







ಇನ್ನೊಬ್ಬರನ್ನು ಕಡೆಗಣಿಸುವುದಕ್ಕಿಂತ ನಮ್ಮನ್ನು ನಾವು ತಿದ್ದಿಕೊಳ್ಳುವ ಕೆಲಸವಾಗಬೇಕು: ಮಾಣಿಲ ಶ್ರೀ


ವಿಟ್ಲ: ಹಿಂದೂ ಧರ್ಮ ಇಂದು ಸಂದಿಗ್ದ ಕಾಲಘಟ್ಟದಲ್ಲಿದೆ. ಹಲವಾರು ಪೈಪೋಟೊಗಳು ಸಮಾಜದಲ್ಲಿದೆ. ಇನ್ನೊಬ್ಬರನ್ನು ಕಡೆಗಣಿಸುವುದಕ್ಕಿಂತ ನಮ್ಮನ್ನು ನಾವು ತಿದ್ದಿಕೊಳ್ಳುವ ಕೆಲಸವಾಗಬೇಕು. ಒಳ್ಳೆತನವನ್ನು ಉಳಿಸಿಬೆಳೆಸುವ ಕೆಲಸವಾಗಬೇಕು. ಸನಾತನ ಪದಕ್ಕೆ ಬಹಳಷ್ಟು ಅರ್ಥವಿದೆ. ಲೋಕ ಹಿತ ಬಯಸುವ ಕಾರ್ಯಕ್ರಮ ಇದಾಗಲಿ ಎಂದು ಶ್ರೀಧಾಮ ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಯೋಗಿ, ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರು ಹೇಳಿದರು.



ಅವರು ಶ್ರೀಧಾಮ ಮಾಣಿಲ ಶ್ರೀದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಆ.೨ರಂದು ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಅಂಗವಾಗಿ ನಡೆದ ೨೨ನೇ ದಿನದ ಸಾಮೂಹಿಕ ಲಕ್ಷ್ಮಿ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮೌಲ್ಯಾಧಾರಿತ ಬದ್ದತೆಯಲ್ಲಿ ಜೀವನ ಸಾಗಿಸೋಣ. ನಮಗಾಗಿ ಬದುಕುವ ಬದಲು ಲೋಕದ ಹಿತಕ್ಕೆ ಬದುಕುವ ಕೆಲಸವಾಗಬೇಕು. ಹಿರಿಯನ್ನು ಪ್ರೀತಿಸುವ ಮನಸ್ಸು ನಮ್ಮದಾಗಬೇಕು. ಭಗವಂತನನ್ನು ಎಲ್ಲರೊಳಗೆ ನೋಡುವ ಕೆಲಸವಾಗಬೇಕು ಎಂದರು.
ಶ್ರೀ ದುರ್ಗಾಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಮೋನಪ್ಪ ಭಂಡಾರಿ, ಜ್ಯೋತಿಷಿ ಆಶ್ವಿನ್ ಭಟ್ ಆಟಿಕುಕ್ಕು, ನಿವೃತ್ತ ಮುಖ್ಯ ಶಿಕ್ಷಕಿ ಶುಭಲತಾ ಹಾರಾಡಿ, ಡಾ. ಆಶಾ ಜ್ಯೋತಿ ರೈ ಮಾಲಡಿ, ಕಾಸರಗೋಡು ಜನ ಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಅಶ್ವಥ್ ಪೂಜಾರಿ, ಉದ್ಯಮಿಗಳಾದ ಲೋಕೇಶ್ ವಿಠಲ ಬೆಂಗಳೂರು, ವಿಠಲ ಬೆಂಗಳೂರು, ಟ್ರಸ್ಟಿ ಚಂದ್ರಶೇಖರ ಮೂಲ್ಯ, ಶ್ರೀ ವರಮಹಾಲಕ್ಷ್ಮಿ ವೃತಾಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ರೇವತಿ ಪೆರ್ನೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ವರಮಹಾಲಕ್ಷ್ಮಿ ವೃತಾಚರಣೆ ಸಮಿತಿ ಗೌರವಾಧ್ಯಕ್ಷರಾದ ಕೆಯ್ಯೂರು ನಾರಾಯಣ ಭಟ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸತೀಶ್ ಕುಮಾರ್ ಕಾಪು ವಂದಿಸಿದರು. ಯತೀಶ್ ಬೆಟ್ಟಂಪಾಡಿ ಕಾರ್ಯಕ್ರಮ ನಿರೂಪಿಸಿದರು.
ಬಾಲಭೋಜನ, ಸಾಮೂಹಿಕ ಕುಂಕುಮಾರ್ಚನೆ
ಬೆಳಗ್ಗೆ ಗಣಪತಿಹವನ, ವಿವಿಧ ಭಜನಾ ತಂಡಗಳಿಂದ ಭಜನಾಸಂಕೀರ್ತನೆ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ವಾಯನ ದಾನ, ಶ್ರೀ ಗುರು ಪೂಜೆ, ಬಾಲಭೋಜನ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತ ಪೂಜೆ ಬಳಿಕ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆದು, ಪ್ರಸಾದವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ಶ್ರೀ ಲಕ್ಷ್ಮೀ ಪೂಜೆ, ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.










