ಏರಿಳಿಕೆಯ ಹಾದಿಯಲ್ಲಿ ನದಿ ನೀರಿನ ಮಟ್ಟ : ಕಡಿಮೆಯಾಗದ ಪ್ರವಾಹ ಭೀತಿ

0

ಉಪ್ಪಿನಂಗಡಿ: ಶನಿವಾರ ರಾತ್ರಿ ಅಪಾಯದ ಮಟ್ಟಕ್ಕಿಂತ ಅರ್ಧ ಮೀಟರ್ ಕೆಳಗಿನಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿಯು ರವಿವಾರ ಬೆಳಗ್ಗೆಯಾಗುತ್ತಲೇ ನೀರಿನ ಹರಿವನ್ನು ತಗ್ಗಿಸಿತ್ತು. ಆದರೆ ಮಧ್ಯಾಹ್ನವಾಗುತ್ತಲೇ ಮತ್ತೆ ನೀರಿನ ಹರಿವು ಏರಿಕೆಗೊಂಡು ಪ್ರವಾಹದ ಭೀತಿ ಮೂಡಿಸಿತ್ತು. ಆದರೆ ಸಂಜೆಯಾಗುತ್ತಲೇ ನೀರಿನ ಮಟ್ಟ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, 30 ಮೀಟರ್‌ನಿಂದ 29.02 ಮೀಟರ್‌ಗೆ ಬಂದು ನಿಂತಿದೆ.


ಇಲ್ಲಿ ನೇತ್ರಾವತಿ ನದಿಯ ಅಪಾಯದ ಮಟ್ಟ 30.05 ಆಗಿದ್ದು, ಉಪ್ಪಿನಂಗಡಿಯಲ್ಲಿ ಶನಿವಾರ ರಾತ್ರಿ ಏಳೂವರೆಯ ಸಂದರ್ಭ ನದಿ ನೀರಿನ ಮಟ್ಟ 30 ಮೀಟರ್‌ಗೆ ಬಂದು ನಿಂತು ಪ್ರವಾಹದ ಭೀತಿ ಮೂಡಿಸಿತ್ತು. ಆದರೆ ರಾತ್ರಿ 10:30ರ ಬಳಿಕ ನೀರಿನ ಮಟ್ಟ ಕಡಿಮೆಯಾಗತೊಡಗಿದ್ದು, ರವಿವಾರ ಬೆಳಗ್ಗೆ 6:30ಕ್ಕೆ 28.05 ಮೀಟರ್‌ಗೆ ಬಂದು ನಿಂತಿತ್ತು. ಮಧ್ಯಾಹ್ನ 12 ಗಂಟೆಯಾಗುವಾಗ ಮತ್ತೆ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದ್ದು, 30.೦ ಮೀಟರ್‌ಗೆ ನೀರಿನ ಮಟ್ಟ ಬಂದು ನಿಂತಿತ್ತು. ಈ ಸಂದರ್ಭ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯ ಸ್ನಾನಘಟ್ಟದಲ್ಲಿರುವ ನದಿಗಿಳಿಯುವ 36 ಮೆಟ್ಟಿಲುಗಳಲ್ಲಿ 35 ಮೆಟ್ಟಿಲುಗಳು ಮುಳುಗಡೆಗೊಂಡು ಒಂದು ಮೆಟ್ಟಿಲುಗಳು ಮಾತ್ರ ಕಾಣುತ್ತಿತ್ತು. ಆದರೆ ಅಪರಾಹ್ನದ ಬಳಿಕ ಮತ್ತೆ ನೀರಿನ ಮಟ್ಟ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಗೊಂಡಿದ್ದು, ರಾತ್ರಿ ಏಳೂವರೆಯ ಸುಮಾರಿಗೆ 29.02 ಮೀಟರ್‌ಗೆ ನೀರಿನ ಮಟ್ಟ ಬಂದು ನಿಂತಿದೆ. ಈಗ ಸ್ನಾನಘಟ್ಟದ ಬಳಿಯ 36 ಮೆಟ್ಟಿಲುಗಳಲ್ಲಿ ಆರು ಮೆಟ್ಟಿಲುಗಳು ಕಂಡು ಬರುತ್ತಿದ್ದು, ಉಳಿದ ಮೆಟ್ಟಿಲುಗಳು ಮುಳುಗಡೆಗೊಂಡಿವೆ. ಒಟ್ಟಿನಲ್ಲಿ ನಿನ್ನೆಯಿಂದ ಕುಮಾರಧಾರ ಹಾಗೂ ನೇತ್ರಾವತಿ ನದಿಯ ನೀರಿನ ಮಟ್ಟ ಏರಿಳಿಕೆಯ ಹಾದಿಯಲ್ಲಿದೆ.


