







ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಆಶ್ರಯದಲ್ಲಿ ಬನ್ನಂಜೆ ಗೋವಿಂದಾಚಾರ್ಯ ಅವರ 90ನೇ ಜನ್ಮದಿನದ ಪ್ರಯುಕ್ತ ನಡೆದ ಮೂರು ದಿನಗಳ ‘ವಿಶ್ವನಮನ’ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.


ಬನ್ನಂಜೆ ಬಹುಮುಖಗಳ ಗುಣಗಾನ, ಒಡನಾಟದ ನೆನಪು, ಯಕ್ಷಗಾನ, ಚಿತ್ರ-ಕಲಾ ಪ್ರದರ್ಶನ, ಗೀತಗಾಯನ, ಅಧ್ಯಾತ್ಮ ಚಿಂತನೆ, ‘ಇಂದು ಎನಗೆ ಗೋವಿಂದ’ ಚಿತ್ರ ಪ್ರದರ್ಶನ ಮತ್ತು ಗೋವಿಂದ ರಥಯಾತ್ರೆ ಮೂಲಕ ಬನ್ನಂಜೆ-90ರ ಭಾವಪ್ರಪಂಚ ಅನಾವರಣಗೊಂಡಿತು.



ಚಾಮರಾಜಪೇಟೆಯ ಕಲಾವಿದರ ಸಂಘದಿಂದ ಗಾಯನ ಸಮಾಜದವರೆಗೆ ಬನ್ನಂಜೆ ಅವರ ಭಾವಚಿತ್ರದ ರಥಯಾತ್ರೆಯನ್ನು ಅಭಿಮಾನಿಗಳು ಸ್ವಾಗತಿಸಿದರು.ಸಮಾರೋಪದಲ್ಲಿ ನಿವೃತ್ತ ನ್ಯಾಯಾಧೀಶ ಕೃಷ್ಣ ದೀಕ್ಷಿತ್, ವಿಶ್ವಸಂತೋಷ ಭಾರತಿ ಸ್ವಾಮೀಜಿ, ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಮೂಡುಬಿದಿರೆ ದಿಗಂಬರ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಇಸ್ಕಾನ್ ಹಿರಿಯ ಉಪಾಧ್ಯಕ್ಷ ಚಂಚಲಪತಿದಾಸರು ಉಪಸ್ಥಿತರಿದ್ದರು.

ಗಣ್ಯರ ನುಡಿಗಳು:
ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಕಾಣಿಯೂರು ಮಠ, ಉಡುಪಿ: “ಬನ್ನಂಜೆಯವರು ಜ್ಞಾನ ಪರಂಪರೆಯ ದೊಡ್ಡ ವಜ್ರ. ಬನ್ನಂಜೆಯವರು ಬದುಕಿದ್ದಾಗ ಅವರ ಮಹತ್ವ ನಮಗೆ ಗೊತ್ತಾಗಲಿಲ್ಲ. ಹಿಂದೂ ಸಮಾಜಕ್ಕೆ ಅವರ ಕೊಡುಗೆ ಮರೆಯಲಾಗದು.
“ಕೃಷ್ಣ ದೀಕ್ಷಿತ್, ಒರಿಸ್ಸಾದ ನಿವೃತ್ತ ನ್ಯಾಯಾಧೀಶರು: “ಭಾರತ ಮತ್ತು ಹಿಂದೂ ಧರ್ಮ ಬಹಳ ಸಂದಿಗ್ಧ ಮತ್ತು ಸಂಘರ್ಷದ ಸಂದರ್ಭದಲ್ಲಿ ಇವೆ. ಹಿಂದೂ ಎಂದು ಹೇಳಿಕೊಳ್ಳಲು ಆತಂಕದ ಪರಿಸ್ಥಿತಿಯಿದೆ. ಇಂಥ ಸಂದರ್ಭದಲ್ಲಿ ಬನ್ನಂಜೆಯವರು ಮತ್ತೆ ಹುಟ್ಟಿ ಬರಬೇಕು.
“ಚಂಚಲಪತಿದಾಸರು, ಹಿರಿಯ ಉಪಾಧ್ಯಕ್ಷರು, ಇಸ್ಕಾನ್, ಬೆಂಗಳೂರು: “ಇಸ್ಕಾನ್ ಒಳಗೆ ಸಾಂಸ್ಥಿಕ ಭಿನ್ನಾಭಿಪ್ರಾಯಗಳು ಎದುರಾದಾಗ ಬನ್ನಂಜೆಯವರು ತಾತ್ವಿಕವಾಗಿ ಮತ್ತು ಸೈದ್ಧಾಂತಿಕ ದಾಖಲೆಗಳನ್ನು ಪ್ರಸ್ತುತಪಡಿಸಲು ನೆರವಾಗಿದ್ದರು. ಇಂದು ಆ ಎಲ್ಲ ಭಿನ್ನಾಭಿಪ್ರಾಯಗಳು ಬಗೆಹರಿದಿವೆ. ಇಸ್ಕಾನ್ ಜೊತೆಗೆ ಬನ್ನಂಜೆಯವರದ್ದು ಅವಿನಾಭಾವ ಸಂಬಂಧವಿತ್ತು.
“ವಿಶ್ವಸಂತೋಷ ಭಾರತಿ ಸ್ವಾಮೀಜಿ, ಬಾರ್ಕೂರು ಮಹಾ ಸಂಸ್ಥಾನ: “ಇದು ಸಾರಸ್ವತ ಲೋಕದ ಉತ್ಕೃಷ್ಟ ಸಭೆ. ನನಗೆ ಈಗ ಇರುವ ಹೆಸರನ್ನು ಸಂಕಲ್ಪ ಮಾಡಿದವರು ಬನ್ನಂಜೆ ಗೋವಿಂದಾಚಾರ್ಯರು.”ಮೂಡುಬಿದಿರೆ ಚಾರುಕೀರ್ತಿ ಭಟ್ಟಾರಕರು ಬನ್ನಂಜೆಯನ್ನು ’21ನೇ ಶತಮಾನದ ಪೂರ್ವಾರ್ಧದ ಆಧುನಿಕ ವಿವೇಕಾನಂದರು’ ಎಂದು ಬಣ್ಣಿಸಿದರು.
ಕಾಡಸಿದ್ದೇಶ್ವರ ಸ್ವಾಮೀಜಿ ‘ಬನ್ನಂಜೆಯವರು ನ್ಯಾಯನಿಷ್ಠುರಿ’ ಎಂದು ನುಡಿದರು.ಆರ್ಎಸ್ಎಸ್ ಸಹ ಕಾರ್ಯವಾಹಕ ಸಿ.ಆರ್. ಮುಕುಂದ, ಗುರುರಾಜ ಕರಜಗಿ, ಶತಾವಧಾನಿ ಆರ್. ಗಣೇಶ್, ಡಾ.ಉಷಾ ಚಡಗ, ಎಂ.ಎ. ಆಳ್ವಾರ್, ರಮೇಶ್ ಭಟ್, ವೈ.ಎ. ದಂತಿ, ಕೆ.ಎಲ್. ಉಪಾಧ್ಯಾಯ, ಪ್ರತಿಷ್ಠಾನದ ಮುಖ್ಯ ಟ್ರಸ್ಟಿ ವೀಣಾ ಬನ್ನಂಜೆ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಮಲ್ಲೇಪುರಂ ಜಿ. ವೆಂಕಟೇಶ್ ಸ್ವಾಗತಿಸಿದರು.










