






ನನಗೆ ನೀಡಿದ ಗೌರವ ಭಾರತ ಮಾತೆಗೆ ಅರ್ಪಣೆ- ಸುಂದರ ಪೂಜಾರಿ ಪಳಂಬೆ
ಯುವಕರು ದೇಶ ಸೇವೆ ಮಾಡಲು ಇದು ಪ್ರೇರಣೆಯಾಗಲಿ- ಸಂಜೀವ ನಾಯಕ್ ಕಲ್ಲೇಗ


ಪುತ್ತೂರು: ಭಾರತದ ಗಡಿ ಭದ್ರತಾ ಪಡೆಯಲ್ಲಿ 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಜು.31ರಂದು ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಸುಂದರ ಪೂಜಾರಿ ಪಳಂಬೆ ಇವರಿಗೆ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಪುತ್ತೂರು ಘಟಕದ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು ಮುತ್ತು, ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ, ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ತುಳು ವರ್ಲ್ಡ್ ಫೌಂಡೇಶನ್ ತುಳುವ ಮಹಾಸಭೆ ಪುತ್ತೂರು ಘಟಕದ ಸಹಯೋಗದಲ್ಲಿ ಸ್ವಾಗತ ಕೋರಿ ಸನ್ಮಾನಿಸಲಾಯಿತು.



ಮಂಗಳೂರಿನಿಂದ ಆಗಮಿಸಿದ ಯೋಧ ಸುಂದರ ಪೂಜಾರಿಯವರನ್ನು ಕಲ್ಲೇಗದಲ್ಲಿ ಹೂಹಾರ ಹಾಕಿ ಸ್ವಾಗತಿಸಲಾಯಿತು. ಬಳಿಕ ಕಲ್ಲೇಗ ಭಾರತ ಮಾತಾ ಸಮುದಾಯ ಭವನದಲ್ಲಿ ಮಹಿಳೆಯರು ಆರತಿ ಬೆಳಗಿ ತಿಲಕವಿಟ್ಟು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರನ್ನು ದಂಪತಿ ಸಮೇತ ಸನ್ಮಾನಿಸಲಾಯಿತು.