ಮಧ್ಯಾಹ್ನ ವೇಳೆಗೆ ನದಿಯ ನೀರ ಮಟ್ಟದ ಏರಿಕೆಯ ವೇಗವನ್ನು ಕಂಡು ಕಟ್ಟೆಚ್ಚರ ವಹಿಸಿದ್ದ ಸ್ಥಳೀಯಾಡಳಿತ ಪರಿಸ್ಥಿತಿ ಕೈ ಮೀರುವ ಮುನ್ನ ಗ್ರಾಮಸ್ಥರು ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಬೇಕೆಂದು ದ್ವನಿ ವರ್ಧಕದ ಮೂಲಕ ಎಚ್ಚರಿಕೆಯ ಸಂದೇಶವನ್ನು ಪ್ರಚಾರಗೊಳಿಸಿತು. ಪರಿಸರದ ನದಿ ಪಾತ್ರದ ಹಲವಾರು ತಗ್ಗು ಪ್ರದೇಶದಲ್ಲಿನ ಕೃಷಿ ಬೆಳೆಗಳು ನೆರೆ ನೀರಿನಿಂದ ಜಲಾವೃತಗೊಂಡಿದ್ದು, ಉಪ್ಪಿನಂಗಡಿಯಲ್ಲಿ ತಗ್ಗು ಪ್ರದೇಶದ ಮೂರು ಮನೆಗಳ ನಿವಾಸಿಗರನ್ನು ಸ್ಥಳಾಂತರಗೊಳಿಸಲಾಗಿದೆ.


ರವಿವಾರವಾದ ಆದ ಕಾರಣ ದೇವಾಲಯದ ಬಳಿ ನೀರು ನೋಡಲು ಬರುವವರ ಸಂಖ್ಯೆಯೂ ಜಾಸ್ತಿಯಾಗಿದ್ದು, ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡದ ಘಟಕಾಧಿಕಾರಿ ರಾಮಣ್ಣ ಆಚಾರ್ಯ, ಸೆಕ್ಷನ್ ಲೀಡರ್ ದಿನೇಶ್, ಸಹಾಯಕ ಸೆಕ್ಷನ್ ಲೀಡರ್ ಜನಾರ್ದನ ಆಚಾರ್ಯ, ಗೃಹರಕ್ಷಕರಾದ ಸಮದ್, ಸೋಮನಾಥ್, ವಸಂತ, ಶಿಭುಜಾನ್ ಅವರು ನೀರು ನೋಡಲು ಬಂದ ಕುತೂಹಲಿಗರ ಮೇಲೆ ನಿಗಾ ವಹಿಸಿದರು. ಪುತ್ತೂರು ತಹಶೀಲ್ದಾರ್, ಬೆಳ್ತಂಗಡಿ ಡಿವೈಎಸ್ಪಿ , ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಗ್ರಾಮ ಪ್ಂಚಾಯತ್ ಪಿಡಿಒ , ಉಪ ತಹಶೀಲ್ದಾರ್ ಸಹಿತ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

LEAVE A REPLY

Please enter your comment!
Please enter your name here