ನಿವೃತ್ತ ಯೋಧ ಪಳಂಬೆ ಸುಂದರ ಪೂಜಾರಿಯವರಿಗೆ ಅದ್ದೂರಿ ಸ್ವಾಗತ- ಸನ್ಮಾನ ಕಾರ್ಯಕ್ರಮ

0

ಕೌಡಿಚ್ಚಾರ್ ಜಂಕ್ಷನ್‌ನಿಂದ ಮುಡಿಪಿನಡ್ಕ ಜಂಕ್ಷನ್ ವರೆಗೆ ಮೆರವಣಿಗೆ

ಬಡಗನ್ನೂರು: ಭಾರತದ ಗಡಿ ಭದ್ರತಾ ಪಡೆಯಲ್ಲಿ 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಜು.31ರಂದು ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಸುಂದರ ಪೂಜಾರಿ ಪಳಂಬೆ ಹಾಗೂ ಪತ್ನಿ ಪಟ್ಟೆ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳ ಶಿಕ್ಷಕಿ ಭವಿತಾ ದಂಪತಿಗೆ ಕೌಡಿಚ್ಚಾರ್ ಜಂಕ್ಷನ್‌ನಲ್ಲಿ ಅಭೂತಪೂರ್ವ ಸ್ವಾಗತ ಕೋರಲಾಯಿತು.

ಕೌಡಿಚ್ಚಾರ್ ಜಂಕ್ಷನ್‌ನಿಂದ ಮುಡಿಪಿನಡ್ಕ ಜಂಕ್ಷನ್ ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು. ಬಳಿಕ ಮುಡಿಪಿನಡ್ಕ ಜಂಕ್ಷನ್‌ನಿಂದ ಪಳಂಬೆ ಯಶಸ್ವಿನಿ ನಿಲಯದವರೆಗೆ ಸಿಂಗಾರಿಮೇಳದೊಂದಿಗೆ ಪಾದಯಾತ್ರೆ ಹಾಗೂ ಸಿಡಿಮದ್ದು ಪ್ರದರ್ಶನದ ಮೂಲಕ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.ಪುತ್ತೂರಿನಲ್ಲಿ ಸ್ವಾಗತ ಪಡೆದು ಆಗಮಿಸಿದ ಯೋಧ ಸುಂದರ ಪೂಜಾರಿಯವರನ್ನು ಕೌಡಿಚ್ಚಾರ್ ಜಂಕ್ಷನ್‌ನಲ್ಲಿ ಹೂಹಾರ ಹಾಕಿ ಸ್ವಾಗತಿಸಲಾಯಿತು. ಬಳಿಕ ಪಳಂಬೆ ಯಶಸ್ವಿನಿ ನಿಲಯದಲ್ಲಿ ಹೆಂಗಳೆಯರು ಆರತಿ ಬೆಳಗಿ, ತಿಲಕವಿಟ್ಟು ಮನೆಯೊಳಗೆ ಕರೆತರಲಾಯಿತು.

