ಮಾಡಿದಾಗ ಈ ಕಾರ್ಯಕ್ರಮ ಅರ್ಥಪೂರ್ಣವಾಗುವುದು ಎಂದರು. ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ, ಖಾವಂದಿರು ಗ್ರಾಮದ ಅಭಿವೃದ್ಧಿಗೆ ಗ್ರಾಮಾಭಿವೃದ್ಧಿ ಸಂಸ್ಥೆಯನ್ನು ಹುಟ್ಟು ಹಾಕಿದರು. ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ವೇದಿಕೆ ಸ್ಥಾಪನೆ ಮಾಡಿದರು. ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಜನಸಾಮಾನ್ಯರಿಗೆ ತುರ್ತು ಸ್ಪಂದನೆ ಸಿಗಲಿ ಅಂತ ಶೌರ್ಯ ವಿಪತ್ತು ಘಟಕ ಪ್ರಾರಂಭ ಮಾಡಿದ್ರು. ಧಾರ್ಮಿಕತೆ ಸಂಸ್ಕಾರಗಳು ಕಳೆದು ಹೋಗುತ್ತಿರುವ ಈ ಸಂದರ್ಭದಲ್ಲಿ ಅದನ್ನು ಉಳಿಸುವ ನಿಟ್ಟಿನಲ್ಲಿ ಭಜನಾ ಪರಿಷತ್ತನ್ನು ಪ್ರಾರಂಭಿಸಿದರು. ಅವರು ಪ್ರತಿಯೊಂದು ಸಂದರ್ಭದಲ್ಲೂ ಈ ಸಮಾಜಕ್ಕೆ ಬೇಕಾಗಿ ಹೊಸ ಹೊಸ ಚಿಂತನೆಯ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿ ನಿಜವಾದ ಸಾಮಾಜಿಕ ಬದಲಾವಣೆಯ ಹರಿಕಾರರಾಗಿದ್ದಾರೆ ಅವರ ಮಾರ್ಗದರ್ಶನದಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಯೋಗ ಸಿಕ್ಕಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಸಭೆಯಲ್ಲಿ ಭಜನಾ ಪರಿಷತ್ತಿನ ಸಮನ್ವಯಾಧಿಕಾರಿ ಸಂತೋಷ್ರವರು ಸಪ್ಟಂಬರ್ ತಿಂಗಳ 28 ರಂದು ಧರ್ಮಸ್ಥಳದಲ್ಲಿ ನಡೆಯಲಿರುವ ಭಜನಾ ಕಮ್ಮಟದ ಬಗ್ಗೆ ಮಾಹಿತಿ ನೀಡಿದರು. ಈ ವಿಶೇಷ ಸಭೆಯಲ್ಲಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಸುಂದರ ಗೌಡ ಒಗ್ಗು, ಗೌರವ ಸಲಹೆಗಾರರಾದ ಸತ್ಯನಾರಾಯಣ ಹೆಗ್ಡೆ, ವಲಯ ಭಜನಾ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು, ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಬಿಳಿನೆಲೆ ವಲಯದ ಮೇಲ್ವಿಚಾರಕರಾದ ರವಿಪ್ರಸಾದ್ ನಿರೂಪಿಸಿ, ಸವಣೂರು ವಲಯದ ಹರ್ಷಿಣಿ ಸ್ವಾಗತಿಸಿದರು. ಸವಣೂರು ವಲಯದ ದಿವೀಶ್ ನಾವೂರು ವಂದಿಸಿದರು.










