







- ಮನುಷ್ಯನಿಗೆ ಆರೋಗ್ಯ, ಆಯುಷ್ಯ ಬಹಳಷ್ಟು ಶ್ರೇಷ್ಟವಾದುದು: ಒಡಿಯೂರು ಶ್ರೀ
ವಿಟ್ಲ: ಮನುಷ್ಯನಿಗೆ ಜೀವನದಲ್ಲಿ ಆರೋಗ್ಯ, ಆಯುಷ್ಯ ಬಹಳಷ್ಟು ಶ್ರೇಷ್ಟವಾದುದು. ಎರಡೂ ಜೊತೆಜೊತೆಯಾಗಿ ಸಾಗಿದರೆ ಬದುಕಿಗೆ ಅನುಕೂಲ. ಆರೋಗ್ಯ ಕಾಪಿಡಲು ಆಹಾರಪದ್ಧತಿ ಸರಿಯಾಗಿರಬೇಕು. ಋತುಗಳಿಗೆ ಅನುಗುಣವಾದ ಆಹಾರ ಪದ್ದತಿ ನಮ್ಮದಾಗಬೇಕು. ಬದುಕು ಚಲನಶೀಲವಾದುದು. ದೇಹ ಮತ್ತು ಮನಸ್ಸು ಜೊತೆಜೊತೆಯಾಗಿ ಸಾಗಿದಾಗ ಬದುಕು ಹಸನು. ತಾಳ್ಮೆ ಸಹನೆಯ ಕೊರತೆ ಸಮಾಜದಲ್ಲಿದೆ. ಬದುಕಿಗೆ ತಾಳ್ಮೆ, ಸಹನೆ ಅತೀ ಮುಖ್ಯ. ರಕ್ತದಾನದಲ್ಲಿ ಪ್ರಾಣದಾನದ ಫಲವಿದೆ. ರಾಷ್ಟ್ರೀಯ ಆದರ್ಶಗಳಲ್ಲಿ ತ್ಯಾಗ ಮತ್ತು ಸೇವೆ ಪ್ರಮುಖವಾದುದು. ಉಪಕಾರ ಸ್ಮರಣೆ ನಮ್ಮದಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.



ಅವರು ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ, ಗ್ರಾಮೋತ್ಸವ – ಸೇವಾ ಸಂಭ್ರಮದ ಪ್ರಯುಕ್ತ ಶ್ರೀಗಳವರ ಜನ್ಮದಿನೋತ್ಸವ ಸಮಿತಿ, ಶ್ರೀ ಗುರುದೇವ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ( ರಿ.) ಒಡಿಯೂರು, ಶಾರದಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು, ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ದೇರಳಕಟ್ಟೆ, ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಮಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ಒನ್ ಸೈಟ್ ಎಸ್ಸಿಲಾರ್ ಲಕ್ಸೋಟಿಕ್ ಫೌಂಡೇಶನ್ ಬೆಂಗಳೂರು, ಪ್ರಾಥಮಿಕ ಅರೋಗ್ಯ ಕೇಂದ್ರ ಕನ್ಯಾನ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘ ನಿ., ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ಯುವ ಸೇವಾಬಳಗ, ಒಡಿಯೂರು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಇದರ ಸಹಯೋಗದಲ್ಲಿ ನಡೆದ ಬೃಹತ್ ವೈದ್ಯಕೀಯ ಸೇವಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.



ಸಾಧ್ವೀ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಸಂದೀಪ್ ಬೇಕಲ್ ಆರ್, ಮಂಗಳೂರು ವೆನ್ ಲಾಕ್ ಜಿಲ್ಲಾ ಆಸ್ಪತ್ರೆಯ ಇನ್ ಚಾರ್ಜ್ ಅಶೋಕ್, ದೇರಳಕಟ್ಟೆ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ನ ಪ್ರಾಂಶುಪಾಲರಾದ ಡಾ. ಮಿತ್ರ ಎನ್.ಹೆಗ್ಡೆ, ದೇರಳಕಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ನ್ಯೂರೋ ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾ.ಅನಂತನ್ ಆರ್., ಬೆಂಗಳೂರಿನ ಒನ್ ಸೈಟ್ ಎಸ್ಸಿಲಾರ್ ಲಕ್ಸೋಟಿಕ್ ಫೌಂಡೇಶನ್ ನ ವ್ಯವಸ್ಥಾಪಕರಾದ ಧರ್ಮಪ್ರಸಾದ್ ರೈ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಎ. ಸುರೇಶ್ ರೈ, ಶ್ರೀಗಳ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷರಾದ ಲೋಕನಾಥ ಶೆಟ್ಟಿ ತಾಳಿಪ್ಪಾಡಿ, ಪ್ರಧಾನ ಕೋಶಾಧಿಕಾರಿ ಎ. ಅಶೋಕ್ ಕುಮಾರ್ ಬಿಜೈ, ಉಪಾಧ್ಯಕ್ಷರಾದ ಕೆ.ಎನ್.ವೆಂಕಟರಮಣ ಹೊಳ್ಳ ಕಾಸರಗೋಡು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಗುರುದೇವ ಐಟಿಐನ ಪ್ರಾಂಶುಪಾಲರಾದ ಪ್ರವೀಣ್ ಕುಮಾರ್ ಎನ್. ವಂದಿಸಿದರು.










