ಕುಂತೂರು: ಅಡಿಕೆ ಮರಬಿದ್ದು ಕೂಲಿಕಾರ್ಮಿಕ ಮೃತ್ಯು

0

ಪೆರಾಬೆ: ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಜೋರಾಗಿ ಬೀಸಿದ ಗಾಳಿ, ಮಳೆಗೆ ಅಡಿಕೆ ಮರ ಮುರಿದು ತಲೆ ಮೇಲೆ ಬಿದ್ದ ಪರಿಣಾಮ ಕೃಷಿ ಕೂಲಿ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಕುಂತೂರು ಗ್ರಾಮದ ಗುತ್ತುಪಾಲು ಎಂಬಲ್ಲಿ ಜು.31ರಂದು ಬೆಳಗ್ಗೆ 11 ಗಂಟೆ ವೇಳೆಗೆ ನಡೆದಿದೆ.


ಕುಂತೂರು ಗ್ರಾಮದ ಕೇವಳ ನಿವಾಸಿ ಯಾದವ ಗೌಡ (66ವ.)ಮೃತಪಟ್ಟ ದುರ್ದೈವಿ. ಇವರ ಗುತ್ತುಪಾಲು ನಿವಾಸಿ ಶೇಷಪತಿ ರೈ ಎಂಬವರ ತೋಟದಲ್ಲಿ ಕೃಷಿ ಸಂಬಂಧಿತ ಕೆಲಸ ಮಾಡುತ್ತಿದ್ದ ವೇಳೆ ಜೋರಾಗಿ ಬೀಸಿದ ಗಾಳಿ ಹಾಗೂ ಮಳೆಗೆ ಅಡಿಕೆ ಮರವೊಂದು ಮುರಿದು ಯಾದವ ಗೌಡರ ತಲೆ ಮೇಲೆಯೇ ಬಿದ್ದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಯಾದವ ಗೌಡ ಅವರನ್ನು ತಕ್ಷಣ ಕಡಬ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ತೋಟದಲ್ಲಿ ಇತರೇ ಮೂವರು ಕಾರ್ಮಿಕರೂ ಕೆಲಸ ಮಾಡುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ. ಮೃತರು ಪತ್ನಿ ಪ್ರೇಮ, ನಾಲ್ವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಅಧಿಕಾರಿಗಳ ಭೇಟಿ:
ಕಡಬ ತಹಶೀಲ್ದಾರ್ ಗಣೇಶ್ ಸವನೂರ್, ಉಪ ತಹಶೀಲ್ದಾರ್ ಶಾಹಿದುಲ್ಲಾ ಖಾನ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಶ್ರುತಿ ಅವರು ಮೃತದೇಹವಿದ್ದ ಕಡಬ ಸರಕಾರಿ ಆಸ್ಪತ್ರೆಗೆ ಮತ್ತು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಡಬ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಘಟನೆ ಕುರಿತು ಮೃತರ ಪತ್ನಿ ಪ್ರೇಮ ಅವರು ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here