






ಉಪ್ಪಿನಂಗಡಿ: ಕಳೆದೆರಡು ದಿನಗಳಲ್ಲಿ ಮೈದುಂಬಿ ಹರಿದು ಉಪ್ಪಿನಂಗಡಿಯಲ್ಲಿ ಪ್ರವಾಹ ಭೀತಿ ಮೂಡಿಸಿದ ನೇತ್ರಾವತಿ- ಕುಮಾರಧಾರ ನದಿಗಳಲ್ಲಿ ಸೋಮವಾರ ನೀರಿನ ಪ್ರವಾಹ ಕಡಿಮೆಯಾಗಿದ್ದು, ಉಭಯ ನದಿಗಳು ಶಾಂತವಾಗಿ ಹರಿಯುತ್ತಿವೆ.


ಭಾನುವಾರ ರಾತ್ರಿ ನೇತ್ರಾವತಿ ನದಿಯು 29.02 ಮೀಟರ್‌ನಲ್ಲಿ ಹರಿಯುತ್ತಿತ್ತು. ಆದರೆ ಸೋಮವಾರ ಬೆಳಗ್ಗೆಯಾಗುತ್ತಲೇ ನೇತ್ರಾವತಿ ಮತ್ತು ಕುಮಾರಧಾರ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಸೋಮವಾರ ಸಂಜೆ ನೇತ್ರಾವತಿ ನದಿಯು 27.04 ಮೀ. ಎತ್ತರದಲ್ಲಿ ಹರಿಯುತಿತ್ತು. ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯ ಸ್ನಾನಘಟ್ಟದ ಬಳಿ ನದಿಗಿಳಿಯುವ 36 ಮೆಟ್ಟಿಲುಗಳಲ್ಲಿ 15 ಮೆಟ್ಟಿಲುಗಳು ಕಾಣತೊಡಗಿತ್ತು.



ಉಪ್ಪಿನಂಗಡಿಯಲ್ಲಿ ನದಿಯ ನೀರು ಅಪಾಯದ ಮಟ್ಟವನ್ನು ಮೀರಿ ಹರಿದಾಕ್ಷಣ ಪೇಟೆಯ ತಗ್ಗು ಪ್ರದೇಶಗಳು ಜಲಾವೃತಗೊಂಡು ಅಂಗಡಿ ಮುಂಗಟ್ಟುಗಳ ಒಳಗೆ ನೀರು ನುಗ್ಗುವುದರಿಂದ ವ್ಯಾಪಾರಿಗಳು ಸಹಜವಾಗಿ ಸಂಕಷ್ಟಕ್ಕೀಡಾಗುತ್ತಾರೆ. ಈ ಕಾರಣಕ್ಕೆ ನದಿಯ ಜಲಮಟ್ಟದ ಬಗ್ಗೆ ಅಹೋರಾತ್ರಿ ಇಲ್ಲಿನ ವ್ಯಾಪಾರಿಗಳು ನಿಗಾವಿರಿಸುತ್ತಾರೆ. ಪ್ರಸಕ್ತ ಈ ಬಾರಿಯ ಮಳೆಗಾಲದಲ್ಲಿ ಈಗಾಗಲೇ ಎರಡು ಸಲ ನೆರೆ ಭೀತಿಯನ್ನು ಮೂಡಿಸಿದ್ದ ಉಭಯ ನದಿಗಳು ಇನ್ನು ಯಾವ ರೀತಿ ರುದ್ರ ನರ್ತನ ತೋರಿಸುತ್ತವೆಯೋ ಎಂಬ ಕಳವಳವನ್ನು ಮಾತ್ರ ಜೀವಂತವಿರಿಸಿದೆ.