ಗೌರವಾರ್ಪಣೆ ಕಾರ್ಯಕ್ರಮ
ನಂತರ ನಡೆದ ಕಾರ್ಯಕ್ರಮದಲ್ಲಿ ಸುಂದರ ಪೂಜಾರಿ ದಂಪತಿಗೆ ಊರವರು, ಬಂಧುಮಿತ್ರರು, ಹಿತೈಷಿಗಳು ಹೂಗುಚ್ಚ, ಹಾರ ಹಾಕಿ ಗೌರವಾರ್ಪಣೆ ಮಾಡಿದರು.ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ಸುಂದರ ಪೂಜಾರಿ ಅವರು, “ಸೈನ್ಯದಲ್ಲಿ 34 ವರ್ಷ ಸೇವೆ ಸಲ್ಲಿಸಿದ್ದೇನೆ. ಸೈನಿಕರ ಜೀವನ ಸುಲಭವಲ್ಲ, ಕಠಿಣವಾಗಿದೆ. ಸೈನ್ಯದಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ನೀವು ಮಾಡಿದ ಗೌರವಾರ್ಪಣೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿದೆ. ನಾವು ಇಲ್ಲಿ ನಿಂತು ಭಾರತಾಂಬೆಗೆ ಜಯಕಾರ ಹೇಳಿದರೆ ಸಾಲದು. ಯುವಕರು ಸೇನೆಗೆ ಸೇರಲು ಪ್ರೋತ್ಸಾಹ ನೀಡಬೇಕು” ಎಂದು ಕೃತಜ್ಞತೆ ಸಲ್ಲಿಸಿದರು.ನಿವೃತ್ತ ಯೋಧ ಸುಬ್ಬಪ್ಪ ಪಾಟಾಳಿ ಪಟ್ಟೆ ಅವರು ಮಾತನಾಡಿ, “ಸೈನಿಕ ವೃತ್ತಿ ಸುಲಭವಲ್ಲ. ಹಿಂದೆ ಬಹಳಷ್ಟು ಕಷ್ಟ ಅನುಭವಿಸಿದ್ದೇವೆ. ಈಗ ಮೊಬೈಲ್ ಇರುವುದರಿಂದ ಸಂಪರ್ಕ ಸುಲಭವಾಗಿದೆ. ಹೆಚ್ಚು ಹೆಚ್ಚು ಯುವಕರು ಸೈನ್ಯಕ್ಕೆ ಸೇರಲು ಮುಂದಾಗಬೇಕು” ಎಂದು ಹೇಳಿ ಶುಭ ಹಾರೈಸಿದರು.

ಸನ್ಮಾನ
ಸುಂದರ ಪೂಜಾರಿ ಹಾಗೂ ಪತ್ನಿ ಭವಿತಾ ಪಳಂಬೆ ದಂಪತಿಯನ್ನು ಮುಡಿಪಿನಡ್ಕ ಶ್ರೀ ಕೃಷ್ಣ ಭಜನಾ ಮಂದಿರದ ವತಿಯಿಂದ ಶಾಲು, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸುಂದರ ಪೂಜಾರಿಯವರ ಸಹೋದರ, 22 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹವಾಲ್ದಾರ್ ಜಯಕುಮಾರ್ ಕೆದಿಲ ಹಾಗೂ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಸುಬ್ಬಪ್ಪ ಪಾಟಾಳಿ ಅವರನ್ನು ಹೂಹಾರ ಹಾಕಿ ಗೌರವಿಸಲಾಯಿತು.

ನಿಡ್ಪಳ್ಳಿ ಶಾಂತದುರ್ಗಾ ದೇವಸ್ಥಾನದ ಅಧ್ಯಕ್ಷ ನಾಗೇಶ್ ಗೌಡ ಪುಳಿತ್ತಡಿ, ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಅವರು ಶುಭ ಹಾರೈಸಿದರು. ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಶಿಕ್ಷಕಿ ಭವಿತಾ ಸ್ವಾಗತಿಸಿ, ವಂದಿಸಿದರು. ಚಂದ್ರಶೇಖರ ಸಾಲಿಯಾನ್ ಕಾರ್ಯಕ್ರಮ ಆಯೋಜಿಸಿದರು. ಪ್ರಜ್ಞಾ ಓಡಿಲ್ನಾಳ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸುಮಾರು 350ಕ್ಕೂ ಮಿಕ್ಕಿ ಗಣ್ಯರು, ಬಂಧುಮಿತ್ರರು, ಹಿತೈಷಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿ ಸಹಭೋಜನ ಸ್ವೀಕರಿಸಿದರು.ಯೋಧ ಸುಂದರ ಪೂಜಾರಿ ಅವರು ತಮ್ಮ 34 ವರ್ಷದ ಸೇವೆಯನ್ನು ಕೇಕ್ ಕತ್ತರಿಸಿ ಕುಟುಂಬದ ಸದಸ್ಯರೊಂದಿಗೆ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here