ನನಗೆ ನೀಡಿದ ಗೌರವ ಭಾರತ ಮಾತೆಗೆ ಅರ್ಪಣೆ:
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಂದರ ಪೂಜಾರಿಯವರು 1992ರಲ್ಲಿ ಸೈನ್ಯಕ್ಕೆ ಸೇರಿ ಒಟ್ಟು 34 ವರ್ಷ ಸೇವೆ ಸಲ್ಲಿಸಿದ್ದೇನೆ. ಸೈನಿಕರ ಜೀವನ ಸುಲಭ ಇಲ್ಲ. ಕಠಿಣ ಇದೆ. ಸೈನ್ಯದಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ನನ್ನ ಹೆಂಡತಿ, ಮಕ್ಕಳು ಹಾಗೂ ಕುಟುಂಬದವರು ತುಂಬಾ ಸಹಕಾರ ನೀಡಿದ್ದಾರೆ. ನನ್ನ ಸೇವೆಯನ್ನು ಗುರುತಿಸಿ ನೀವು ಮಾಡಿದ ಸನ್ಮಾನವನ್ನು ಭಾರತ ಮಾತೆಗೆ ಅರ್ಪಣೆ ಮಾಡುತ್ತೇನೆ ಎಂದರು. ಸೇನೆಯಲ್ಲಿ ಸೇವೆ ಸಲ್ಲಿಸಲು ಶಿಶ್ತು, ಪ್ರಾಮಾಣಿಕತೆ ಮುಖ್ಯ. ಇಂದು ದೇಶ ಸೇವೆಗೆ ಸೇರುವ ಯುವಕರು ಕಡಿಮೆ ಆಗಿದ್ದಾರೆ. ಒಂದು ಮನೆಯಿಂದ ಕನಿಷ್ಟ ಒಬ್ಬರಾದರೂ ಸೇನೆಗೆ ಸೇರುವ ಗುರಿ ಹೊಂದಬೇಕು. ಸೇನೆಯಲ್ಲಿ ಸಾವಿಗೆ ಹೆದರುವ ಅಗತ್ಯ ಇಲ್ಲ. ಸಾವು ಎಲ್ಲಾದರೂ ಬರುತ್ತದೆ ಎಂದ ಅವರು ನಮ್ಮ ಯುವಕರು ಸೇನೆಗೆ ಸೇರುವಂತೆ ನಾವು ಪ್ರೋತ್ಸಾಹ ನೀಡಬೇಕು ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.
ಯುವಕರು ದೇಶ ಸೇವೆ ಮಾಡಲು ಇದು ಪ್ರೇರಣೆಯಾಗಲಿ:
ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಪುತ್ತೂರು ಘಟಕದ ಗೌರವಾಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ ಮಾತನಾಡಿ, ಸುಂದರ ಪೂಜಾರಿಯವರು 34 ವರ್ಷ ರಾಷ್ಟ್ರ ರಕ್ಷಣೆ ಕೆಲಸ ಮಾಡಿದ್ದಾರೆ ಇದು ನಮಗೆ ಹೆಮ್ಮೆ. ಅವರು ಕೊಡೀಪ್ಪಾಡಿಯವರು. ಅಲ್ಲಿನ ಯುವಕರು ಕಲ್ಲೇಗ ಕಲ್ಕುಡ ದೈವಸ್ಥಾನದ ಕೆಲಸದಲ್ಲಿ ಭಾಗಿಯಾಗುತ್ತಾರೆ. ಅವರಿಗೆ ನೀಡಿದ ಸನ್ಮಾನ ನಮ್ಮ ಯುವಕರು ದೇಶ ಸೇವೆ ಮಾಡಲು ಪ್ರೇರಣೆ ಆಗಬೇಕು. ಇಂತಹ ಕಾರ್ಯಕ್ರಮಗಳಿಂದ ಯುವಕರಿಗೆ ಸ್ಫೂರ್ತಿ ಬರುತ್ತದೆ. ಆದರೆ ನಮ್ಮವರು ಸೈನ್ಯಕ್ಕೆ ಸೇರಲು ಹಿಂದೇಟು ಹಾಕುತ್ತಾರೆ. ಉತ್ತರ ಭಾರತದವರ ಹಾಗೆ ನಾವೂ ದೇಶ ಸೇವೆಯಲ್ಲಿ ಮುಂದೆ ಇದ್ದೇವೆ ಎಂಬುದನ್ನು ತೋರಿಸಬೇಕು ಎಂದು ಹೇಳಿದರು.
ಕಲ್ಲೇಗ ಕಲ್ಕುಡ ದೈವಸ್ಥಾನದ ಆಡಳಿತ ಮೊಕ್ತೇಸರ ಅಜಿತ್ ಕುಮಾರ್ ಜೈನ್, ಲಯನ್ಸ್ ಕ್ಲಬ್ ಪುತ್ತೂರು ಕಾರ್ಯದರ್ಶಿ ಆನಂದ ಆಚಾರ್ಯ, ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಅಧ್ಯಕ್ಷೆ ಲೀನಾ ಮಚಾದೋ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಶಿವರಾಮ ಗೌಡ, ತುಳು ವರ್ಲ್ಡ್ ಫೌಂಡೇಶನ್ ತುಳುವ ಮಹಾಸಭೆ ಪುತ್ತೂರು ಘಟಕ ಉಪಾಧ್ಯಕ್ಷೆ ನಯನಾ ಬಿ. ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಪುತ್ತೂರು ಮುತ್ತು ಅಧ್ಯಕ್ಷ ದಯಾನಂದ ರೈ ಕೋರ್ಮಂಡ ಸುಂದರ ಪೂಜಾರಿಯವರ ವ್ಯಕ್ತಿ ಪರಿಚಯ ಮಾಡಿದರು. ಶಂಕರಿ ಶರ್ಮ ಪ್ರಾರ್ಥಿಸಿ, ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಸ್ವಾಗತಿಸಿ, ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮನವಳಿಕೆ ವಂದಿಸಿದರು. ಶಿಕ್ಷಕಿ ಯಶುಭ ರೈ ಕಾರ್ಯಕ್ರಮ ನಿರೂಪಿಸಿದರು. ಸುಂದರ ಪೂಜಾರಿ ಹಾಗೂ ಜಯಕುಮಾರ್ ಕೆದಿಲರವರ ಕುಟುಂಬ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಯೋಧ ಸುಂದರ ಪೂಜಾರಿಯವರಿಗೆ ಸನ್ಮಾನ
ಸುಂದರ ಪೂಜಾರಿ ಹಾಗೂ ಅವರ ಪತ್ನಿ ಪಟ್ಟೆ ಪ್ರತಿಭಾ ಪ್ರೌಢಶಾಲಾ ಶಿಕ್ಷಕಿ, ಭವಿತಾ ಪಳಂಬೆ ದಂಪತಿಯನ್ನು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಪುತ್ತೂರು ಘಟಕದ ವತಿಯಿಂದ ಶಾಲು, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಬಳಿಕ ಲಯನ್ಸ್ ಕ್ಲಬ್ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ತುಳು ವರ್ಲ್ಡ್ ಫೌಂಡೇಶನ್ ತುಳುವ ಮಹಾಸಭೆ ಪುತ್ತೂರು ಘಟಕದಿಂದ ಸನ್ಮಾನಿಸಲಾಯಿತು.
ಗೌರವಾರ್ಪಣೆ:
ಸುಂದರ ಪೂಜಾರಿಯವರ ಸಹೋದರ, 22 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹವಾಲ್ದಾರ್ ಜಯಕುಮಾರ್ ಕೆದಿಲವರನ್ನು ಶಾಲು, ಹೂ ನೀಡಿ ಗೌರವಿಸಲಾಯಿತು.










